ಹೈದರಾಬಾದ್: ಕ್ರಿಸ್‌ಮಸ್ ಹಬ್ಬದ ಮುನ್ನಾದಿನದಂದು ಹೈದರಾಬಾದಿನ ನಲ್ಲಕುಂಟ ಪ್ರದೇಶದಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಭೀಕರ ಘಟನೆಯೊಂದು ನಡೆದಿದೆ. ಪತ್ನಿಯ ನಡತೆಯ ಮೇಲೆ ಶಂಕೆ ವ್ಯಕ್ತಪಡಿಸಿದ ವ್ಯಕ್ತಿಯೊಬ್ಬ, ತನ್ನಿಬ್ಬರು ಮಕ್ಕಳ ಮುಂದೆಯೇ ಪತ್ನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ, ತಾಯಿಯನ್ನು ಉಳಿಸಲು ಬಂದ ಮಗಳನ್ನೂ ಬೆಂಕಿಗೆ ತಳ್ಳಿ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಮೃತ ಮಹಿಳೆಯನ್ನು ತ್ರಿವೇಣಿ ಎಂದು ಗುರುತಿಸಲಾಗಿದ್ದು, ಆರೋಪಿ ಪತಿ ವೆಂಕಟೇಶ ಎಂಬುವವನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಪೊಲೀಸರ ಪ್ರಕಾರ, ವೆಂಕಟೇಶ ತನ್ನ ಪತ್ನಿಯ ಬಗ್ಗೆ ಸಂಶಯ ಹೊಂದಿದ್ದರಿಂದ ದಂಪತಿ ನಡುವೆ ಸದಾ ಜಗಳ ನಡೆಯುತ್ತಿತ್ತು. ಡಿಸೆಂಬರ್ 24 ರಂದು ವೆಂಕಟೇಶ ಮಕ್ಕಳ ಎದುರೇ ಪತ್ನಿಯ ಮೇಲೆ ಹಲ್ಲೆ ನಡೆಸಿ, ನಂತರ ಅವಳ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ವೇಳೆ ತಾಯಿಯನ್ನು ರಕ್ಷಿಸಲು ಹೋದ ಆರು ವರ್ಷದ ಮಗಳನ್ನೂ ಈತ ಬೆಂಕಿಗೆ ತಳ್ಳಿ ಪರಾರಿಯಾಗಿದ್ದಾನೆ.
ಕಿರುಚಾಟ ಕೇಳಿ ನೆರೆಹೊರೆಯವರು ಧಾವಿಸಿ ಬರುವಷ್ಟರಲ್ಲಿ ತ್ರಿವೇಣಿ ತೀವ್ರ ಸುಟ್ಟ ಗಾಯಗಳಿಂದ ಸಾವಿಗೀಡಾಗಿದ್ದಾರೆ. ಅದೃಷ್ಟವಶಾತ್ ಆರು ವರ್ಷದ ಪುತ್ರಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
“ತ್ರಿವೇಣಿ ತನ್ನ ಇಬ್ಬರು ಮಕ್ಕಳ ಭವಿಷ್ಯಕ್ಕಾಗಿ ಹಗಲಿರುಳು ಹೋಟೆಲ್ ಮತ್ತು ಮನೆಗೆಲಸ ಮಾಡಿ ದುಡಿಯುತ್ತಿದ್ದಳು. ಆದರೆ ವೆಂಕಟೇಶ ಒಬ್ಬ ಕುಡುಕ ಮತ್ತು ನಿಷ್ಪ್ರಯೋಜಕನಾಗಿದ್ದ. ಇತ್ತೀಚೆಗಷ್ಟೇ ತ್ರಿವೇಣಿ ಅವನಿಗೆ ಒಂದು ಲಕ್ಷ ರೂಪಾಯಿ ಬೆಲೆಯ ಬೈಕ್ ಕೊಡಿಸಿದ್ದಳು, ಆದರೆ ಈತ ಅದನ್ನು ಕೇವಲ 15,000 ರೂಪಾಯಿಗೆ ಮಾರಿ ಕುಡಿದಿದ್ದ ” ಎಂದು ನೆರೆಮನೆಯ ಲಕ್ಷ್ಮಿ ಎಂಬುವವರು ಹೇಳಿದ್ದಾರೆ.
ಪಶ್ಚಾತ್ತಾಪದ ನಾಟಕವಾಡಿ ಕರೆತಂದಿದ್ದ
ವೆಂಕಟೇಶ ಮತ್ತು ತ್ರಿವೇಣಿ ಅವರದ್ದು ಪ್ರೇಮ ವಿವಾಹವಾಗಿತ್ತು. ಈ ಹಿಂದೆಯೂ ಕಿರುಕುಳ ತಾಳಲಾರದೆ ತ್ರಿವೇಣಿ ತವರು ಮನೆಗೆ ಹೋಗಿದ್ದರು ಮತ್ತು ಪೊಲೀಸರಿಗೂ ದೂರು ನೀಡಿದ್ದರು. ಆದರೆ, ವೆಂಕಟೇಶ ಕ್ಷಮೆ ಕೇಳಿ, ತಾನು ತಿದ್ದಿಕೊಳ್ಳುವುದಾಗಿ ಹಿರಿಯರ ಮುಂದೆ ಭರವಸೆ ನೀಡಿ ತ್ರಿವೇಣಿಯನ್ನು ಮನೆಗೆ ಕರೆತಂದಿದ್ದ. ಹಿಂತಿರುಗಿ ಬಂದ ಕೆಲವೇ ದಿನಗಳಲ್ಲಿ ಈ ಘೋರ ಕೃತ್ಯ ಎಸಗಿದ್ದಾನೆ.
ಪ್ರಸ್ತುತ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಕೌಟುಂಬಿಕ ಹಿಂಸಾಚಾರ ಮತ್ತು ಸಂಶಯದ ಬೆನ್ನೇರಿದ ಈ ಘಟನೆ ಸ್ಥಳೀಯವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ