ಲಾಹೋರ್: ಪಾಕಿಸ್ತಾನದ ರಾಷ್ಟ್ರೀಯ ಕ್ರೀಡೆಯಾದ ಹಾಕಿಗೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮುಖಭಂಗವಾಗಿದೆ. ಪಾಕಿಸ್ತಾನವು ಆಟಗಾರರು ಅನುಭವಿಸಿದ ಅಮಾನವೀಯ ಅವಮಾನಗಳು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಇಂದು, ಬುಧವಾರ (ಫೆ.೧೮) ಮುಂಜಾನೆ ಲಾಹೋರ್ ವಿಮಾನ ನಿಲ್ದಾಣಕ್ಕೆ ಮರಳಿದ ತಂಡದ ನಾಯಕ ಶಕೀಲ್ ಅಹ್ಮದ್ ಬಟ್ ಅವರು, ತಮ್ಮದೇ ದೇಶದ ಹಾಕಿ ಫೆಡರೇಷನ್ (PHF) ವಿರುದ್ಧ ಅಕ್ಷರಶಃ ಕೆಂಡಕಾರಿದ್ದಾರೆ.
“ನಾವು ಇನ್ನು ಮುಂದೆ ಈ ಮ್ಯಾನೇಜ್ಮೆಂಟ್ ಜೊತೆ ಕೆಲಸ ಮಾಡಲು ಸಾಧ್ಯವಿಲ್ಲ, ಸುಳ್ಳುಗಳ ಸರಮಾಲೆ ಸಾಕಾಗಿದೆ” ಎಂದು ಗುಡುಗಿರುವ ಬಟ್, ಆಸ್ಟ್ರೇಲಿಯಾದಲ್ಲಿ ತಾವು ಅನುಭವಿಸಿದ ನರಕಯಾತನೆಯನ್ನು ಬಿಚ್ಚಿಟ್ಟಿದ್ದಾರೆ.
ಪಾತ್ರೆ ತೊಳೆದ ಆಟಗಾರರು:
“ಪಂದ್ಯ ಆಡಲು ಹೋಗುವ ಮುನ್ನ ಆಟಗಾರರು ಅಡುಗೆ ಮನೆ ಸ್ವಚ್ಛಗೊಳಿಸಿ, ಪಾತ್ರೆಗಳನ್ನು ತೊಳೆಯಬೇಕಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ನೀವು ನಮ್ಮಿಂದ ಯಾವ ಫಲಿತಾಂಶವನ್ನು ನಿರೀಕ್ಷಿಸುತ್ತೀರಿ?” ಎಂದು ಅಮ್ಮಾದ್ ಬಟ್ ಆಕ್ರೋಶದಿಂದ ಪ್ರಶ್ನಿಸಿದ್ದಾರೆ.
ತಂಡವು ಹೋಟೆಲ್ಗೆ ತಲುಪಿದಾಗ, ಮ್ಯಾನೇಜ್ಮೆಂಟ್ ಯಾವುದೇ ಮುಂಗಡ ಹಣ ಪಾವತಿಸದ ಕಾರಣ ಬುಕ್ಕಿಂಗ್ ರದ್ದಾಗಿತ್ತು. ಇದರಿಂದಾಗಿ ತಂಡದ ಆಟಗಾರರು ಗಂಟೆಗಟ್ಟಲೆ ತಮ್ಮ ಲಗೇಜ್ಗಳೊಂದಿಗೆ ರಸ್ತೆಗಳಲ್ಲಿ ಅಲೆದಾಡಬೇಕಾಯಿತು. ಕ್ಯಾನ್ಬೆರಾಗೆ ಹೋಗುವ ವಿಮಾನಕ್ಕಾಗಿ ತಂಡವು ಸಿಡ್ನಿ ವಿಮಾನ ನಿಲ್ದಾಣದಲ್ಲಿ ಸುಮಾರು 13 ರಿಂದ 14 ಗಂಟೆಗಳ ಕಾಲ ಯಾವುದೇ ವ್ಯವಸ್ಥೆಯಿಲ್ಲದೆ ಕಾಯಬೇಕಾಯಿತು. ಇದಾದ ಮರುದಿನವೇ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ 2-3 ಅಂತರದಿಂದ ಸೋಲಬೇಕಾಯಿತು ಎಂದು ಅವರು ಹೇಳಿದ್ದಾರೆ.
ಪ್ರವಾಸದ ಸಮಯದಲ್ಲಿ ಪಾಕಿಸ್ತಾನ ಎಲ್ಲಾ ನಾಲ್ಕು ಪಂದ್ಯಗಳನ್ನು ಸೋತು ಬುಧವಾರ ಬೆಳಿಗ್ಗೆ ಲಾಹೋರ್ಗೆ ಮರಳಿತು, ಅಲ್ಲಿ ಅವರನ್ನು ಸ್ವೀಕರಿಸಲು ಯಾವುದೇ ಪಿಎಚ್ಎಫ್ ಅಧಿಕಾರಿ ಇರಲಿಲ್ಲ. ಈ ಅನುಭವವು ತುಂಬಾ ಅವಮಾನಕರವಾಗಿದೆ ಎಂದು ಬಟ್ ವರದಿಗಾರರಿಗೆ ತಿಳಿಸಿದರು.
ಆಟಗಾರರು ಸಮಯಕ್ಕೆ ಸರಿಯಾಗಿ ಆಹಾರ ಪಡೆಯಲು ಸಹ ಹೆಣಗಾಡಿದರು ಎಂದು ಅವರು ಹೇಳಿದರು.
“13 ದಿನಗಳ ಪ್ರವಾಸಕ್ಕೆ ಕೇವಲ 10 ದಿನಗಳವರೆಗೆ ಮಾತ್ರ ಏರ್ ಬಿಎನ್ಬಿ ಬುಕ್ ಮಾಡಲಾಗಿತ್ತು. ನಂತರ ಉಳಿದ ದಿನಗಳಲ್ಲಿ ನಮ್ಮನ್ನು ಇನ್ನೂ ಅಗ್ಗದ ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು” ಎಂದು ಬಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ದುಃಖಕರ ಸಂಗತಿಯೆಂದರೆ, ನಾವು 13 ದಿನಗಳ ಕಾಲ ಇರಬೇಕಾದಾಗ ಏರ್ಬಿಎನ್ಬಿ ವಸತಿ ಸೌಕರ್ಯವನ್ನು ಸಹ 10 ದಿನಗಳವರೆಗೆ ವ್ಯವಸ್ಥೆ ಮಾಡಲಾಗಿತ್ತು. 10 ದಿನಗಳ ನಂತರ ನಾವು ಅಗ್ಗದ ನಿವಾಸಕ್ಕೆ ಸ್ಥಳಾಂತರಗೊಳ್ಳಬೇಕಾಯಿತು” ಎಂದು ಬಟ್ ಹೇಳಿದರು
ಒಂದು ಕೋಟಿ ರೂ. ಹಣ ನೀಡಲಾಗಿತ್ತು…?
ರಾಷ್ಟ್ರೀಯ ಕ್ರೀಡಾ ಮಂಡಳಿ (PSB) ಆಸ್ಟ್ರೇಲಿಯಾದಲ್ಲಿ ಹಾಕಿ ತಂಡದ ವಸತಿಗಾಗಿ 10 ಮಿಲಿಯನ್ ರೂಪಾಯಿ (1 ಕೋಟಿಗೂ ಅಧಿಕ) ಹಣವನ್ನು ಬಿಡುಗಡೆ ಮಾಡಿರುವುದಾಗಿ ಖಚಿತಪಡಿಸಿದೆ. ಪಾಕಿಸ್ತಾನದ ನಾಯಕ ಬಟ್ ಅವರು ಪಾಕಿಸ್ತಾನ ಕ್ರೀಡಾ ಮಂಡಳಿ (ಪಿಎಸ್ಬಿ) ಜೊತೆ ಮಾತನಾಡಿರುವುದಾಗಿ ತಿಳಿಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಪಾಕಿಸ್ತಾನ ಹಾಕಿ ಫೆಡರೇಶನ್ಗೆ ಹಣವನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು. ಆದಾಗ್ಯೂ, ಹಣವನ್ನು ಬಿಡುಗಡೆ ಮಾಡಲಾಗಿಲ್ಲ ಎಂದು ತಂಡದ ಆಡಳಿತ ಮಂಡಳಿ ಅವರಿಗೆ ಸುಳ್ಳು ಹೇಳಿದೆ ಎಂದು ಬಟ್ ಹೇಳಿಕೊಂಡಿದ್ದಾರೆ. “ಕ್ರೀಡಾ ಮಂಡಳಿ ತಪ್ಪಿತಸ್ಥರೋ ಅಥವಾ ಪಾಕಿಸ್ತಾನ ಹಾಕಿ ಒಕ್ಕೂಟ ತಪ್ಪಿತಸ್ಥರೋ ನನಗೆ ತಿಳಿದಿಲ್ಲ. ಆದರೆ ಒಂದು ವಿಷಯ ಖಚಿತ – ನಮ್ಮ ತಂಡದ ಆಡಳಿತ ಮಂಡಳಿ ನಮಗೆ ಪದೇ ಪದೇ ಸುಳ್ಳು ಹೇಳಿದೆ” ಎಂದು ಬಟ್ ಹೇಳಿದರು.
ಇಷ್ಟು ದೊಡ್ಡ ಮೊತ್ತ ನೀಡಿದ್ದರೂ ಆಟಗಾರರಿಗೆ ಕನಿಷ್ಠ ಸೌಲಭ್ಯ ಸಿಗದಿರುವುದು ಈಗ ತನಿಖೆಗೆ ಒಳಪಟ್ಟಿದೆ.
ಬಾಯಿ ಮುಚ್ಚಿಸಲು ಬೆದರಿಕೆ ತಂತ್ರ :
ಮಾಧ್ಯಮಗಳ ಜೊತೆ ಮಾತನಾಡಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಫೆಡರೇಷನ್ ಆಟಗಾರರಿಗೆ ಬೆದರಿಕೆ ಹಾಕಿತ್ತು. ಆದರೆ, “ನಾವು ಅನುಭವಿಸಿದ ನೋವಿಗಾಗಿ ನಾನು ಇಂದು ಮಾತನಾಡುತ್ತಿದ್ದೇನೆ” ಎಂದು ಬಟ್ ಧೈರ್ಯವಾಗಿ ಹೇಳಿದ್ದಾರೆ.
ಈ ಎಲ್ಲಾ ಗೊಂದಲಗಳ ನಡುವೆ ಪಾಕಿಸ್ತಾನ ತಂಡವು ಆಸ್ಟ್ರೇಲಿಯಾ ಮತ್ತು ಜರ್ಮನಿ ವಿರುದ್ಧದ ಎಲ್ಲಾ ಪಂದ್ಯಗಳನ್ನು ಸೋತು ಹೀನಾಯ ಪ್ರದರ್ಶನ ನೀಡಿದೆ.
ತನಿಖೆಗೆ ಆದೇಶಿಸಿದ ಪ್ರಧಾನಿ:
ಈ ವಿಷಯವು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ಹಾಕಿ ಫೆಡರೇಷನ್ನ ಪೋಷಕ-ಮುಖ್ಯಸ್ಥರೂ ಆಗಿರುವ ಪ್ರಧಾನಿ ಶೆಹಬಾಜ್ ಷರೀಫ್ ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಈ ಕುರಿತು ವರದಿ ಸಿದ್ಧಪಡಿಸುತ್ತಿರುವುದಾಗಿ ರಾಷ್ಟ್ರೀಯ ಕ್ರೀಡಾ ಮಂಡಳಿ (PSB) ಡೈರೆಕ್ಟರ್ ಜನರಲ್ ನೂರ್ ಉಸ್ ಸಬಾ ತಿಳಿಸಿದ್ದಾರೆ.
ತಂಡದ ಬೇಡಿಕೆ:
ಪಾಕಿಸ್ತಾನ ಹಾಕಿ ತಂಡವು ಉತ್ತಮ ಆಟಗಾರರ ಸಂಯೋಜನೆಯನ್ನು ಹೊಂದಿದೆ, ಆದರೆ ತಂಡವು ಮುಂದೆ ಸಾಗಬೇಕಾದರೆ ತಕ್ಷಣವೇ ಒಬ್ಬ ವಿದೇಶಿ ಕೋಚ್ ಮತ್ತು ಪ್ರಾಮಾಣಿಕ ಮ್ಯಾನೇಜ್ಮೆಂಟ್ನ ಅಗತ್ಯವಿದೆ ಎಂದು ಅಹ್ಮದ್ ಬಟ್ ಒತ್ತಾಯಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ