ಪ್ರಖರ ಸೌರ ವಿಕಿರಣದಿಂದ ಏರ್‌ಬಸ್ ವಿಮಾನಗಳ ಸಾಫ್ಟ್‌ವೇರ್‌ನಲ್ಲಿ ದೋಷ ಪತ್ತೆ ; ಜಗತ್ತಿನಾದ್ಯಂತ ಸಾವಿರಾರು ವಿಮಾನಗಳು ಸ್ಥಗಿತ…!

ತೀವ್ರ ಸೌರ ವಿಕಿರಣದಿಂದಾಗಿ (Intense Solar Radiation) ಏರ್‌ಬಸ್ ಎ320 ಸರಣಿಯ ವಿಮಾನಗಳ ನಿರ್ಣಾಯಕ ಸಾಫ್ಟ್‌ವೇರ್‌ನಲ್ಲಿ ದೋಷ ಕಂಡುಬಂದಿದ್ದು, ಅದನ್ನು ಸರಿಪಡಿಸುವವರೆಗೆ ಜಗತ್ತಿನಾದ್ಯಂತ ಸಾವಿರಾರು ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಏರ್‌ಬಸ್ ಕಂಪನಿಯ 55 ವರ್ಷಗಳ ಇತಿಹಾಸದಲ್ಲಿ ಇದುವರೆಗೆ ಕಂಡ ಅತಿ ದೊಡ್ಡ ‘ವಿಮಾನ ಹಿಂಪಡೆಯುವಿಕೆ’ ಅಥವಾ ‘ರಿಕೌಂಟ್’ ಇದಾಗಿದೆ.
ಏನಿದು ತಾಂತ್ರಿಕ ದೋಷ?
ಈ ಸಮಸ್ಯೆ ಎಲಿವೇಟರ್ ಏಲೆರಾನ್ ಕಂಪ್ಯೂಟರ್ (Elevator Aileron Computer – ELAC B)ನ L104 ಆವೃತ್ತಿಯ ಸಾಫ್ಟ್‌ವೇರ್ ಮೇಲೆ ಪರಿಣಾಮ ಬೀರಿದೆ. ಇದು ಎತ್ತರವನ್ನು ಲೆಕ್ಕಾಚಾರ ಮಾಡುತ್ತದೆ ಮತ್ತು ಹಾರಾಟದ ಮೇಲ್ಮೈಗಳನ್ನು ನಿಯಂತ್ರಿಸುತ್ತದೆ. ಸೌರ ಜ್ವಾಲೆಗಳ (Solar Flares) ಸಮಯದಲ್ಲಿ, ವಿಮಾನವು ಅತ್ಯಂತ ಎತ್ತರದಲ್ಲಿ ಹಾರುತ್ತಿದ್ದಾಗ ಈ ಸಾಫ್ಟ್‌ವೇರ್‌ನಲ್ಲಿ ದತ್ತಾಂಶ (Data) ಹಾಳಾಗುವ (corruption) ಸಾಧ್ಯತೆಯಿದೆ.
ಈ ಅಪಾಯವನ್ನು ಗಮನಿಸಿ, ಯುರೋಪಿಯನ್ ಯೂನಿಯನ್ ಏವಿಯೇಷನ್ ಸೇಫ್ಟಿ ಏಜೆನ್ಸಿ (EASA)ಯು ನವೆಂಬರ್ 28, 2025ರಂದು ತುರ್ತು ವಾಯುಯೋಗ್ಯ ನಿರ್ದೇಶನವನ್ನು (Emergency Airworthiness Directive – EAD) ಹೊರಡಿಸಿದೆ. ಪ್ರಯಾಣಿಕರ ಹಾರಾಟವನ್ನು ಪುನರಾರಂಭಿಸುವ ಮೊದಲು ದೋಷವನ್ನು ಕಡ್ಡಾಯವಾಗಿ ಸರಿಪಡಿಸಲು ಇದು ಆದೇಶಿಸಿದೆ.

ಘಟನೆ ನಡೆದದ್ದು ಹೇಗೆ?
ಈ ಸಮಸ್ಯೆಯು ಮೊದಲಿಗೆ ಅಕ್ಟೋಬರ್ 30 ರಂದು ಬಯಲಾಯಿತು. ಜೆಟ್‌ಬ್ಲೂ ಏರ್‌ವೇಸ್‌ಗೆ ಸೇರಿದ ಎ320 ವಿಮಾನವೊಂದು (B6-1230) ಕ್ಯಾನ್‌ಕುನ್‌ನಿಂದ ನೆವಾರ್ಕ್‌ಗೆ ತೆರಳುತ್ತಿದ್ದಾಗ, 35,000 ಅಡಿಗಳ ಎತ್ತರದಲ್ಲಿ ಇದ್ದಕ್ಕಿದ್ದಂತೆ ವಿಮಾನವು ಕೆಳಕ್ಕೆ ಇಳಿದ ಅನುಭವವಾಯಿತು (uncommanded pitch-down). ಈ ಅನಿರೀಕ್ಷಿತ ಇಳಿಕೆ ಕಾರಣ ಕನಿಷ್ಠ 15 ಪ್ರಯಾಣಿಕರಿಗೆ ಗಾಯಗಳಾದವು ಮತ್ತು ವಿಮಾನವನ್ನು ಟ್ಯಾಂಪಾ, ಫ್ಲೋರಿಡಾದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು.
ಏರ್‌ಬಸ್ ತನಿಖೆ ಹೇಳುವುದೇನು?
ಏರ್‌ಬಸ್ ನಡೆಸಿದ ತನಿಖೆಯಲ್ಲಿ, ಸೌರ ವಿಕಿರಣವು ELAC ದತ್ತಾಂಶವನ್ನು ಹಾಳುಮಾಡಿರುವುದೇ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಈ ಅನಿರೀಕ್ಷಿತ ಹಠಾತ್ ಇಳಿಕೆಗೆ ಕಾರಣ ಎಂದು ತಿಳಿದುಬಂದಿದೆ. ಆಟೋಪೈಲಟ್ (Autopilot) ತಕ್ಷಣವೇ ಸರಿಯಾದ ಪಥಕ್ಕೆ ತಂದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.
ಇದೇ ಏಕೈಕ ಘಟನೆಯಾಗಿದ್ದರೂ, ಈ ಅಪಾಯವು ಎ320ಸಿಇಒ (A320ceo) ಮತ್ತು ಎ320ನಿಯೋ (A320neo) ಎರಡೂ ಮಾದರಿಯ ವಿಮಾನಗಳಿಗೂ ಅನ್ವಯಿಸುತ್ತದೆ ಎಂದು ವಿಶ್ಲೇಷಣೆಯಿಂದ ತಿಳಿದುಬಂದಿದೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

‘ಫ್ಲೈ-ಬೈ-ವೈರ್’ ದುರ್ಬಲತೆ
ಎ320 ವಿಮಾನಗಳು “ಫ್ಲೈ-ಬೈ-ವೈರ್” (Fly-by-Wire) ತಂತ್ರಜ್ಞಾನದಲ್ಲಿ ಪೈಲಟ್‌ಗಳ ನಿಯಂತ್ರಣಗಳು ಯಾಂತ್ರಿಕ ಲಿಂಕ್‌ಗಳ ಬದಲಾಗಿ ELAC ನಂತಹ ಕಂಪ್ಯೂಟರ್‌ಗಳಿಂದ ಸಂಸ್ಕರಿಸಿದಎಲೆಕ್ಟ್ರಾನಿಕ್ ಸಂಕೇತಗಳನ್ನು ಕಳುಹಿಸುತ್ತವೆ. ಆದರೆ, ಬೆಳಕಿನ ವೇಗದಲ್ಲಿ ಚಲಿಸುವ ಸೌರ ಜ್ವಾಲೆಗಳು ವಿಮಾನವು ನಿರ್ದಿಷ್ಟ ಎತ್ತರದಲ್ಲಿ ಹಾರುತ್ತಿದ್ದಾಗ ಎಲೆಕ್ಟ್ರಾನಿಕ್ಸ್‌ನೊಳಗೆ ನುಸುಳಿ, ಮೆಮೊರಿಯೊಳಗಿನ ‘ಬಿಟ್‌ಗಳನ್ನು’ ಬದಲಾಯಿಸಬಹುದು. ಈ ಕಾರಣದಿಂದ ಎತ್ತರದ ಲೆಕ್ಕಾಚಾರ ಮಾಡುವಲ್ಲಿ L104 ಸಾಫ್ಟ್‌ವೇರ್‌ನಲ್ಲಿ ದೋಷ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.
ಪರಿಹಾರ ಮತ್ತು ಜಾಗತಿಕ ಪರಿಣಾಮ
ವಿಮಾನಯಾನ ಸಂಸ್ಥೆಗಳು ELAC ಸಾಫ್ಟ್‌ವೇರ್ ಅನ್ನು L103 ಆವೃತ್ತಿಗೆ ಹಿಂತಿರುಗಿಸಬೇಕು, ಇಲ್ಲವೇ ಹಾರ್ಡ್‌ವೇರ್ ಬದಲಾಯಿಸಬೇಕು. ಈ ಕಾರ್ಯಕ್ಕೆ ಪ್ರತಿ ವಿಮಾನಕ್ಕೆ ಸರಿಸುಮಾರು ಮೂರು ಗಂಟೆಗಳ ಸಮಯ ಬೇಕಾಗಲಿದೆ. ಏರ್‌ಬಸ್‌ನ ಒಟ್ಟು ವಿಮಾನಗಳಲ್ಲಿ ಸುಮಾರು ಅರ್ಧದಷ್ಟು ಅಂದರೆ, ಅಂದಾಜು 6,000 ವಿಮಾನಗಳು ಈ ದೋಷಕ್ಕೆ ತುತ್ತಾಗಿವೆ.
ಅಮೇರಿಕನ್ ಏರ್‌ಲೈನ್ಸ್, ಡೆಲ್ಟಾ ಮತ್ತು ಭಾರತದ ಇಂಡಿಗೋದಂತಹ ಪ್ರಮುಖ ವಿಮಾನಯಾನ ಸಂಸ್ಥೆಗಳ ಮೇಲೆ ಪರಿಣಾಮ ಬೀರಿದೆ. ರಜಾದಿನಗಳ ಗರಿಷ್ಠ ಪ್ರಯಾಣದ ಸಮಯದಲ್ಲಿ ಈ ಸ್ಥಗಿತ ಉಂಟಾಗಿರುವುದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಲಿದೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಏರ್‌ಬಸ್ ಮತ್ತು EASA, ವಿಳಂಬಕ್ಕಾಗಿ ಕ್ಷಮೆಯಾಚಿಸಿದ್ದು, ಶೀಘ್ರವಾಗಿ ಪರಿಹಾರ ಕ್ರಮಗಳನ್ನು ಜಾರಿಗೊಳಿಸಲು ಸಮನ್ವಯ ಸಾಧಿಸುತ್ತಿವೆ.

ಪ್ರಮುಖ ಸುದ್ದಿ :-   ಕ್ರಿಕೆಟ್ ದಂತಕತೆ ಸರ್ ಗ್ಯಾರಿ ಸೋಬರ್ಸ್ ನಿಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement