ವೀಡಿಯೊ…| ವಡೋದರಾ ಬಳಿ ಗಂಭೀರಾ ಸೇತುವೆ ಕುಸಿತ : ನದಿಗೆ ಬಿದ್ದ ಹಲವು ವಾಹನಗಳು, 9 ಜನರು ಸಾವು

ವಡೋದರಾ : ಗುಜರಾತಿನ ವಡೋದರಾದ ಪದ್ರಾ ತಾಲೂಕಿನ ಗಂಭೀರಾ-ಮುಜಪುರ ಸೇತುವೆಯ ಒಂದು ಭಾಗ ಬುಧವಾರ ಕುಸಿದುಬಿದ್ದು ಹಲವಾರು ವಾಹನಗಳು ಮಹಿಸಾಗರ (ಮಹಿ) ನದಿಗೆ ಬಿದ್ದಿವೆ ಹಾಗೂ ಒಂಬತ್ತು ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಆನಂದ ಮತ್ತು ವಡೋದರಾ ಜಿಲ್ಲೆಗಳನ್ನು ಸಂಪರ್ಕಿಸುವ ಈ ಸೇತುವೆಯು ಬೆಳಗಿನ ಸಂಚಾರದ ಸಮಯದಲ್ಲಿ ವಾಹನಗಳು ಸಂಚರಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ.
ಆರಂಭಿಕ ವರದಿಗಳ ಪ್ರಕಾರ, ಎರಡು ಟ್ರಕ್‌ಗಳು, ಬೊಲೆರೊ ಎಸ್‌ಯುವಿ ಮತ್ತು ಪಿಕಪ್ ವ್ಯಾನ್ ಸೇರಿದಂತೆ ನಾಲ್ಕು ವಾಹನಗಳು ಸೇತುವೆ ಕುಸಿದಿದ್ದರಿಂದ ನೀರಿಗೆ ಬಿದ್ದಿವೆ. ವಾಹನಗಳು ನದಿಗೆ ಬೀಳುವ ಕೆಲವೇ ಕ್ಷಣಗಳ ಮೊದಲು ದೊಡ್ಡ ಬಿರುಕು ಬಿಟ್ಟ ಶಬ್ದ ಕೇಳಿಬಂದಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಗ್ನಿಶಾಮಕ ದಳದ ತಂಡಗಳು, ಸ್ಥಳೀಯ ಪೊಲೀಸರು ಮತ್ತು ವಡೋದರಾ ಜಿಲ್ಲಾಡಳಿತದವರು ಸ್ಥಳಕ್ಕೆ ಧಾವಿಸಿ ತಕ್ಷಣದ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಸ್ಥಳೀಯರು ಸಹ ಸೇರಿಕೊಂಡು, ಅವಶೇಷಗಳಿಂದ ಗಾಯಾಳುಗಳನ್ನು ಹೊರತೆಗೆಯುತ್ತಿದ್ದಾರೆ. ಈವರೆಗೆ, ಐವರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ.
ವಡೋದರಾ ಜಿಲ್ಲಾಧಿಕಾರಿ, “… ನಾವು ಇಲ್ಲಿಯವರೆಗೆ 9 ಶವಗಳನ್ನು ಹೊರತೆಗೆದಿದ್ದೇವೆ. 5 ಜನರು ಗಾಯಗೊಂಡಿದ್ದಾರೆ, 6 ನೇ ಗಾಯಾಳು ಇದೀಗ ಪತ್ತೆಯಾಗಿದ್ದು, ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ…” ಎಂದು ಹೇಳಿದ್ದಾರೆ.
ಘಟನೆ ನಡೆದ ಸ್ವಲ್ಪ ಸಮಯದ ನಂತರ ಪದ್ರಾ ಶಾಸಕ ಚೈತನ್ಯಸಿಂಹ ಜಲಾ ಸ್ಥಳಕ್ಕೆ ಭೇಟಿ ನೀಡಿದರು. ಕುಸಿತದ ಕಾರಣದ ಬಗ್ಗೆ ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಪ್ರಮುಖ ಸುದ್ದಿ :-   ಮೈ ಜುಂ ಎನ್ನುವ ವೀಡಿಯೊ..| ದೈತ್ಯ ಕಾಳಿಂಗ ಸರ್ಪವನ್ನು ಬರಿ ಕೈಯಲ್ಲಿ ನಿರ್ಭಯವಾಗಿ- ಆರಾಮವಾಗಿ ಹಿಡಿದು ನಿಲ್ಲಿಸಿದ ವ್ಯಕ್ತಿ ; ವೀಕ್ಷಿಸಿ

ಮಧ್ಯ ಗುಜರಾತನ್ನು ಸೌರಾಷ್ಟ್ರಕ್ಕೆ ಸಂಪರ್ಕಿಸುವ ಪ್ರಮುಖ ಸೇತುವೆಯಾದ ಇದು ಆನಂದ, ವಡೋದರಾ, ಭರೂಚ್ ಮತ್ತು ಅಂಕಲೇಶ್ವರ ನಡುವಿನ ಪ್ರಯಾಣಿಕರಿಗೆ ಅತ್ಯಗತ್ಯವಾದ ಸೇತುವೆಯಾಗಿದೆ. ಇದನ್ನು ಆಡಳಿತವು ಬಹಳ ಹಿಂದಿನಿಂದಲೂ ನಿರ್ಲಕ್ಷಿಸಿಕೊಂಡು ಬಂದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
“ಗಂಭೀರ ಸೇತುವೆಯು ಸಂಚಾರ ಅಪಾಯವಾಗಿ ಮಾತ್ರವಲ್ಲದೆ ಆತ್ಮಹತ್ಯಾ ತಾಣವಾಗಿಯೂ ಕುಖ್ಯಾತವಾಗಿದೆ. ಅದರ ಸ್ಥಿತಿಯ ಬಗ್ಗೆ ಪದೇ ಪದೇ ಎಚ್ಚರಿಕೆಗಳನ್ನು ನಿರ್ಲಕ್ಷಿಸಲಾಗಿದೆ” ಎಂದು ನಿವಾಸಿಯೊಬ್ಬರು ಹೇಳಿದರು.
ಕಾಣೆಯಾದ ವ್ಯಕ್ತಿಗಳಿಗಾಗಿ ನದಿಯಲ್ಲಿ ಹುಡುಕಾಟ ಮುಂದುವರೆದಿದೆ ಮತ್ತು ಮುಳುಗಿದ ವಾಹನಗಳನ್ನು ಮರಳಿ ಎತ್ತಲು ಕ್ರೇನ್‌ಗಳನ್ನು ತರಲಾಗಿದೆ.

ಪ್ರಮುಖ ಸುದ್ದಿ :-   ಭಾರತದಲ್ಲಿ ಉಪಗ್ರಹ ಆಧಾರಿತ ಬ್ರಾಡ್‌ ಬ್ಯಾಂಡ್ ಸೇವೆ ನೀಡಲು ಎಲೋನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್‌ ಗೆ ಅನುಮೋದನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement