ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಇಂಡಿಯಾ ಮೈತ್ರಿಕೂಟಕ್ಕೆ ಮತ್ತೊಂದು ಹಿನ್ನಡೆ ? : ಡಿಲಿಮಿಟೇಶನ್‌ ಮಸೂದೆಗೆ ಜೆಎಂಎಂ ಬೆಂಬಲ ಸಾಧ್ಯತೆ

ನವದೆಹಲಿ: ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ (delimitation) ಪ್ರಕ್ರಿಯೆಗೆ ವಿರೋಧ ಪಕ್ಷಗಳ ಬೆಂಬಲ ಕ್ರೋಡೀಕರಿಸಲು ಕಾಂಗ್ರೆಸ್ ನಡೆಸುತ್ತಿರುವ ಪ್ರಯತ್ನಗಳಿಗೆ ಮತ್ತೊಂದು ಹಿನ್ನಡೆಯಾಗುವ ಸಾಧ್ಯತೆಯಿದೆ. ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೆನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ಬೆಂಬಲಿಸುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿಗಳು ತಿಳಿಸಿವೆ.
ಪ್ರಸ್ತಾವಿತ ಮಸೂದೆಗೆ ಬೆಂಬಲ ಘೋಷಿಸಿರುವ ಡಿಎಂಕೆ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವೊಲಿಸಲು ಇಂಡಿಯಾ ಮೈತ್ರಿಕೂಟದ ಪ್ರಮುಖ ನಾಯಕರ ನಿಯೋಗ ಚೆನ್ನೈಗೆ ತೆರಳಿದ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.
ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಜೆಎಂಎಂ, ಕ್ಷೇತ್ರ ಪುನರ್ವಿಂಗಡಣೆ (delimitation)ಮತ್ತು ಮಹಿಳಾ ಮೀಸಲಾತಿ ಮಸೂದೆಗಳ ಕುರಿತು ಈವರೆಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಪ್ರಸ್ತಾವಿತ ಮಸೂದೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ಅದರಿಂದ ಜಾರ್ಖಂಡ್ ರಾಜ್ಯದ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನು ಅಂದಾಜಿಸಿದ ಬಳಿಕ ಒಂದು ಅಥವಾ ಎರಡು ದಿನಗಳಲ್ಲಿ ತನ್ನ ನಿಲುವು ಪ್ರಕಟಿಸುವುದಾಗಿ ಪಕ್ಷ ಶನಿವಾರ ತಿಳಿಸಿತ್ತು.

ಆದರೆ, ಜೆಎಂಎಂ ಅಂತಿಮವಾಗಿ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ಬೆಂಬಲಿಸುವ ಸಾಧ್ಯತೆಯಿದೆ ಎಂಬ ಮಾಹಿತಿ ಕಾಂಗ್ರೆಸ್ ಪಕ್ಷದ ಆತಂಕವನ್ನು ಹೆಚ್ಚಿಸಿದೆ. ಈಗಾಗಲೇ ಕೇಂದ್ರ ಸರ್ಕಾರ ಮತ್ತು ಹಲವು ವಿರೋಧ ಪಕ್ಷಗಳ ನಡುವಿನ ಪ್ರಮುಖ ರಾಜಕೀಯ ಸಂಘರ್ಷದ ವಿಷಯವಾಗಿರುವ ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಇಂತಹ ಸಂದರ್ಭದಲ್ಲಿ ಮೈತ್ರಿಕೂಟದೊಳಗೆ ಒಡಕು ಉಂಟಾಗುವ ಸಾಧ್ಯತೆ ಎದುರಾಗಿದೆ.
ಜೆಎಂಎಂ ಪಕ್ಷದಲ್ಲಿ ಒಟ್ಟು ಆರು ಸಂಸದರು ಇದ್ದಾರೆ. ಅವರಲ್ಲಿ ಮೂವರು ಲೋಕಸಭೆ ಸದಸ್ಯರಾಗಿದ್ದರೆ, ಮೂವರು ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಜಾರ್ಖಂಡ್ ರಾಜ್ಯದಲ್ಲಿ ಒಟ್ಟು 14 ಲೋಕಸಭಾ ಕ್ಷೇತ್ರಗಳಿದ್ದು, ಅವುಗಳಲ್ಲಿ ಐದು ಕ್ಷೇತ್ರಗಳು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಮೀಸಲಾಗಿವೆ. ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಶೇ.50ರಷ್ಟು ಕ್ಷೇತ್ರಗಳ ಹೆಚ್ಚಳ ಜಾರಿಯಾದರೆ ಜಾರ್ಖಂಡ್‌ನ ಲೋಕಸಭಾ ಕ್ಷೇತ್ರಗಳ ಸಂಖ್ಯೆ 21ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿರುವ ಕ್ಷೇತ್ರಗಳ ಸಂಖ್ಯೆಯೂ ಹೆಚ್ಚಾಗಬಹುದು ಎಂಬ ನಿರೀಕ್ಷೆಯನ್ನು ಜೆಎಂಎಂ ಹೊಂದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೇ ಎನ್‌ಸಿಪಿಯ ಶರದ್ ಪವಾರ್ ಬಣವೂ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಗೆ ಬೆಂಬಲ ಪ್ರಕಟಿಸಿರುವುದು ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆಯಾಗಿತ್ತು. ಇದೀಗ ಜೆಎಂಎಂ ಕೂಡ ಕೇಂದ್ರದ ಪ್ರಸ್ತಾವನೆಯನ್ನು ಬೆಂಬಲಿಸುವ ಸಾಧ್ಯತೆ ವ್ಯಕ್ತವಾಗಿರುವುದು ಕಾಂಗ್ರೆಸ್‌ಗೆ ಮತ್ತಷ್ಟು ಆತಂಕ ಎದುರಾಗಬಹುದು.

ಪ್ರಮುಖ ಸುದ್ದಿ :-   ಡಿಲಿಮಿಟೇಷನ್‌ ಮಸೂದೆ ; ಅಂದು ವಿರೋಧಿಸಿದ್ದ ಸ್ಟಾಲಿನ್‌, ಶರದ್‌ ಪವಾರರನ್ನು ಬಿಜೆಪಿ ಒಪ್ಪಿಸಿದ್ದು ಹೇಗೆ? ಕಾಂಗ್ರೆಸ್‌ ಕಂಗಾಲಾಗಿದ್ದು ಯಾಕೆ ?

ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣದ ನಡುವೆ ಭಿನ್ನಾಭಿಪ್ರಾಯಗಳಿದ್ದರೂ, ಕಾಂಗ್ರೆಸ್ ಪಕ್ಷವು ಎನ್‌ಸಿಪಿ (ಎಸ್‌ಪಿ) ಜೊತೆಗಿನ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಳ್ಳುವ ಪ್ರಯತ್ನ ಮಾಡಿಲ್ಲ. ಏಕೆಂದರೆ, ಶರದ್ ಪವಾರ್ ನೇತೃತ್ವದ ಪಕ್ಷವು ಇಂಡಿಯಾ ಮೈತ್ರಿಕೂಟದ ಪ್ರಮುಖ ಅಂಗಪಕ್ಷವಾಗಿದೆ.
ಈ ನಡುವೆ, ಪ್ರಸ್ತಾವಿತ ಮಸೂದೆಗಳಲ್ಲಿನ ಅಂಶಗಳನ್ನು ಪರಿಶೀಲಿಸುವ ಉದ್ದೇಶದಿಂದ ಶನಿವಾರ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಅಧಿಕೃತ ನಿವಾಸದಲ್ಲಿ ಜೆಎಂಎಂ ಸಂಸದರ ಸಭೆ ನಡೆಯಿತು. ಸಭೆಯಲ್ಲಿ ಮಸೂದೆಯಲ್ಲಿನ ಪ್ರಸ್ತಾವನೆಗಳು ಜಾರ್ಖಂಡ್ ರಾಜ್ಯದ ಹಿತಾಸಕ್ತಿಗಳನ್ನು ಕಾಪಾಡಲಿವೆಯೇ ಎಂಬುದರ ಕುರಿತು ಚರ್ಚಿಸಲಾಯಿತು. ವಿಶೇಷವಾಗಿ ಸಂಸತ್ತಿನಲ್ಲಿ ರಾಜ್ಯದ ಪ್ರಾತಿನಿಧ್ಯ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿರುವ ಕ್ಷೇತ್ರಗಳ ಸಂಖ್ಯೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನು ಪರಿಶೀಲಿಸಲು ಪಕ್ಷ ನಿರ್ಧರಿಸಿದೆ.
ಜೆಎಂಎಂ ರಾಜ್ಯಸಭಾ ಸದಸ್ಯೆ ಮಹುವಾ ಮಾಜೀ ಮಾತನಾಡಿ, ಪ್ರಸ್ತಾವಿತ ಮಸೂದೆಗಳ ಪ್ರತಿಗಳು ಶುಕ್ರವಾರ ರಾತ್ರಿ ತಮಗೆ ಲಭಿಸಿವೆ. ಹೀಗಾಗಿ, ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಮಸೂದೆಯ ಪ್ರತಿಯೊಂದು ಅಂಶವನ್ನೂ ಅಧ್ಯಯನ ಮಾಡುವಂತೆ ಪಕ್ಷದ ಸಂಸದರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
“ಮಸೂದೆಗಳ ಪ್ರತಿಗಳು ಶುಕ್ರವಾರ ರಾತ್ರಿ ನಮಗೆ ಲಭಿಸಿವೆ. ಜಾರ್ಖಂಡ್ ರಾಜ್ಯಕ್ಕೆ ಈ ಮಸೂದೆಗಳು ಅನುಕೂಲಕರವಾಗಿವೆಯೇ ಎಂಬುದನ್ನು ತಿಳಿದುಕೊಳ್ಳಲು ಎಲ್ಲ ಸಂಸದರೂ ಅವುಗಳನ್ನು ಸಮಗ್ರವಾಗಿ ಅಧ್ಯಯನ ಮಾಡುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಮುಖ್ಯಮಂತ್ರಿಯವರೂ ತಜ್ಞರ ಅಭಿಪ್ರಾಯ ಪಡೆಯಲಿದ್ದಾರೆ. ಅಧ್ಯಯನ ಪೂರ್ಣಗೊಂಡ ಬಳಿಕ ಒಂದು ಅಥವಾ ಎರಡು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಅವರು ಹೇಳಿದರು.
ಈ ಸಭೆಯಲ್ಲಿ ರಾಜ್ಯಸಭಾ ಸದಸ್ಯರಾದ ಸರ್ಫರಾಜ್ ಅಹ್ಮದ್ ಮತ್ತು ಬೈದ್ಯನಾಥ ರಾಮ್ ಹಾಗೂ ಲೋಕಸಭಾ ಸದಸ್ಯರಾದ ವಿಜಯ ಹನ್ಸ್‌ದಾಕ್, ಜೋಬಾ ಮಾಂಝಿ ಮತ್ತು ನಳಿನ್ ಸೊರೆನ್ ಭಾಗವಹಿಸಿದ್ದರು.

ಡಿಎಂಕೆ ನಿಲುವು ಬದಲಿಸಲು ಕಾಂಗ್ರೆಸ್ ನಾಯಕರ ಪ್ರಯತ್ನ
ವಿರೋಧ ಪಕ್ಷಗಳು ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಮತ್ತಷ್ಟು ಬೆಂಬಲ ಕಳೆದುಕೊಳ್ಳುವುದನ್ನು ತಡೆಯುವ ಪ್ರಯತ್ನವಾಗಿ, ಕಾಂಗ್ರೆಸ್‌ನ ಹಿರಿಯ ನಾಯಕರ ನಿಯೋಗ ಭಾನುವಾರ ಚೆನ್ನೈಗೆ ಆಗಮಿಸಿತು. ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ಸೂಚಿಸಿರುವ ಡಿಎಂಕೆ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವೊಲಿಸುವುದು ಈ ಭೇಟಿಯ ಉದ್ದೇಶವಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಈ ನಿಯೋಗದಲ್ಲಿ ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇದ್ದಾರೆ. ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಹಾಗೂ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಸೇರಿದಂತೆ ಹಲವು ಪ್ರಮುಖ ನಾಯಕರು ನಿಯೋಗದಲ್ಲಿದ್ದಾರೆ.
ಇದರ ಜತೆಗೆ, ಕಾಂಗ್ರೆಸ್ ನಿಯೋಗ ಮುಂಬೈಗೂ ತೆರಳಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್ಚಂದ್ರ ಪವಾರ್) ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಲಿದೆ. ಸೋಮವಾರ ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ, ಕ್ಷೇತ್ರ ಪುನರ್ವಿಂಗಡಣೆ ಪ್ರಸ್ತಾವನೆಗೆ ವಿರೋಧ ಪಕ್ಷಗಳ ಬೆಂಬಲ ಕ್ರೋಡೀಕರಿಸುವುದು ಕಾಂಗ್ರೆಸ್‌ನ ಉದ್ದೇಶವಾಗಿದೆ.

ಪ್ರಮುಖ ಸುದ್ದಿ :-   ಪೌರತ್ವ ಪಡೆಯುವ ಮೊದಲೇ ಮತದಾರರ ಪಟ್ಟಿಯಲ್ಲಿ ಸೋನಿಯಾ ಗಾಂಧಿ ಹೆಸರಿತ್ತು: ಕೋರ್ಟ್‌ಗೆ ದೆಹಲಿ ಪೊಲೀಸರ ಮಾಹಿತಿ

ಈ ನಡುವೆ, ಡಿಎಂಕೆಯ ಹಿರಿಯ ನಾಯಕಿ ಹಾಗೂ ಲೋಕಸಭಾ ಸದಸ್ಯೆ ಕನ್ನಿಮೊಳಿ, ತಮ್ಮ ಪಕ್ಷದ ನಿಲುವನ್ನು ಈಗಾಗಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿಳಿಸಿರುವುದಾಗಿ ಹೇಳಿದ್ದಾರೆ. ಪಕ್ಷದ ಅಧ್ಯಕ್ಷ ಸ್ಟಾಲಿನ್ ಅವರು ಸಂಸದರ ಸಭೆಯಲ್ಲಿ ಪ್ರಕಟಿಸಿದ ನಿರ್ಧಾರವನ್ನು ಕಾಂಗ್ರೆಸ್ ನಾಯಕತ್ವಕ್ಕೆ ತಲುಪಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಡಿಎಂಕೆ ಪಕ್ಷದಿಂದ ಲೋಕಸಭೆಯಲ್ಲಿ 22 ಮತ್ತು ರಾಜ್ಯಸಭೆಯಲ್ಲಿ ಎಂಟು ಸದಸ್ಯರಿದ್ದಾರೆ. ಶನಿವಾರ ನಡೆದ ಸಭೆಯ ಬಳಿಕ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಬೆಂಬಲಿಸುವುದಾಗಿ ಡಿಎಂಕೆ ಪ್ರಕಟಿಸಿತ್ತು.
ಅಡಿಎಂಕೆಯ ಈ ನಿರ್ಧಾರವು ವಿರೋಧ ಪಕ್ಷಗಳ ಹಲವು ನಾಯಕರಿಗೆ ಅಚ್ಚರಿ ಮೂಡಿಸಿತ್ತು. ಏಕೆಂದರೆ, ಈ ಹಿಂದೆ ಇದೇ ರೀತಿಯ ಪ್ರಸ್ತಾವನೆಗೆ ಡಿಎಂಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಸ್ವತಃ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೂಡ ಕ್ಷೇತ್ರ ಪುನರ್ವಿಂಗಡಣೆ ವಿರುದ್ಧ ಬಹಿರಂಗವಾಗಿ ಅಭಿಯಾನ ನಡೆಸಿದ್ದರು. ಹೀಗಿರುವಾಗ, ಇದೀಗ ಮಸೂದೆಯನ್ನು ಬೆಂಬಲಿಸುವ ನಿರ್ಧಾರ ಪ್ರಕಟಿಸಿರುವುದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement