ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಅಕ್ರಮ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ ಅವರನ್ನು ರಾಜ್ಯ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.
ಈ ಕುರಿತು ಸರ್ಕಾರ ಹೊರಡಿಸಿರುವ ಆದೇಶದಲ್ಲಿ, ʼಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು–1969ರ ನಿಯಮ 3(2) ಮತ್ತು 3(3)ʼರ ಅಡಿಯಲ್ಲಿ ಜ್ಞಾನೇಂದ್ರಕುಮಾರ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದೆ. ಪ್ರಕರಣದ ಕುರಿತು ಸಿಐಡಿ ತನಿಖೆ ನಡೆದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಪ್ರಸ್ತುತ ಜ್ಞಾನೇಂದ್ರಕುಮಾರ ಸಿಐಡಿ ವಶದಲ್ಲಿದ್ದು, ಕೆಪಿಎಸ್‌ಸಿಯಲ್ಲಿ ನಡೆದಿರುವ ನೇಮಕಾತಿ ಅಕ್ರಮಗಳ ಕುರಿತು ಅದು ತನಿಖೆ ನಡೆಸುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಕೂಡ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ.
ಅಮಾನತು ಅವಧಿಯಲ್ಲಿ ಅವರಿಗೆ ನಿಯಮ 4ರ ಪ್ರಕಾರ ಜೀವನೋಪಾಯ ಭತ್ಯೆ (Subsistence Allowance) ನೀಡಲಾಗುತ್ತದೆ. ಅಲ್ಲದೆ, ರಾಜ್ಯ ಸರ್ಕಾರದ ಲಿಖಿತ ಅನುಮತಿ ಇಲ್ಲದೆ ಅವರು ಮುಖ್ಯ ಕಚೇರಿ ವ್ಯಾಪ್ತಿಯನ್ನು ಯಾವುದೇ ಕಾರಣಕ್ಕೂ ತೊರೆಯಬಾರದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಆಗಸ್ಟ್ 29ರಂದು ಬಂಧನ
ಕೆಪಿಎಸ್‌ಸಿ ನಡೆಸಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಜ್ಞಾನೇಂದ್ರಕುಮಾರ ಅವರನ್ನು ಆಗಸ್ಟ್ 29ರಂದು ಬಂಧಿಸಿದ್ದರು. ಬಂಧನಕ್ಕೂ ಮುನ್ನ ಅವರನ್ನು ಎರಡು ದಿನಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು.
ಅಧಿಕೃತ ಮೂಲಗಳ ಪ್ರಕಾರ, ಜ್ಞಾನೇಂದ್ರಕುಮಾರ ಫೆಬ್ರುವರಿ 2024ರಿಂದ ಮಾರ್ಚ್ 2026ರವರೆಗೆ ಕೆಪಿಎಸ್‌ಸಿಯ ಪರೀಕ್ಷಾ ನಿಯಂತ್ರಕರಾಗಿ (Controller of Examinations) ಕಾರ್ಯನಿರ್ವಹಿಸಿದ್ದರು. ಈ ಕಾರಣದಿಂದ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ತನಿಖೆಗೆ ಸಮರ್ಪಕವಾಗಿ ಸಹಕರಿಸದ ಆರೋಪದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
2016ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಜ್ಞಾನೇಂದ್ರಕುಮಾರ ಪ್ರಸ್ತುತ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (MSME) ನಿರ್ದೇಶಕರಾಗಿದ್ದರು.
ಯಾವ ಆರೋಪಗಳ ತನಿಖೆ?
ಕೆಪಿಎಸ್‌ಸಿ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಪರೀಕ್ಷಾ ದಾಖಲೆಗಳ ನಿರ್ವಹಣೆ, ಒಎಂಆರ್ ಶೀಟ್‌ಗಳ ತಿದ್ದುಪಡಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇತರರ ಪಾತ್ರ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ.
ಬಂಧನಕ್ಕೂ ಕೆಲವೇ ದಿನಗಳ ಮೊದಲು, ಇ.ಡಿ. ಅಧಿಕಾರಿಗಳು ಕೆಪಿಎಸ್‌ಸಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಜ್ಞಾನೇಂದ್ರಕುಮಾರ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ನಂತರ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ತಮ್ಮ ತಂದೆಯ ಆರೋಗ್ಯ ತುರ್ತು ಪರಿಸ್ಥಿತಿಯ ಕಾರಣದಿಂದ ಜ್ಞಾನೇಂದ್ರಕುಮಾರ ಉತ್ತರ ಪ್ರದೇಶದಲ್ಲಿರುವ ತಮ್ಮ ಸ್ವಗ್ರಾಮಕ್ಕೆ ತೆರಳಿರುವುದಾಗಿ ತಿಳಿಸಿದ್ದರು ಎಂದು ಹೇಳಿದ್ದರು. ಇದಾದ ಬಳಿಕ ಇಡಿ ಅಧಿಕಾರಿಗಳು ಜ್ಞಾನೇಂದ್ರಕುಮಾರ ನಿವಾಸ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು.
ಅಮಾನತು ಆದೇಶದಲ್ಲಿ ಏನಿದೆ?
ಅಮಾನತು ಆದೇಶದ ಮುನ್ನುಡಿಯಲ್ಲಿ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA)–2002ರ ಸೆಕ್ಷನ್ 17ರಡಿ ಬೆಂಗಳೂರು ವಲಯ ಕಚೇರಿಯ ಇಡಿ ಉಪನಿರ್ದೇಶಕರು ನಡೆಸಿದ ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆಯಲ್ಲಿ ದೊರೆತ ದಾಖಲೆಗಳು ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದುದನ್ನು ಸೂಚಿಸುತ್ತವೆ ಎಂದು ಉಲ್ಲೇಖಿಸಿದೆ. ಇದು ಕೆಪಿಎಸ್‌ಸಿಯ ಪರೀಕ್ಷಾ ನಿಯಂತ್ರಕ (ಅಂದರೆ) ಜ್ಞಾನೇಂದ್ರ ಕುಮಾರ, ಐಎಎಸ್ ಅವರಿಗೆ ಮಾತ್ರ ಸಂಬಂಧಿಸಿದೆ.
ಇದಲ್ಲದೆ, ಸಿಐಡಿ ಮಹಾನಿರ್ದೇಶಕರು ನೀಡಿರುವ ಮಾಹಿತಿಯಂತೆ, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 318(3) ಹಾಗೂ ಕರ್ನಾಟಕ ಸಾರ್ವಜನಿಕ ಪರೀಕ್ಷೆಗಳು (ಭ್ರಷ್ಟಾಚಾರ ಮತ್ತು ಅಕ್ರಮ ತಡೆ) ಕಾಯ್ದೆ–2023ರ ಸೆಕ್ಷನ್ 10 ಅಡಿಯಲ್ಲಿ ಗ್ಯಾಂಗ್ವಾರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದರ ತನಿಖೆ ಸಿಐಡಿ ವತಿಯಿಂದ ನಡೆಯುತ್ತಿದೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ