ಸಿಎಂ ವಿಜಯ ವಿಶೇಷಾಧಿಕಾರಿಯಾಗಿ ಜ್ಯೋತಿಷಿ ವೆಟ್ರಿವೇಲ್ ನೇಮಕ ; ಕಾಂಗ್ರೆಸ್‌ ಅಸಮಾಧಾನ

 ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿ  ವಿಜಯ ಅವರ ಆಪ್ತ ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಮುಖ್ಯಮಂತ್ರಿಯವರ ವಿಶೇಷಾಧಿಕಾರಿಯಾಗಿ (OSD) ನೇಮಕ ಮಾಡಿ ಮಂಗಳವಾರ ಆದೇಶ ಹೊರಡಿಸಲಾಗಿದೆ.
ತಮಿಳುನಾಡು ಸರ್ಕಾರದ ಸಾರ್ವಜನಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಈ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ. ವೆಟ್ರಿವೇಲ್ ಅವರು ಮುಖ್ಯಮಂತ್ರಿಯವರ ರಾಜಕೀಯ ವಿಭಾಗದ ವಿಶೇಷಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದು, ಅಧಿಕಾರ ವಹಿಸಿಕೊಂಡ ದಿನದಿಂದಲೇ ಈ ನೇಮಕಾತಿ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.
ಮುಖ್ಯಮಂತ್ರಿಯವರ ವಿಶೇಷಾಧಿಕಾರಿಯಾಗಿ ವೆಟ್ರಿವೇಲ್ ಅವರು ರಾಜಕೀಯ ಸಮನ್ವಯಕಾರರಾಗಿ ಕೆಲಸ ಮಾಡಲಿದ್ದಾರೆ. ಆಡಳಿತಾತ್ಮಕ ವಿಚಾರಗಳಲ್ಲಿ ವಿವಿಧ ಇಲಾಖೆಗಳೊಂದಿಗೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುವುದು ಮತ್ತು ಮುಖ್ಯಮಂತ್ರಿಗಳು ನೀಡುವ ಉನ್ನತ ಆದ್ಯತೆಯ ವಿಶೇಷ ಕಾರ್ಯಗಳನ್ನು ನಿರ್ವಹಿಸುವುದು ಇವರ ಪ್ರಮುಖ ಜವಾಬ್ದಾರಿಯಾಗಿದೆ.
ಯಾರು ಈ ರಾಧನ್‌ ಪಂಡಿತ ?
ಇತ್ತೀಚಿನ ಚುನಾವಣೆಯಲ್ಲಿ ಟಿವಿಕೆ (TVK) ಪಕ್ಷವು ಭರ್ಜರಿ ಜಯಗಳಿಸಲಿದೆ ಎಂದು ವೆಟ್ರಿವೇಲ್ ಭವಿಷ್ಯ ನುಡಿದಿದ್ದರು. ಮತ ಎಣಿಕೆಯ ದಿನ ಟಿವಿಕೆ ಮುನ್ನಡೆ ಸಾಧಿಸುತ್ತಿದ್ದಂತೆ ವಿಜಯ ಅವರನ್ನು ಮೊದಲು ಭೇಟಿ ಮಾಡಿದವರು ಇವರೇ ಎನ್ನಲಾಗಿದೆ.
ನಟ ವಿಜಯ ರಾಜಕೀಯಕ್ಕೆ ಪ್ರವೇಶಿಸಿದ ದಿನದಿಂದಲೂ ವೆಟ್ರಿವೇಲ್ ಅವರು ಅವರ ನೆರಳಿನಂತೆ ಜೊತೆಗಿದ್ದಾರೆ. ಇತ್ತೀಚಿನ ರಾಜಕೀಯ ರ್ಯಾಲಿಗಳಲ್ಲಿಯೂ ಇವರು ವಿಜಯ್ ಜೊತೆ ಕಾಣಿಸಿಕೊಂಡಿದ್ದರು. ಒಂದು ವರ್ಷದ ಹಿಂದೆಯೇ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಅಧಿಕಾರಕ್ಕೆ ಬರಲಿದೆ ಎಂದು ಇವರು ಭವಿಷ್ಯ ನುಡಿದಿದ್ದರು. ಪಕ್ಷದ ಪ್ರಮುಖ ನಿರ್ಧಾರಗಳು ಮತ್ತು ರಾಜಕೀಯ ಸಮಾವೇಶಗಳಿಗೆ ಇವರೇ ಶುಭ ಸಮಯವನ್ನು ನಿಗದಿಪಡಿಸುತ್ತಿದ್ದರು ಎನ್ನಲಾಗಿದೆ. ಪಕ್ಷಕ್ಕೆ ‘ತಮಿಳಗ ವೆಟ್ರಿ ಕಳಗಂ’ ಎಂಬ ಹೆಸರನ್ನು ವಿಜಯ ಅವರ ಜನ್ಮ ವಿವರಗಳಿಗೆ ಅನುಗುಣವಾಗಿಯೇ ಇಡಲಾಗಿತ್ತು ಎಂದು ವೆಟ್ರಿವೇಲ್ ಈ ಹಿಂದೆ ಹೇಳಿದ್ದರು.
ಎರಡು ವರ್ಷಗಳ ಹಿಂದೆ ವಿಜಯ ಸ್ಥಾಪಿಸಿದ ಟಿವಿಕೆ ಪಕ್ಷವು, ತಮಿಳುನಾಡಿನಲ್ಲಿ ದಶಕಗಳಿಂದ ಬೇರೂರಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಪ್ರಾಬಲ್ಯವನ್ನು ಮುರಿದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ನಟನೆಯಿಂದ ರಾಜಕೀಯಕ್ಕೆ ಬಂದ ವಿಜಯ ಕಳೆದ ಭಾನುವಾರವಷ್ಟೇ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ನೇಮಕ ತಂದ ವಿವಾದ
ತಮ್ಮ ಜ್ಯೋತಿಷಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಮುಖ್ಯಮಂತ್ರಿಯವರ ವಿಶೇಷಾಧಿಕಾರಿ (OSD) ಆಗಿ ನೇಮಕ ಮಾಡಿರುವ ಮೂಲಕ ಹೊಸ ಮುಖ್ಯಮಂತ್ರಿ ವಿಜಯ ನಿರ್ಧಾರ ವಿವಾದಕ್ಕೆ ಕಾರಣವಾಗಿದೆ.
ಆಡಳಿತಾರೂಢ ಮೈತ್ರಿಕೂಟದ ಮಿತ್ರಪಕ್ಷಗಳಾದ ಕಾಂಗ್ರೆಸ್‌  ಆಕ್ಷೇಪ ವ್ಯಕ್ತಪಡಿಸಿವೆ.
ಕಾಂಗ್ರೆಸ್ ಸಂಸದ ಶಶಿಕಾಂತ ಸೆಂಥಿಲ್ ಅವರು ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿ, “ಜ್ಯೋತಿಷಿಗೆ ಮುಖ್ಯಮಂತ್ರಿಯವರ ವಿಶೇಷಾಧಿಕಾರಿ (OSD) ಹುದ್ದೆಯ ಅಗತ್ಯವೇನಿದೆ? ಯಾರಾದರೂ ವಿವರಿಸಬಲ್ಲಿರಾ?” ಎಂದು ಪ್ರಶ್ನಿಸಿದ್ದಾರೆ.
ವೆಟ್ರಿವೇಲ್ ಈ ಹಿಂದೆ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೂ ಸಲಹೆಗಾರರಾಗಿದ್ದರು. ಆದರೆ, ಅವರ ಭವಿಷ್ಯವೊಂದು ಸುಳ್ಳಾದ ನಂತರ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂಬ ವರದಿಗಳಿವೆ.
ತಮಿಳುನಾಡು ವಿಧಾನಸಭೆಯ 234 ಸ್ಥಾನಗಳಲ್ಲಿ ವಿಜಯ ಅವರ ಟಿವಿಕೆ ಪಕ್ಷವು 108 ಸ್ಥಾನಗಳನ್ನು ಗೆದ್ದಿದೆ. ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದ್ದುದರಿಂದ, ಕಾಂಗ್ರೆಸ್, ಸಿಪಿಐ, ಸಿಪಿಎಂ ಮತ್ತು ವಿಸಿಕೆ ಪಕ್ಷಗಳ ಬೆಂಬಲದೊಂದಿಗೆ ವಿಜಯ ಸರ್ಕಾರ ರಚಿಸಿದ್ದಾರೆ.
ಈ ನೇಮಕಾತಿಯು ತಮಿಳುನಾಡಿನ “ತರ್ಕಬದ್ಧ ರಾಜಕಾರಣ” ಮತ್ತು “ವೈಯಕ್ತಿಕ ನಂಬಿಕೆ”ಗಳ ನಡುವಿನ ಸಂಘರ್ಷಕ್ಕೆ ವೇದಿಕೆ ಮಾಡಿಕೊಟ್ಟಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement