
ಮುಂಬೈ: ಮಹಾರಾಷ್ಟ್ರದಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಜೂನ್ 6ರಂದು ಬೆಳಗ್ಗೆ ಕೊಲ್ಲಾಪುರ-ಮುಂಬೈ ಮಹಾಲಕ್ಷ್ಮಿ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಫಾತಿಮಾ ಖಾತೂನ್ (31) ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ರೈಲು ಲೋನಾವಾಲಾ ನಿಲ್ದಾಣವನ್ನು ದಾಟಿದ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆಯ ಪತಿ ತಯ್ಯಬ್, ರೈಲಿನ ಗೌರವಾರ್ಥವಾಗಿ ನವಜಾತ ಶಿಶುವಿಗೆ ಮಹಾಲಕ್ಷ್ಮಿ ಎಂದು ಹೆಸರಿಡಲು ನಿರ್ಧರಿಸಿದ್ದಾರೆ.
ತನ್ನ ಪತ್ನಿ ಮತ್ತು ನವಜಾತ ಶಿಶುವಿಗೆ ಕರ್ಜಾತ್ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್ಪಿ) ನೀಡಿದ ತ್ವರಿತ ನೆರವನ್ನು ಅವರು ಶ್ಲಾಘಿಸಿದ್ದಾರೆ. ತಿರುಪತಿಯಿಂದ ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಪ್ರಯಾಣಿಸುತ್ತಿದ್ದ ಕೆಲವು ಸಹ ಪ್ರಯಾಣಿಕರು ರೈಲಿನಲ್ಲಿ ತನ್ನ ಮಗಳು ಜನಿಸಿದ್ದಕ್ಕೆ ಇದು ಮಹಾಲಕ್ಷ್ಮೀಯ ಆಶೀರ್ವಾದ ಎಂದು ಹೇಳಿದ್ದಾರೆ. ಆದ್ದರಿಂದ ಆಕೆಗೆ ಮಹಾಲಕ್ಷ್ಮೀ ಎಂದು ಹೆಸರಿಡಲು ನಿರ್ಧರಿಸಿದ್ದೇವೆ ಎಂದು ತಯ್ಯಬ್ ಹೇಳಿದ್ದಾರೆ.

ಫಾತಿಮಾ ಅವರಿಗೆ ಜೂನ್ 20 ಕ್ಕೆ ಹೆರಿಗೆ ಆಗುತ್ತದೆ ಎಂದು ವೈದ್ಯರು ದಿನಾಂಕ ನಿಗದಿ ಮಾಡಿದ್ದರು. ಹೀಗಾಗಿ ಅವರು ಜೂನ್ 6 ರಂದು ಕೊಲ್ಲಾಪುರದಿಂದ ಮುಂಬೈಗೆ ರೈಲಿನಲ್ಲಿ ಪ್ರಯಾಣಿಸಲು ನಿರ್ಧರಿಸಿದರು. ಇಂಜಿನ್ ಸಮಸ್ಯೆಯಿಂದಾಗಿ ರೈಲು ಲೋನಾವಾಲಾದಲ್ಲಿ ಎರಡು ಗಂಟೆಗಳ ಕಾಲ ನಿಂತಿತು ಎಂದು ತಯ್ಯಬ್ ಹೇಳಿದ್ದಾರೆ. ರಾತ್ರಿ 11 ಗಂಟೆ ಸುಮಾರಿಗೆ ಫಾತಿಮಾ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡು ರೆಸ್ಟ್ ರೂಂಗೆ ತೆರಳಿದ್ದರು. ಸ್ವಲ್ಪ ಸಮಯ ಆದರೂ ಫಾತಿಮಾ ಹಿಂತಿರುಗದೇ ಇದ್ದುದನ್ನು ನೋಡಿ ತಯ್ಯಬ್ ಸಹ ರೆಸ್ಟ್ ರೂಂಗೆ ಹೋದರು. ಆಗ ಪತ್ನಿ ಫಾತಿಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ರೈಲಿನಲ್ಲಿದ್ದ ಮಹಿಳಾ ಪ್ರಯಾಣಿಕರು ಅವರಿಗೆ ಸಹಾಯ ಮಾಡಲು ಮುಂದೆ ಬಂದರು.
ನಂತರ ತಯ್ಯಬ್ ಕರ್ಜತ್ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದರು. ರೈಲ್ವೇ ನಿಲ್ದಾಣ ತಲುಪಿದ ಕೂಡಲೇ ಫಾತಿಮಾ ಮತ್ತು ಅವರ ಕುಟುಂಬವನ್ನು ರೈಲಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸರ್ಕಾರಿ ರೈಲ್ವೆ ಪೊಲೀಸರು ಈ ಮೊದಲೇ ಆಸ್ಪತ್ರೆಗೆ ಮಾಹಿತಿ ನೀಡಿದ್ದರಿಂದ ಆಸ್ಪತ್ರೆಯವರು ಫಾತಿಮಾ ಮತ್ತು ಅವರ ಮಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿದ್ದರು. ಮೂರು ದಿನಗಳ ನಂತರ ಫಾತಿಮಾ ಮತ್ತು ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ನಂತರ ಈ ಮಗುವಿಗೆ ಮಹಾಲಕ್ಷ್ಮಿ ಎಂದು ಹೆಸರಿಸಲಾಗಿದೆ. ಈಗ ತಯ್ಯಬ್- ಫಾತಿಮಾ ದಂಪತಿ ಬಾಳಿನಲ್ಲಿ ಮಹಾಲಕ್ಷ್ಮಿಯ ಆಗಮನ ಸಂತಸ ತಂದಿದೆ.
ಕೊಲ್ಲಾಪುರ-ಮುಂಬೈ ಮಹಾಲಕ್ಷ್ಮಿ ಎಕ್ಸ್ಪ್ರೆಸ್ನಲ್ಲಿ ಫಾತಿಮಾ ಖಾತುನ್ ತನ್ನ ಮಗಳು ಮಹಾಲಕ್ಷ್ಮಿಗೆ ಜನ್ಮ ನೀಡಿದ ಈ ಹೃದಯಸ್ಪರ್ಶಿ ಕಥೆಯು ಕೋಮು ಸೌಹಾರ್ದತೆ ಮತ್ತು ಮಾನವ ಸಹಾನುಭೂತಿಯ ಸೌಂದರ್ಯವನ್ನು ನಿರೂಪಿಸುತ್ತದೆ.


ನಿಮ್ಮ ಕಾಮೆಂಟ್ ಬರೆಯಿರಿ