
ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಭೀಕರ ಹಿಂಸಾಚಾರ ನಡೆದಿದ್ದು, ಪ್ರತ್ಯೇಕತಾವಾದಿ ಗುಂಪು ‘ಬಲೂಚ್ ಲಿಬರೇಶನ್ ಆರ್ಮಿ’ (BLA) ನಡೆಸಿದ ‘ಆಪರೇಷನ್ ಹೆರೋಫ್ – ಫೇಸ್ 2’ (Operation Herof Phase II) ದಾಳಿಯಲ್ಲಿ ಪಾಕಿಸ್ತಾನದ ಸುಮಾರು 80ಕ್ಕೂ ಹೆಚ್ಚು ಸೈನಿಕರು, ಪೊಲೀಸ್ ಅಧಿಕಾರಿಗಳು ಮತ್ತು ಗುಪ್ತಚರ ದಳದ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಜನವರಿ 31 ರಂದು ಬಿಎಲ್‌ಎ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ಬಿಎಲ್‌ಎ ವಕ್ತಾರ ಜೀಯಾಂದ್ ಬಲೂಚ್ ನೀಡಿರುವ ಮಾಹಿತಿಯ ಪ್ರಕಾರ, ಬಲೂಚಿಸ್ತಾನದಾದ್ಯಂತ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಸಮನ್ವಯ ದಾಳಿಗಳನ್ನು ನಡೆಸಲಾಗಿದೆ. ಸುಮಾರು ಹತ್ತು ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಕ್ವೆಟ್ಟಾ, ಗ್ವಾದರ್, ಪಂಜಗುರ್, ಮಸ್ತುಂಗ್ ಮತ್ತು ಕಲಾತ್ ಸೇರಿದಂತೆ ಡಜನ್ಗೂ ಹೆಚ್ಚು ನಗರಗಳಲ್ಲಿನ ಸೇನಾ ನೆಲೆಗಳು ಮತ್ತು ಆಡಳಿತಾತ್ಮಕ ಕಚೇರಿಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳು ಈ ಭೀಕರ ದಾಳಿಯನ್ನು ಪುಷ್ಟೀಕರಿಸುತ್ತಿವೆ.

ಈ ದಾಳಿಗಳಲ್ಲಿ 84 ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು, 18 ಮಂದಿಯನ್ನು ಒತ್ತೆಸೆರೆಯಾಗಿ ಇರಿಸಿಕೊಳ್ಳಲಾಗಿದೆ ಎಂದು ಬಲೂಚ್ ಲಿಬರೇಶನ್ ಆರ್ಮಿ’ (BLA) ಹೇಳಿಕೊಂಡಿದೆ.
ಕಾರ್ಯಾಚರಣೆಯಲ್ಲಿ 30ಕ್ಕೂ ಹೆಚ್ಚು ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಮತ್ತು ಜೈಲುಗಳನ್ನು ಧ್ವಂಸಗೊಳಿಸಲಾಗಿದೆ. 20ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಅದು ಹೇಳಿದೆ. ಇದೇ ವೇಳೆ ಈ ದಾಳಿಯಲ್ಲಿ ಬಿಎಲ್‌ಎ ಗುಂಪಿನ ‘ಮಜೀದ್ ಬ್ರಿಗೇಡ್’ನ ಏಳು ಮಂದಿ ಹೋರಾಟಗಾರರು ಸಹ ಮೃತಪಟ್ಟಿದ್ದಾರೆ ಎಂದು ಸಂಘಟನೆ ಒಪ್ಪಿಕೊಂಡಿದೆ.
ದಶಕಗಳ ಕಾಲದ ಸಂಘರ್ಷ
ಬಲೂಚಿಸ್ತಾನ್ ಪಾಕಿಸ್ತಾನದ ಅತಿದೊಡ್ಡ, ಆದರೆ ಕಡಿಮೆ ಜನಸಂಖ್ಯೆ ಹೊಂದಿರುವ ಪ್ರಾಂತ್ಯವಾಗಿದೆ. ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಹಕ್ಕು ಮತ್ತು ರಾಜಕೀಯ ಸ್ವಾಯತ್ತತೆಗಾಗಿ ದಶಕಗಳಿಂದ ಹೋರಾಟ ನಡೆಯುತ್ತಿದೆ. ಪಾಕಿಸ್ತಾನಿ ಸೇನೆಯು ಇಲ್ಲಿನ ನಾಗರಿಕರ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಕಾನೂನುಬಾಹಿರ ಅಪಹರಣಗಳನ್ನು ಮಾಡುತ್ತಿದೆ ಎಂದು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳು ಆರೋಪಿಸುತ್ತಲೇ ಬಂದಿವೆ.
ಪಾಕಿಸ್ತಾನ ಸರ್ಕಾರದ ಪ್ರತಿಕ್ರಿಯೆ
ಈ ಭಾರಿ ಪ್ರಮಾಣದ ದಾಳಿಯ ಕುರಿತು ಪಾಕಿಸ್ತಾನ ಸರ್ಕಾರ ಅಥವಾ ಸೇನೆಯಿಂದ ಇದುವರೆಗೆ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಸಾಮಾನ್ಯವಾಗಿ ಇಂತಹ ಘಟನೆಗಳಲ್ಲಿ ಉಗ್ರಗಾಮಿ ಗುಂಪುಗಳು ನೀಡುವ ಸಾವಿನ ಸಂಖ್ಯೆಗೂ ಮತ್ತು ಸರ್ಕಾರ ನೀಡುವ ಅಧಿಕೃತ ಅಂಕಿಅಂಶಗಳಿಗೂ ಭಾರಿ ವ್ಯತ್ಯಾಸವಿರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಇಡೀ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಮಾಹಿತಿ ಸಂವಹನಕ್ಕೆ ಅಡ್ಡಿಯುಂಟಾಗಿದೆ ಎಂದು ವರದಿಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ