1.1 ಕೋಟಿ ರೂ. ಬಹುಮಾನ ಹೊಂದಿದ್ದ ಟಾಪ್ ನಕ್ಸಲ್ ನಾಯಕ ಗಣೇಶ ಉಯಿಕೆ ಹತ

ಭುವನೇಶ್ವರ/ಹೈದರಾಬಾದ್: ಒಡಿಶಾದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಗುರುವಾರ ಐತಿಹಾಸಿಕ ಯಶಸ್ಸು ಸಾಧಿಸಿವೆ. ಸಿಪಿಐ (ಮಾವೋವಾದಿ) ಸಂಘಟನೆಯ ಕೇಂದ್ರ ಸಮಿತಿ ಸದಸ್ಯ ಹಾಗೂ ಒಡಿಶಾ ಕಾರ್ಯಾಚರಣೆಗಳ ಮುಖ್ಯಸ್ಥ, 69 ವರ್ಷದ ಗಣೇಶ ಉಯಿಕೆ ಅಲಿಯಾಸ್ ಪಕ್ಕಾ ಹನುಮಂತು ಎಂಬಾತನನ್ನು ಬಿಎಸ್ಎಫ್ (BSF) ಮತ್ತು ಸಿಆರ್‌ಪಿಎಫ್ (CRPF) ಪಡೆಗಳು ಎನ್ಕೌಂಟರ್‌ನಲ್ಲಿ ಹೊಡೆದುರುಳಿಸಿವೆ.
ಕಂಧಮಾಲ್ ಮತ್ತು ಗಂಜಾಂ ಜಿಲ್ಲೆಗಳ ಗಡಿಭಾಗದ ರಾಂಪಾ ಅರಣ್ಯ ಪ್ರದೇಶದಲ್ಲಿ ನಡೆದ ಈ ಗುಂಡಿನ ಚಕಮಕಿಯಲ್ಲಿ ಉಯಿಕೆ ಸೇರಿದಂತೆ ಒಟ್ಟು ಏಳು ಮಂದಿ ಮಾವೋವಾದಿಗಳು ಮೃತಪಟ್ಟಿದ್ದಾರೆ. ಇದರಲ್ಲಿ ಇಬ್ಬರು ಮಹಿಳಾ ಕೆಡರ್‍ಗಳು ಸಹ ಸೇರಿದ್ದಾರೆ.
ಹತನಾದ ಗಣೇಶ ಉಯಿಕೆ ತಲೆಯ ಮೇಲೆ ಬರೋಬ್ಬರಿ 1.1 ಕೋಟಿ ರೂಪಾಯಿ ಬಹುಮಾನವಿತ್ತು. ಈತ ಕಳೆದ 40 ವರ್ಷಗಳಿಂದ ದಂಡಕಾರಣ್ಯ ವಿಶೇಷ ವಲಯ ಸಮಿತಿಯಲ್ಲಿ (DKSZC) ಸಕ್ರಿಯನಾಗಿದ್ದ.
 ತೆಲಂಗಾಣದ ನಲ್ಗೊಂಡ ಮೂಲದವನಾದ ಉಯಿಕೆ, ಮಾವೋವಾದಿ ಸಂಘಟನೆಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ‘ಕೇಂದ್ರ ಸಮಿತಿ’ಯ ಬೆರಳೆಣಿಕೆಯ ಸದಸ್ಯರಲ್ಲಿ ಒಬ್ಬನಾಗಿದ್ದ. ಈತನ ಸಾವು ಸಂಘಟನೆಯ ಬೆನ್ನೆಲುಬನ್ನೇ ಮುರಿದಂತಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಎನ್ಕೌಂಟರ್ ನಡೆದ ಸ್ಥಳದಿಂದ ಇನ್ಸಾಸ್ (INSAS) ರೈಫಲ್‌ಗಳು ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
‘ನಕ್ಸಲ್ ಮುಕ್ತ ಭಾರತ’ದತ್ತ ಹೆಜ್ಜೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಒಡಿಶಾ ಡಿಜಿಪಿ ವೈ.ಬಿ. ಖುರಾನಿಯಾ ಅವರು ಈ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ. ಮಾರ್ಚ್ 31, 2026ರ ವೇಳೆಗೆ ದೇಶವನ್ನು ಸಂಪೂರ್ಣವಾಗಿ ನಕ್ಸಲ್ ಮುಕ್ತಗೊಳಿಸುವ ಸರ್ಕಾರದ ಗುರಿಗೆ ಈ ಕಾರ್ಯಾಚರಣೆ ದೊಡ್ಡ ಬಲ ನೀಡಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement