ಇಸ್ರೇಲ್ ವೈಮಾನಿಕ ದಾಳಿ ಲೆಬನಾನಿನಲ್ಲಿ 18 ಮಂದಿ ಸಾವು ; ಅಮೆರಿಕ-ಇರಾನ್ ಶಾಂತಿ ಮಾತುಕತೆ ಮುಂದೂಡಿಕೆ

ಜೆರುಸಲೇಮ್/ಬೈರೂತ್/ವಾಷಿಂಗ್ಟನ್ : ದಕ್ಷಿಣ ಲೆಬನಾನ್‌ ಪ್ರದೇಶದಲ್ಲಿ ಇಸ್ರೇಲ್‌ ಸೇನೆ ನಡೆಸುತ್ತಿರುವ ತೀವ್ರ ದಾಳಿಗಳು ಇರಾನ್ ಮತ್ತು ಅಮೆರಿಕ ನಡುವೆ ಇತ್ತೀಚೆಗೆ ಸಹಿ ಹಾಕಲಾದ ಯುದ್ಧ ಅಂತ್ಯ ಒಪ್ಪಂದದ ಭವಿಷ್ಯದ ಮೇಲೆ ಅನಿಶ್ಚಿತತೆಯ ಕಾರ್ಮೋಡಕ್ಕೆ ಕಾರಣವಾಗಿದೆ.  ಇಸ್ರೇಲ್ ಸೇನೆ ಶುಕ್ರವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ತನ್ನ ಪಡೆಗಳು ರಾತ್ರಿಯಿಡೀ ದಕ್ಷಿಣ ಲೆಬನಾನ್‌ನ ವಿವಿಧ ಗುರಿಗಳ ಮೇಲೆ ದಾಳಿ ನಡೆಸಿರುವುದಾಗಿ ತಿಳಿಸಿದೆ. ಇದೇ ವೇಳೆ ಹಿಜ್ಬುಲ್ಲಾ ಸಂಘಟನೆಯು ಪ್ರದೇಶದಲ್ಲಿ ಭಾರೀ ಯುದ್ಧ ನಡೆಯುತ್ತಿದೆ ಎಂದು ಹೇಳಿದೆ.
ಈ ಬೆಳವಣಿಗೆಗಳ ನಡುವೆ, ಶುಕ್ರವಾರ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆಯಬೇಕಿದ್ದ ಇರಾನ್-ಅಮೆರಿಕ ಮಾತುಕತೆಗಳು ಮುಂದೂಡಲ್ಪಟ್ಟಿವೆ. ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೇತೃತ್ವದಲ್ಲಿ ನಡೆಯಬೇಕಿದ್ದ ಈ ಸಭೆಯನ್ನು ಮರುನಿಗದಿಪಡಿಸಲು ಮಧ್ಯವರ್ತಿಗಳು ಪ್ರಯತ್ನಿಸುತ್ತಿದ್ದಾರೆ. ಯುದ್ಧದ ಶಾಶ್ವತ ಅಂತ್ಯಕ್ಕಾಗಿ ಅಗತ್ಯವಾದ ಈ ಮಾತುಕತೆಗಳಲ್ಲಿ ಲೆಬನಾನ್‌ನ ಪರಿಸ್ಥಿತಿಯೇ ಪ್ರಮುಖ ಚರ್ಚಾ ವಿಷಯವಾಗಿ ಪರಿಣಮಿಸಿದೆ ಎಂದು ಪ್ರಾದೇಶಿಕ ಅಧಿಕಾರಿಗಳು ತಿಳಿಸಿದ್ದಾರೆ.
ಲೆಬನಾನ್‌ನಲ್ಲಿ ಸಾವಿನ ಸಂಖ್ಯೆ ಏರಿಕೆ
ಲೆಬನಾನ್‌ನ ಸರ್ಕಾರಿ ಸುದ್ದಿಸಂಸ್ಥೆ ‘ನ್ಯಾಷನಲ್ ನ್ಯೂಸ್ ಏಜೆನ್ಸಿ’ ಪ್ರಕಾರ, ಇಸ್ರೇಲ್‌ನ ವೈಮಾನಿಕ ದಾಳಿಗಳಲ್ಲಿ ಕನಿಷ್ಠ 18 ಮಂದಿ ಮೃತಪಟ್ಟಿದ್ದಾರೆ. ಇಸ್ರೇಲ್ ಸೇನೆ ದಾಳಿಗಳು ಮುಂದುವರಿದಿರುವುದಾಗಿ ಹೇಳಿದೆ.
ಇನ್ನೊಂದೆಡೆ, ದಕ್ಷಿಣ ಲೆಬನಾನ್‌ನಲ್ಲಿ ನಡೆದ ಹೋರಾಟದಲ್ಲಿ ತನ್ನ ನಾಲ್ವರು ಯೋಧರು ಮೃತಪಟ್ಟಿರುವುದಾಗಿ ಇಸ್ರೇಲ್ ಹೇಳಿದೆ. ಮೃತಪಟ್ಟವರಲ್ಲಿ ಒಬ್ಬ ಲೆಫ್ಟಿನೆಂಟ್ ಕರ್ನಲ್ ಕೂಡ ಸೇರಿದ್ದಾರೆ. ಸ್ಫೋಟಕ ಹೊಂದಿದ್ದ ಡ್ರೋನ್ ದಾಳಿಯಲ್ಲಿ ಇನ್ನೂ ಐವರು ಗಾಯಗೊಂಡಿದ್ದಾರೆ ಎಂದು ಸೇನೆ ತಿಳಿಸಿದೆ.
ಇಸ್ರೇಲ್ ಸೇನೆ ಶುಕ್ರವಾರ ಲೆಬನಾನ್‌ನ ಪೂರ್ವ ಭಾಗದಲ್ಲಿರುವ ಬೆಕಾ ಕಣಿವೆಯ ಪ್ರದೇಶಗಳ ಮೇಲೂ ದಾಳಿ ನಡೆಸಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ದೌರಿಸ್ ಗ್ರಾಮ ದಾಳಿಗೆ ಒಳಗಾಗಿದೆ.
ಒಪ್ಪಂದಕ್ಕೆ ಧಕ್ಕೆಯಾಗುವ ಆತಂಕ
ಲೆಬನಾನ್‌ನಲ್ಲಿ ಮುಂದುವರಿಯುತ್ತಿರುವ ಈ ಹೋರಾಟವು ಇತ್ತೀಚೆಗೆ ಸಹಿ ಹಾಕಲಾಗಿರುವ ಇರಾನ್-ಅಮೆರಿಕ ಒಪ್ಪಂದವನ್ನು ಹಾಳು ಮಾಡುವ ಸಾಧ್ಯತೆ ಇದೆ. ಈ ಒಪ್ಪಂದದ ಪ್ರಕಾರ, ಲೆಬನಾನ್ ಸೇರಿದಂತೆ ಎಲ್ಲಾ ಯುದ್ಧರಂಗಗಳಲ್ಲಿ ತಕ್ಷಣವೇ ಸೈನಿಕ ಕಾರ್ಯಾಚರಣೆಗಳನ್ನು ನಿಲ್ಲಿಸಬೇಕು ಹಾಗೂ ಲೆಬನಾನ್‌ನ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಗೌರವಿಸಬೇಕು ಎಂಬ ಪ್ರಸ್ತಾವನೆಯೂ ಇದೆ.
ಯುದ್ಧ ಅಂತ್ಯಗೊಳಿಸುವ ಉದ್ದೇಶದಿಂದ ರೂಪುಗೊಂಡಿರುವ ಈ ಒಪ್ಪಂದದ ಪರಿಣಾಮವಾಗಿ ಅಂತಾರಾಷ್ಟ್ರೀಯ ಹಡಗು ಸಂಚಾರಕ್ಕೆ ಹೋರ್ಮುಜ್ ಜಲಸಂಧಿ ಪುನಃ ತೆರೆಯಲ್ಪಟ್ಟಿದ್ದು, ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳಿಗೂ ದಾರಿ ಮಾಡಿಕೊಟ್ಟಿದೆ. ಇರಾನ್ ಹೋರ್ಮುಜ್ ಜಲಸಂಧಿಯ ಮೇಲೆ ಹೇರಿದ್ದ ನಿರ್ಬಂಧಗಳಿಂದ ತೈಲ ಸಾಗಣೆ ಬಹುತೇಕ ಸ್ಥಗಿತಗೊಂಡಿತ್ತು.
 ಲೆಬನಾನ್ ವಿಚಾರದಲ್ಲಿ ಸ್ಪಷ್ಟತೆ ಇಲ್ಲ
ಇಸ್ರೇಲ್ ಹಾಗೂ ಹಿಜ್ಬುಲ್ಲಾ ಈ ಒಪ್ಪಂದದಲ್ಲಿ ನೇರ ಭಾಗಿಯಾಗಿಲ್ಲ. ಇರಾನ್, ದಕ್ಷಿಣ ಲೆಬನಾನ್‌ನ ದೊಡ್ಡ ಪ್ರದೇಶವನ್ನು ಆಕ್ರಮಿಸಿಕೊಂಡಿರುವ ಇಸ್ರೇಲ್ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತಿದೆ. ಆದರೆ ಮಧ್ಯಂತರ ಒಪ್ಪಂದದ ಪಠ್ಯದಲ್ಲಿ ಇಸ್ರೇಲ್ ಹಿಂಪಡೆಯಲೇಬೇಕು ಎಂಬ ಸ್ಪಷ್ಟ ಉಲ್ಲೇಖ ಇಲ್ಲ.
ಈ ನಡುವೆ, ವರ್ಷದ ಕೊನೆಯಲ್ಲಿ ಚುನಾವಣೆ ಎದುರಿಸುತ್ತಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಸೇನೆ ಹಿಂಪಡೆಯುವುದನ್ನು ನಿರಾಕರಿಸಿದ್ದಾರೆ. “ಇಸ್ರೇಲ್‌ನ ಭದ್ರತಾ ಅಗತ್ಯ ಇರುವವರೆಗೆ ದಕ್ಷಿಣ ಲೆಬನಾನ್‌ನಲ್ಲಿ ಭದ್ರತಾ ವಲಯವಾಗಿ ಪಡೆಗಳು ಉಳಿಯಲಿವೆ” ಎಂದು ಅವರು ಗುರುವಾರ ಹೇಳಿದ್ದಾರೆ.
ಸ್ವಿಟ್ಜರ್‌ಲ್ಯಾಂಡ್ ಮಾತುಕತೆ ಮುಂದೂಡಿಕೆ
ಲೆಬನಾನ್‌ನಲ್ಲಿನ ಹೊಸ ದಾಳಿಗಳ ನಡುವೆ, ಯುದ್ಧದ ಶಾಶ್ವತ ಅಂತ್ಯಕ್ಕೆ ಸಂಬಂಧಿಸಿದಂತೆ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆಯಬೇಕಿದ್ದ ಅಮೆರಿಕ-ಇರಾನ್ ಮಾತುಕತೆಗಳು ಮುಂದೂಡಲ್ಪಟ್ಟಿವೆ.
ಉಪಾಧ್ಯಕ್ಷ ಜೆಡಿ ವ್ಯಾನ್ಸ್ ತಮ್ಮ ಸ್ವಿಟ್ಜರ್‌ಲ್ಯಾಂಡ್ ಪ್ರವಾಸವನ್ನು ಮುಂದೂಡಿದ್ದು, ಶ್ವೇತಭವನವು ಇದಕ್ಕೆ ‘ಲಾಜಿಸ್ಟಿಕ್ ಸಮಸ್ಯೆಗಳು’ ಕಾರಣ ಎಂದು ತಿಳಿಸಿದೆ.
ಆದರೆ ಹೆಸರು ಬಹಿರಂಗಪಡಿಸದ ಷರತ್ತಿನ ಮೇಲೆ ಮಾತನಾಡಿದ ಇಬ್ಬರು ಪ್ರಾದೇಶಿಕ ಅಧಿಕಾರಿಗಳ ಪ್ರಕಾರ, ಮಧ್ಯವರ್ತಿಗಳು ಪ್ರಸ್ತುತ ಲೆಬನಾನ್‌ನ ಯುದ್ಧ ಪರಿಸ್ಥಿತಿಯನ್ನು ಶಮನಗೊಳಿಸುವತ್ತ ಗಮನಹರಿಸಿದ್ದಾರೆ. ಅವರಲ್ಲಿ ಒಬ್ಬರು, ಲೆಬನಾನ್‌ನಲ್ಲಿನ ಯುದ್ಧ ಹಾಗೂ ನೆತನ್ಯಾಹು ಅವರ ಹೇಳಿಕೆಗಳು ಮಧ್ಯಂತರ ಒಪ್ಪಂದದ ಉಲ್ಲಂಘನೆಯಾಗಿವೆ ಎಂದು ಪರಿಗಣಿಸಿ ಇರಾನ್ ಈ ಸಭೆಯಿಂದ ಹಿಂದೆ ಸರಿದಿದೆ ಎಂದು ತಿಳಿಸಿದ್ದಾರೆ.
ಹೋರ್ಮುಜ್ ಜಲಸಂಧಿ ಪುನಃ ಮುಕ್ತ
ಮಧ್ಯಂತರ ಒಪ್ಪಂದದ ಬಳಿಕ ಅಮೆರಿಕ ತನ್ನ ನಿರ್ಬಂಧಗಳನ್ನು ತೆಗೆದುಹಾಕಿದ್ದು, ತಿಂಗಳುಗಳ ಕಾಲ ಸ್ಥಗಿತಗೊಂಡಿದ್ದ ತೈಲ ಟ್ಯಾಂಕರ್‌ಗಳ ಸಂಚಾರ ಹೋರ್ಮುಜ್ ಜಲಸಂಧಿಯಲ್ಲಿ ಪುನರಾರಂಭವಾಗಿದೆ.
ಆದಾಗ್ಯೂ, ಅಮೆರಿಕದೊಳಗೆ ಈ ಒಪ್ಪಂದದ ವಿರುದ್ಧ ಟೀಕೆಗಳು ಕೇಳಿಬರುತ್ತಿವೆ. ಕೆಲವು ರಿಪಬ್ಲಿಕನ್ ಸಂಸದರು, ಇರಾನ್‌ಗೆ ನಿರ್ಬಂಧ ಸಡಿಲಿಕೆ ಮತ್ತು ಪುನರ್‌ನಿರ್ಮಾಣಕ್ಕಾಗಿ 300 ಬಿಲಿಯನ್ ಡಾಲರ್‌ವರೆಗೆ ನೆರವು ನೀಡುವ ಸಾಧ್ಯತೆಯಿಂದ ಅಮೆರಿಕ ಹೆಚ್ಚು ಕೊಟ್ಟಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಟ್ರಂಪ್‌ ಎಚ್ಚರಿಕೆ
ಟ್ರಂಪ್ ಇತ್ತೀಚಿನ ದಿನಗಳಲ್ಲಿ ನೆತನ್ಯಾಹು ಅವರ ನಡೆ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇರಾನ್ ಜೊತೆ ಒಪ್ಪಂದಕ್ಕೆ ಸಹಿ ಮಾಡುವ ಮುನ್ನದ ದಿನ, “ಅಮೆರಿಕ ಇಲ್ಲದಿದ್ದರೆ ಇಸ್ರೇಲ್ ಇರುತ್ತಿಲಿಲ್ಲ” ಎಂದು ಅವರು ಹೇಳಿದ್ದರು.
“ನಾನು ಮಾಡಿದ್ದ ಕೆಲಸಗಳನ್ನು ಬೇರೆ ಯಾವ ಅಮೆರಿಕ ಅಧ್ಯಕ್ಷರೂ ಮಾಡಿಲ್ಲ. ಬಿಬಿ (ನೆತನ್ಯಾಹು) ಅವರೊಂದಿಗೆ ನನ್ನ ಉತ್ತಮ ಸಂಬಂಧವಿದೆ. ಆದರೆ ಈಗ ಅವರು ಲೆಬನಾನ್ ವಿಷಯದಲ್ಲಿ ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಬೇಕು” ಎಂದು ಟ್ರಂಪ್ ಹೇಳಿದ್ದಾರೆ.
ಆದರೆ ಇಸ್ರೇಲ್‌ನಲ್ಲಿರುವ ಅಮೆರಿಕ ರಾಯಭಾರಿ ಮೈಕ್ ಹಕಾಬಿ, ಶುಕ್ರವಾರ ಇಸ್ರೇಲ್ ಪರ ನಿಂತಿದ್ದಾರೆ. ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಅವರು, “ಇಸ್ರೇಲ್ ಮೇಲೆ ದಾಳಿ ನಡೆದಾಗ ಮಾತ್ರ ಅದು ಪ್ರತಿದಾಳಿ ನಡೆಸುತ್ತದೆ. ಹಿಜ್ಬುಲ್ಲಾ ಗುಂಡಿನ ದಾಳಿ ಮತ್ತು ಹತ್ಯೆಗಳನ್ನು ನಿಲ್ಲಿಸಿದಾಗ ಮಾತ್ರ ಕದನ ವಿರಾಮ ಸಾಧ್ಯ” ಎಂದು ಬರೆದಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement