ಅಮೆರಿಕ | ಪತ್ನಿ, 3 ಸಂಬಂಧಿಕರನ್ನು ಗುಂಡಿಟ್ಟು ಕೊಂದ ಭಾರತೀಯ ಮೂಲದ ವ್ಯಕ್ತಿ ; ಕಪಾಟಿನಲ್ಲಿ ಅಡಗಿ ಪಾರಾದ ಮಕ್ಕಳು

ವಾಷಿಂಗ್ಟನ್/ಅಟ್ಲಾಂಟಾ: ಅಮೆರಿಕದ ಜಾರ್ಜಿಯಾ ರಾಜ್ಯದ ಲಾರೆನ್ಸ್‌ವಿಲ್ಲೆ ನಗರದಲ್ಲಿ ನಡೆದ ಭೀಕರ ಗುಂಡಿನ ದಾಳಿಗೆ ಭಾರತೀಯ ಮೂಲದ ಮಹಿಳೆ ಸೇರಿದಂತೆ ನಾಲ್ವರು ಸಾವಿಗೀಡಾಗಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಹತ್ಯಾಕಾಂಡ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಸ್ಥಳೀಯ ಕಾಲಮಾನ ಶುಕ್ರವಾರ ಮುಂಜಾನೆ ಸುಮಾರು 2:30ರ ಸುಮಾರಿಗೆ ಘಟನೆ ನಡೆದಿದೆ. ಅಟ್ಲಾಂಟಾ ಸಮೀಪದ ಲಾರೆನ್ಸ್‌ವಿಲ್ಲೆ ನಗರದ ಮನೆಯೊಂದರಲ್ಲಿ ಗುಂಡು ಹಾರಿಸಿದ ಶಬ್ದ ಕೇಳಿಬಂದಿದೆ. ದಾಳಿಕೋರ ಗುಂಡಿನ ಮಳೆಗರೆಯುತ್ತಿದ್ದಾಗ ಮನೆಯಲ್ಲಿದ್ದ ಮೂವರು ಮಕ್ಕಳು ಗಾಬರಿಯಿಂದ ‘ಕ್ಲೋಸೆಟ್’ (ಬಟ್ಟೆ ಇಡುವ ಕಪಾಟು) ಒಳಗೆ ಅಡಗಿ ಕುಳಿತು ಪ್ರಾಣ ಉಳಿಸಿಕೊಂಡಿದ್ದಾರೆ. ಮಕ್ಕಳಲ್ಲಿ ಒಬ್ಬರು ತಕ್ಷಣ 911ಗೆ ಕರೆ ಮಾಡಿ ತುರ್ತು ನೆರವು ಕೋರಿದ್ದರಿಂದ ಪೊಲೀಸರು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ್ದಾರೆ. ಆರೋಪಿಯನ್ನು 51 ವರ್ಷದ ವಿಜಯಕುಮಾರ ಎಂದು ಗುರುತಿಸಲಾಗಿದೆ.

ದಾಳಿಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಆರೋಪಿಯ ಪತ್ನಿ ಮೀಮು ಡೋಗ್ರಾ (43), ಗೌರವಕುಮಾರ (33), ನಿಧಿ ಚಂದರ್ (37), ಹರೀಶ ಚಂದರ್ (38) ಎಂದು ಗುರುತಿಸಲಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಮಕ್ಕಳಿಗೆ ಯಾವುದೇ ಗಾಯಗಳಾಗಿಲ್ಲ. ಸದ್ಯ ಮಕ್ಕಳನ್ನು ಸಂಬಂಧಿಕರ ವಶಕ್ಕೆ ಒಪ್ಪಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ವಿಜಯಕುಮಾರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಮೇಲೆ ಕೊಲೆ, ಮಾರಣಾಂತಿಕ ಹಲ್ಲೆ ಹಾಗೂ ಮಕ್ಕಳ ಮೇಲೆ ಕ್ರೌರ್ಯ ಎಸಗಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

ಭಾರತೀಯ ರಾಯಭಾರಿ ಕಚೇರಿ ಸ್ಪಂದನೆ
ಘಟನೆಯ ಬಗ್ಗೆ ಅಟ್ಲಾಂಟಾದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ತೀವ್ರ ಸಂತಾಪ ವ್ಯಕ್ತಪಡಿಸಿದೆ. “ಪೌಟುಂಬಿಕ ಕಲಹದಿಂದ ನಡೆದ ಈ ಶೂಟಿಂಗ್ ಘಟನೆಯಲ್ಲಿ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿರುವುದು ನಮಗೆ ತೀವ್ರ ದುಃಖ ತಂದಿದೆ. ಮೃತರ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ನೆರವು ನೀಡುತ್ತಿದ್ದೇವೆ,” ಎಂದು ‘X’ ನಲ್ಲಿ ಪೋಸ್ಟ್ ಮಾಡಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement