‘ಆಪರೇಷನ್ ಸಿಂಧೂರ’ ವೇಳೆ ‘ಉಗ್ರರ’ ಪ್ರಧಾನ ಕಚೇರಿ ಸಂಪೂರ್ಣ ಧ್ವಂಸ : ಪಾಕಿಸ್ತಾನ ಕಂಗಾಲಾಗಿತ್ತು ; ಸತ್ಯ ಒಪ್ಪಿಕೊಂಡ ಎಲ್‌ಇಟಿ ಕಮಾಂಡರ್‌…!

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ (Operation Sindoor) ಸೇನಾ ಕಾರ್ಯಾಚರಣೆಯು ಪಾಕಿಸ್ತಾನದ ಬೆನ್ನೆಲುಬು ಮುರಿದಿದೆ. ಲಷ್ಕರ್-ಎ-ತೊಯ್ಬಾ (LeT) ಭಯೋತ್ಪಾದಕ ಸಂಘಟನೆಯ ಉನ್ನತ ಕಮಾಂಡರ್ ಹಫೀಜ್ ಅಬ್ದುರ್ ರೌಫ್, ಭಾರತದ ಈ ದಾಳಿಯಿಂದ ಪಾಕಿಸ್ತಾನದ ಮುರುದ್ಕೆಯಲ್ಲಿರುವ ಮರ್ಕಜ್ -ಎ- ತೊಯ್ಬಾ ಪ್ರಧಾನ ಕಚೇರಿ ನಾಶವಾಗಿರುವುದಾಗಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ.
  ಆಪರೇಷನ್ ಸಿಂಧೂರ’ ವೇಳೆ ನಮಗೆ ಹೆಚ್ಚಿನ ನಷ್ಟ ಆಗಿಲ್ಲ. ನಾವೇ ಗೆದ್ದಿದ್ದೇವೆ ಎಂದು ಸುಳ್ಳು ಹೇಳುತ್ತ ಬಂದ  ಪಾಕಿಸ್ತಾನಕ್ಕೆ ರೌಫ್‌ನ ಈ ಹೇಳಿಕೆಗಳು ತಪರಾಕಿ ಕೊಟ್ಟಂತಾಗಿದೆ.
ಸಭೆಯೊಂದರಲ್ಲಿ ಮಾತನಾಡಿರುವ ಅಮೆರಿಕ ಘೋಷಿತ ಜಾಗತಿಕ ಉಗ್ರ ರೌಫ್, ‘ಆಪರೇಷನ್ ಸಿಂಧೂರ’ ಬಹಳ ದೊಡ್ಡ ದಾಳಿಯಾಗಿದ್ದು, ಉಗ್ರರ ತರಬೇತಿ ಶಿಬಿರದ ಇಡೀ ಕಟ್ಟಡವನ್ನು ಧ್ವಂಸಗೊಳಿಸಲಾಗಿದೆ ಎಂದು ಹೇಳಿದ್ದಾನೆ.
 ಆತ ಭಾರತದ ದಾಳಿಯ ತೀವ್ರತೆಯನ್ನು ವಿವರಿಸಿದ್ದಾನೆ. “ಮೇ 6 ಮತ್ತು 7ರ ಮಧ್ಯರಾತ್ರಿ ಮುರುದ್ಕೆಯಲ್ಲಿ ನಡೆದದ್ದು ಭೀಕರ ದಾಳಿ.  ನಾವು ಸೇರುತ್ತಿದ್ದ ಜಾಗ ಮಸೀದಿಯಾಗಿ ಉಳಿದಿಲ್ಲ. ನಾವು ಈಗ ಅಲ್ಲಿ ಕುಳಿತುಕೊಳ್ಳಲು ಸಹ ಆಗುವುದಿಲ್ಲ. ಅದು ಸಂಪೂರ್ಣ ಧ್ವಂಸಗೊಂಡಿದೆ ಎಂದು ಹೇಳಿದ್ದಾನೆ. ಈ ಮೂಲಕ ಭಾರತದ ಕಾರ್ಯಾಚರಣೆಯು ಅದರ ಉದ್ದೇಶಿತ ಗುರಿಯನ್ನು ತಲುಪಿದೆ ಎಂದು ಎಲ್‌ಇಟಿ (LET) ಭಯೋತ್ಪಾದಕ ಸಂಘಟನೆಯೇ ದೃಢಪಡಿಸಿದೆ. ನರೇಂದ್ರ ಮೋದಿ ಅವರು ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿದ್ದೇವೆ ಎಂದು ಹೇಳುತ್ತಾರೆ, ಆದರೆ ವಾಸ್ತವದಲ್ಲಿ ಇದು ಪಾಕಿಸ್ತಾನದ ಮೇಲಾದ ದಾಳಿ. ಯುದ್ಧದ ನಿಯಮಗಳೇ ಬದಲಾಗಿವೆ,” ಎಂದು ಆತ ಅಳಲು ತೋಡಿಕೊಂಡಿದ್ದಾನೆ.
ರೌಫ್ ಎಲ್‌ಇಟಿಯ ಕಾರ್ಯಾಚರಣೆಯ ಕಮಾಂಡರ್ ಆಗಿದ್ದು, ಭಯೋತ್ಪಾದಕರಿಗೆ ತರಬೇತಿ ನೀಡುವುದರಲ್ಲಿ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಪಾಕಿಸ್ತಾನ ಸೇನೆ ಪ್ರಾಯೋಜಿತ ಲಾಂಚ್‌ಪ್ಯಾಡ್‌ಗಳಿಂದ ಉಗ್ರರನ್ನು ಗಡಿಯೊಳಗೆ ನುಸುಳಲು ಸಹಾಯ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾನೆ. ಈ ಹಿಂದೆ ವೈರಲ್ ಆದ ಫೋಟೋಗಳಲ್ಲಿ ಆಪರೇಷನ್ ಸಿಂಧೂರದಲ್ಲಿ ಹತರಾದ ಭಯೋತ್ಪಾದಕರ ಅಂತ್ಯಕ್ರಿಯೆಯ ವೇಳೆ ಈತನೇ ನೇತೃತ್ವ ವಹಿಸಿರುವುದು ಕಂಡುಬಂದಿತ್ತು. ಇದಾದ ಕೆಲವು ತಿಂಗಳು ನಂತರ ಇದೀಗ ಮುರ್ಡೆಯಲ್ಲಿ ಏನಾಯಿತು ಎಂಬುದುರ ಕುರಿತು ಮಾತನಾಡಿದ್ದು, ಹಾನಿಯಾಗಿದ್ದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ.
https://x.com/i/status/2011802954081435656
ಭಾರತ- ಪಾಕ್ ಸೇನಾ ಸಂಘರ್ಷದ ವೇಳೆ ಚೀನಾದ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳನ್ನು ಪಾಕಿಸ್ತಾನ ಮತ್ತು ಎಲ್ಇಟಿ ಬಳಸಿದೆ ಎಂಬುದನ್ನುಈತ ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ. ದೇವರು ನಮ್ಮನ್ನು ರಕ್ಷಿಸಿದನು ಎಂದು ಹೇಳುತ್ತಾ, ಭಾರತ ಭಾರೀ ತಮಗೆ ಹೊಡೆತ ನೀಡಿದೆ ಎಂಬುದನ್ನು ಒಪ್ಪಿಕೊಂಡಿದ್ದಾನೆ.
 ಇದು ಪಾಕಿಸ್ತಾನದ ಭಯೋತ್ಪಾದನೆಯ ಮುಖವಾಡವನ್ನು ಮತ್ತೊಮ್ಮೆ ಬಯಲು ಮಾಡಿದೆ. ಭಯೋತ್ಪಾದಕರಿಗೆ ತನ್ನ ನೆಲದಲ್ಲಿ ಜಾಗ ನೀಡಿಲ್ಲ ಎಂದು ಪಾಕಿಸ್ತಾನ ವಾದಿಸುತ್ತ ಬಂದಿದ್ದರೂ ಉಗ್ರ ರೌಫ್ ಹೇಳಿಕೆಯ ವೀಡಿಯೊಗಳು ಸಾಕಷ್ಟು ವೈರಲ್ ಆಗಿದ್ದು, ಪಾಕಿಸ್ತಾನದ ಉಗ್ರನೀತಿಯನ್ನು ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಗಜ್ಜಾಹೀರು ಮಾಡಿದೆ.
ಏನಿದು ಆಪರೇಷನ್ ಸಿಂಧೂರ?
ಹಿನ್ನೆಲೆ: ಕಳೆದ ವರ್ಷ ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ 26 ಜನರು ಸಾವಿಗೀಡಾಗಿದ್ದರು.ಇದಕ್ಕೆ ಪ್ರತಿಯಾಗಿ ಭಾರತ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆಯನ್ನು ಕೈಗೊಂಡು, ಪಾಕಿಸ್ತಾನ ಮತ್ತು ಪಿಒಕೆ (PoK) ವ್ಯಾಪ್ತಿಯಲ್ಲಿದ್ದ 9 ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿತು. ಭಾರತ ಹಾಗೂ ಪಾಕಿಸ್ತಾನದ ನಡುವೆ  ಡ್ರೋನ್ ಮತ್ತು ಯುಎವಿಗಳನ್ನು (UAV) ಬಳಸಿದ ನಾಲ್ಕು ದಿನಗಳ ತೀವ್ರ ಮಿಲಿಟರಿ ಸಂಘರ್ಷ ನಡೆದಿತ್ತು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement