ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

6 ವರ್ಷಗಳ ಬಳಿಕ ಮತ್ತೆ ಒಂದಾದ ಬಿಜೆಪಿ–ಅಕಾಲಿದಳ ; 2027ರ ಪಂಜಾಬ್ ವಿಧಾನಸಭೆ ಚುನಾವಣೆಗೂ ಮುನ್ನ ಮೈತ್ರಿ ಘೋಷಣೆ

ನವದೆಹಲಿ: 2027ರಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಯನ್ನು ಒಟ್ಟಾಗಿ ಎದುರಿಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಶಿರೋಮಣಿ ಅಕಾಲಿದಳ (ಎಸ್‌ಎಡಿ) ಮತ್ತೆ ಕೈಜೋಡಿಸಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಾಗೂ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಅವರು ಮಂಗಳವಾರ (ನವೆಂಬರ್ 24) ರಾಜಕೀಯ ಮೈತ್ರಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಗುರು ಪೂರಬ್ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ-ಅಕಾಲಿ ದಳದ ಮೈತ್ರಿಯ ಘೋಷಣೆಯನ್ನು ಮಾಡಲಾಯಿತು.ಹಳೆಯ ಮಿತ್ರರು ಮತ್ತೆ ಒಂದಾಗಲಿದ್ದಾರೆ ಎಂಬ ಬಗ್ಗೆ ವಾರಗಳ ಕಾಲ ನಡೆದ ತೀವ್ರ ಊಹಾಪೋಹಗಳ ನಂತರ ಈ ಘೋಷಣೆ ಹೊರಬಿದ್ದಿದೆ.
ಒಂದು ಕಾಲದಲ್ಲಿ ದೀರ್ಘಕಾಲದ ರಾಜಕೀಯ ಮಿತ್ರಪಕ್ಷಗಳಾಗಿದ್ದ ಬಿಜೆಪಿ ಮತ್ತು ಅಕಾಲಿದಳ, 2020ರ ಸೆಪ್ಟೆಂಬರ್‌ನಲ್ಲಿ ತಮ್ಮ ಮೈತ್ರಿಯನ್ನು ಮುರಿದುಕೊಂಡಿದ್ದವು. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳ ವಿಚಾರದಲ್ಲಿ ಉಭಯ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ರೈತರ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಬಳಿಕ ಮೋದಿ ಸರ್ಕಾರ ಈ ಮೂರು ಕಾಯ್ದೆಗಳನ್ನು ಹಿಂಪಡೆದಿತ್ತು. ಆದರೆ, ಅದಕ್ಕೂ ಮೊದಲೇ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಅಕಾಲಿದಳ ಬಿಜೆಪಿಯೊಂದಿಗಿನ ಮೈತ್ರಿಯಿಂದ ಹೊರಬಂದಿತ್ತು.

ಪ್ರಮುಖ ಸುದ್ದಿ :-   ಪ್ರಿಯತಮೆಯನ್ನು ಹೊಡೆದು ಕೊಂದ ಟೆಕ್ಕಿ; ರಾತ್ರಿಯಿಡೀ ಶವದ ಪಕ್ಕದಲ್ಲೇ ಕುಳಿತಿದ್ದ, ನಂತರ ಆಂಬುಲೆನ್ಸ್‌ಗಾಗಿ ಪೊಲೀಸರಿಗೆ ಕರೆ !

ಇತ್ತೀಚಿನ ದಿನಗಳಲ್ಲಿ ಎರಡೂ ಪಕ್ಷಗಳ ನಾಯಕರು ಮತ್ತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯ ಬಗ್ಗೆ ಪರೋಕ್ಷ ಸುಳಿವುಗಳನ್ನು ನೀಡುತ್ತಿದ್ದರು. ಅದರಲ್ಲೂ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಂಜಾಬ್‌ನಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದು, ಬಿಜೆಪಿ ಮತ್ತು ಅಕಾಲಿದಳ ಮತ್ತೆ ಒಂದಾಗಲಿವೆ ಎಂಬ ರಾಜಕೀಯ ಊಹಾಪೋಹಗಳಿಗೆ ಹೆಚ್ಚಿನ ಬಲ ನೀಡಿತ್ತು. ಇದೀಗ ಉಭಯ ಪಕ್ಷಗಳು ಮೈತ್ರಿ ಘೋಷಿಸುವ ಮೂಲಕ ಈ ಊಹಾಪೋಹಗಳಿಗೆ ತೆರೆ ಎಳೆದಿವೆ.
ಬಿಜೆಪಿ ಮತ್ತು ಅಕಾಲಿದಳದ ನಡುವಿನ ರಾಜಕೀಯ ಮೈತ್ರಿ ದಶಕಗಳಷ್ಟು ಹಳೆಯದು. ಎರಡೂ ಪಕ್ಷಗಳು ಈ ಹಿಂದೆ ಆರು ಲೋಕಸಭಾ ಚುನಾವಣೆಗಳಲ್ಲಿ (1998, 1999, 2004, 2009, 2014 ಮತ್ತು 2019) ಹಾಗೂ ಐದು ಪಂಜಾಬ್ ವಿಧಾನಸಭೆ ಚುನಾವಣೆಗಳಲ್ಲಿ (1997, 2002, 2007, 2012 ಮತ್ತು 2017) ಒಟ್ಟಾಗಿ ಸ್ಪರ್ಧಿಸಿದ್ದವು.
ಆದರೆ, 2020ರಲ್ಲಿ ಮೈತ್ರಿ ಮುರಿದುಬಿದ್ದ ಬಳಿಕ 2022ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಕಣಕ್ಕಿಳಿದಿದ್ದವು. ಈ ಚುನಾವಣೆಯಲ್ಲಿ ಅಕಾಲಿದಳ ತನ್ನ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಕಳಪೆ ಸಾಧನೆ ಮಾಡಿದ್ದು, ಕೇವಲ ಮೂರು ಸ್ಥಾನಗಳನ್ನು ಗೆಲ್ಲಲಷ್ಟೇ ಶಕ್ತವಾಗಿತ್ತು. ಬಿಜೆಪಿ ಕೂಡ ಕೇವಲ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

ಪ್ರಮುಖ ಸುದ್ದಿ :-   ನೇಪಾಳದ ಪುನರ್‌ನಿರ್ಮಾಣಕ್ಕೆ 15,000 ಕೋಟಿ ರೂ. ನೆರವು ಘೋಷಿಸಿದ ಭಾರತ : ಎಂಟು ಮಹತ್ವದ ಒಪ್ಪಂದಗಳಿಗೆ ಸಹಿ

ಇದಕ್ಕೂ ಮೊದಲು 2017ರ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಿದ್ದ ಅಕಾಲಿದಳ 15 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಆದರೆ, 2022ರಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದಾಗ ಎರಡೂ ಪಕ್ಷಗಳ ಬಲ ಗಣನೀಯವಾಗಿ ಕುಸಿದಿತ್ತು.
2024ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿಯೂ ಬಿಜೆಪಿ ಮತ್ತು ಅಕಾಲಿದಳ ಮತ್ತೆ ಮೈತ್ರಿ ಮಾಡಿಕೊಳ್ಳಲಿವೆ ಎಂಬ ವರದಿಗಳು ಹಾಗೂ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗಳು ನಡೆದಿದ್ದವು. ಆದರೆ, ಕೊನೆಯ ಕ್ಷಣದಲ್ಲಿ ಆ ಮೈತ್ರಿ ಕಾರ್ಯರೂಪಕ್ಕೆ ಬಂದಿರಲಿಲ್ಲ. ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಅಕಾಲಿದಳ ಪಂಜಾಬ್‌ನಲ್ಲಿ ಕೇವಲ ಒಂದು ಲೋಕಸಭಾ ಕ್ಷೇತ್ರವನ್ನು ಗೆದ್ದುಕೊಂಡರೆ, ಬಿಜೆಪಿಗೆ ರಾಜ್ಯದಲ್ಲಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ 2027ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎರಡೂ ಪಕ್ಷಗಳು ಮತ್ತೆ ಮೈತ್ರಿ ಮಾಡಿಕೊಂಡಿರುವುದು ಪಂಜಾಬ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement