ತಮಿಳು ಸೂಪರ್ ಸ್ಟಾರ್, ಟಿವಿಕೆ ಅಧ್ಯಕ್ಷ ವಿಜಯ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ

ಚೆನ್ನೈ: ತಮಿಳು ಚಿತ್ರರಂಗದ ಸ್ಟಾರ್ ನಟ ಹಾಗೂ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಅಧ್ಯಕ್ಷ ವಿಜಯ ಅವರ ದಾಂಪತ್ಯ ಜೀವನ ಅಂತ್ಯದ ಹಂತಕ್ಕೆ ಬಂದು ನಿಂತಿದೆ. ವಿಜಯ ಅವರ ಪತ್ನಿ ಸಂಗೀತ ಅವರು ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ವಿಜಯ ಮತ್ತು ಸಂಗೀತ ಅವರು ಜುಲೈ 10, 1998 ರಂದು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ವಿವಾಹ ನೋಂದಣಿ ಮಾಡಿಕೊಂಡಿದ್ದರು. ನಂತರ ಆಗಸ್ಟ್ 25, 1999 ರಂದು ಚೆನ್ನೈನ ರಾಜ ಮುತ್ತಯ್ಯ ಮಂದಿರದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು. ಸುಮಾರು 26 ವರ್ಷಗಳ ಸಂಸಾರ ಜೀವನದ ನಂತರ ಈಗ ಈ ಜೋಡಿ ಬೇರೆಯಾಗಲು ನಿರ್ಧರಿಸಿದೆ.
ಮೂಲಗಳ ಪ್ರಕಾರ, ವೈಯಕ್ತಿಕ ಭಿನ್ನಾಭಿಪ್ರಾಯಗಳು ಹಾಗೂ ವಿಜಯ ಅವರ ಮೇಲೆ ನಂಬಿಕೆ ದ್ರೋಹದ (Infidelity) ಆರೋಪಗಳನ್ನು ಮಾಡಿ ಡಿಸೆಂಬರ್ 3, 2025 ರಂದು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ ಎನ್ನಲಾಗಿದೆ.

2024ರ ಆರಂಭದಿಂದಲೇ ಈ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ವದಂತಿಗಳಿದ್ದವು. ಆದರೆ ಇಬ್ಬರೂ ಈ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಿರಲಿಲ್ಲ. ವಿಜಯ ಅವರ ಅಭಿಮಾನಿಯಾಗಿದ್ದ ಲಂಡನ್‌ನಲ್ಲಿದ್ದ ಸಂಗೀತ, ವಿಜಯ ಅವರನ್ನು ಭೇಟಿಯಾದ ನಂತರ ಅದು ಮದುವೆ ವರೆಗೆ ಬಂದು ನಿಂತಿತು. ಸಂಗೀತ ಅವರು ಸಾರ್ವಜನಿಕ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುವುದು ತೀರಾ ವಿರಳವಾಗಿತ್ತು.
ಫೆಬ್ರವರಿ 2024ರಲ್ಲಿ ‘ತಮಿಳಗ ವೆಟ್ರಿ ಕಳಗಂ’ ಎಂಬ ಹೊಸ ರಾಜಕೀಯ ಪಕ್ಷವನ್ನು ಆರಂಭಿಸಿರುವ ವಿಜಯ, 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಇಂತಹ ಪ್ರಮುಖ ಘಟ್ಟದಲ್ಲಿ ಅವರ ವೈಯಕ್ತಿಕ ಜೀವನದ ಈ ಬೆಳವಣಿಗೆ ರಾಜಕೀಯ ವಲಯದಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement