ಪಾಕಿಸ್ತಾನದ ವಾಯುದಾಳಿಯಲ್ಲಿ ಮೂವರು ಅಫ್ಘಾನಿಸ್ತಾನ ಕ್ರಿಕೆಟಿಗರು ಸಾವು ; ತ್ರಿಕೋನ ಸರಣಿಯಿಂದ ಹಿಂದೆ ಸರಿದ ಅಫ್ಘಾನಿಸ್ತಾನ

ಕಾಬೂಲ್: ಪಾಕಿಸ್ತಾನಿ ಸೇನೆಯು ಅಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದಲ್ಲಿ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ ಮೂವರು ಅಫ್ಘಾನಿಸ್ತಾನದ ಕ್ರಿಕೆಟಿಗರು ಮೃತಪಟ್ಟಿದ್ದಾರೆ. ಮೃತರಾದ ಕ್ರಿಕೆಟಿಗರನ್ನು ಕಬೀರ್, ಸಿಬ್ಘತುಲ್ಲಾ ಮತ್ತು ಹಾರೂನ್ ಎಂದು ಗುರುತಿಸಲಾಗಿದೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ACB) ತಿಳಿಸಿದೆ. ಈ ದಾಳಿಯಲ್ಲಿ ಇತರ  ಐವರು ನಾಗರಿಕರು ಸಾವಿಗೀಡಾಗಿದ್ದಾರೆ.
ಕ್ರಿಕೆಟಿಗರು ಪಾಕಿಸ್ತಾನದ ಗಡಿಯಲ್ಲಿರುವ ಪೂರ್ವ ಪಕ್ತಿಕಾ ಪ್ರಾಂತ್ಯದ ಉರ್ಗುನ್‌ನಿಂದ ಶರಾನಾಕ್ಕೆ ಸೌಹಾರ್ದ ಪಂದ್ಯವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಹೇಳಿಕೆಯ ಪ್ರಕಾರ, “ಅವರು ಉರ್ಗುನ್‌ಗೆ ಹಿಂತಿರುಗಿದ ನಂತರ ಒಂದು ಸಮುದಾಯದ ಸಮಾರಂಭದಲ್ಲಿ ಪಾಲ್ಗೊಂಡಿದ್ದಾಗ ಅವರ ಮೇಲೆ ದಾಳಿ ನಡೆದಿದೆ. ಮತ್ತು ಇದು “ಪಾಕಿಸ್ತಾನದ ಆಡಳಿತವು ನಡೆಸಿದ ಹೇಡಿತನದ ದಾಳಿ” ಎಂದು ಬಣ್ಣಿಸಿದೆ. ದಾಳಿಯ ಕುರಿತು ಹೆಚ್ಚಿನ ವಿವರಗಳನ್ನು ಎಸಿಬಿ ನೀಡಿಲ್ಲ.

ಕ್ರಿಕೆಟ್‌ ಸರಣಿಯಿಂದ ಹಿಂದೆ ಸರಿದ ಎಸಿಬಿ
ಈ ಘಟನೆಯ ನಂತರ, ಮೃತರ ಗೌರವಾರ್ಥವಾಗಿ ಮುಂದಿನ ತಿಂಗಳು ಪಾಕಿಸ್ತಾನ ಮತ್ತು ಶ್ರೀಲಂಕಾ ಜೊತೆ ನಡೆಯಲಿದ್ದ ತ್ರಿಕೋನ ಸರಣಿಯಿಂದ ಅಫ್ಘಾನಿಸ್ತಾನ ಹಿಂದೆ ಸರಿದಿದೆ.ಎಸಿಬಿ ತನ್ನ ‘ಎಕ್ಸ್’ (ಹಿಂದಿನ ಟ್ವಿಟರ್) ಖಾತೆಯಲ್ಲಿ, “ಪಕ್ತಿಕಾ ಪ್ರಾಂತ್ಯದ ಉರ್ಗುನ್ ಜಿಲ್ಲೆಯ ಧೈರ್ಯಶಾಲಿ ಕ್ರಿಕೆಟಿಗರ ದುರಂತ ಹುತಾತ್ಮತೆಯ ಬಗ್ಗೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ತೀವ್ರ ದುಃಖ ಮತ್ತು ಶೋಕವನ್ನು ವ್ಯಕ್ತಪಡಿಸುತ್ತದೆ. ಇವರನ್ನು ಪಾಕಿಸ್ತಾನದ ಆಡಳಿತವು ನಡೆಸಿದ ಹೇಡಿತನದ ದಾಳಿಯಲ್ಲಿ ಗುರಿಯಾಗಿಸಲಾಗಿದೆ” ಎಂದು ಪೋಸ್ಟ್ ಮಾಡಿದೆ.

ಅಫ್ಘಾನಿಸ್ತಾನ ಟಿ-20 ತಂಡದ ನಾಯಕ ರಶೀದ್ ಖಾನ್ ಅವರು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ ಮತ್ತು ಸರಣಿಯಿಂದ ಹಿಂದೆ ಸರಿದ ಎಸಿಬಿ ನಿರ್ಧಾರವನ್ನು ಸ್ವಾಗತಿಸಿದ್ದಾರೆ. “ಅಫ್ಘಾನಿಸ್ತಾನದ ಮೇಲೆ ಇತ್ತೀಚೆಗೆ ಪಾಕಿಸ್ತಾನ ನಡೆಸಿದ ವಾಯುದಾಳಿಗಳಲ್ಲಿ ನಾಗರಿಕರ ಜೀವಹಾನಿಯಿಂದ ನನಗೆ ತೀವ್ರ ದುಃಖವಾಗಿದೆ. ಈ ದುರಂತದಲ್ಲಿ ಮಹಿಳೆಯರು, ಮಕ್ಕಳು ಮತ್ತು ವಿಶ್ವ ಮಟ್ಟದಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸುವ ಕನಸು ಕಂಡಿದ್ದ ಯುವ ಕ್ರಿಕೆಟಿಗರು ಪ್ರಾಣ ಕಳೆದುಕೊಂಡಿದ್ದಾರೆ” ಎಂದು ರಶೀದ್ ಖಾನ್ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ. ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುವುದು “ಅನೈತಿಕ ಮತ್ತು ಅನಾಗರಿಕ” ಕೃತ್ಯವಾಗಿದೆ ಮತ್ತು ಇಂತಹ “ಅನ್ಯಾಯದ ಮತ್ತು ಕಾನೂನುಬಾಹಿರ ಕ್ರಮಗಳು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದ್ದು, ಅವುಗಳನ್ನು ನಿರ್ಲಕ್ಷಿಸಬಾರದು” ಎಂದು ಅವರು ಹೇಳಿದ್ದಾರೆ.
ಮತ್ತೊಬ್ಬ ಅಂತಾರಾಷ್ಟ್ರೀಯ ಆಟಗಾರ ಮೊಹಮ್ಮದ್ ನಬಿ ಅವರು, “ಈ ಘಟನೆಯು ಪಕ್ತಿಕಾಗೆ ಮಾತ್ರವಲ್ಲ, ಇಡೀ ಅಫ್ಘಾನ್ ಕ್ರಿಕೆಟ್ ಕುಟುಂಬ ಮತ್ತು ಇಡೀ ರಾಷ್ಟ್ರಕ್ಕೆ ದುರಂತವಾಗಿದೆ” ಎಂದು ಹೇಳಿದ್ದಾರೆ.
“ಈ ದಬ್ಬಾಳಿಕೆಗಾರರಿಂದ ಮುಗ್ಧ ನಾಗರಿಕರ ಮತ್ತು ನಮ್ಮ ದೇಶೀಯ ಕ್ರಿಕೆಟ್ ಆಟಗಾರರ ಹತ್ಯೆಯು ಅಸಹ್ಯಕರ, ಕ್ಷಮಿಸಲಾಗದ ಅಪರಾಧ” ಎಂದು ಅಫ್ಘಾನ್ ಅಂತಾರಾಷ್ಟ್ರೀಯ ಕ್ರಿಕೆಟಿಗ ಫಜಲ್ಹಕ್ ಫಾರೂಕಿ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಪ್ರಮುಖ ಸುದ್ದಿ :-   ಕ್ರಿಕೆಟ್ ದಂತಕತೆ ಸರ್ ಗ್ಯಾರಿ ಸೋಬರ್ಸ್ ನಿಧನ

ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿ ಸಂಘರ್ಷ
ಅಫ್ಘಾನ್ ಮಾಧ್ಯಮಗಳ ಪ್ರಕಾರ, ಪಾಕಿಸ್ತಾನವು ಶುಕ್ರವಾರ ಅಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದಲ್ಲಿ ಸರಣಿ ವಾಯುದಾಳಿಗಳನ್ನು ನಡೆಸಿದೆ. ಈ ಮೂಲಕ ಎರಡು ದೇಶಗಳ ನಡುವಿನ ಕದನ ವಿರಾಮ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸಿದೆ ಎಂದು ಅಪ್ಘಾನಿಸ್ತಾನ ಆರೋಪಿಸಿದೆ.
ಟೊಲೊ ನ್ಯೂಸ್‌ನಂತಹ ಅಫ್ಘಾನಿಸ್ತಾನದ ಸುದ್ದಿ ಮೂಲಗಳು, ವಾಯುದಾಳಿಗಳು ದೇಶದ ಉರ್ಗುನ್ ಮತ್ತು ಬರ್ಮಲ್ ಜಿಲ್ಲೆಗಳಲ್ಲಿನ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿವೆ ಮತ್ತು ಗಣನೀಯ ನಾಗರಿಕ ಸಾವುನೋವುಗಳಿಗೆ ಕಾರಣವಾಗಿವೆ ಎಂದು ವರದಿ ಮಾಡಿವೆ.
ಕೆಲ ದಿನಗಳ ಕಾಲ ನಡೆದ ತೀವ್ರ ಗಡಿ ಸಂಘರ್ಷದ ನಂತರ ಎರಡು ದೇಶಗಳ ನಡುವಿನ 48 ಗಂಟೆಗಳ ಕದನ ವಿರಾಮದ ನಡುವೆ ಈ ಮಾರಣಾಂತಿಕ ದಾಳಿಗಳು ನಡೆದಿವೆ.
ಈ ಹಿಂದೆ, ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಗಡಿಯಾಚೆಗಿನ ಹಿಂಸಾಚಾರವನ್ನು ತಡೆಯಲು ಉದ್ದೇಶಿಸಿರುವ ದೋಹಾ ಮಾತುಕತೆಗಳು ಮುಗಿಯುವವರೆಗೂ ಕದನ ವಿರಾಮವನ್ನು ವಿಸ್ತರಿಸಲು ಪಾಕಿಸ್ತಾನ ಕರೆ ನೀಡಿತ್ತು. ಅಪ್ಘಾನಿಸ್ತಾನ ಈ ಪ್ರಸ್ತಾಪಕ್ಕೆ ಸಮ್ಮತಿಸಿದ್ದು, ದೋಹಾದಲ್ಲಿ ನಡೆಯುತ್ತಿರುವ ಮಾತುಕತೆಗಳು ಮುಗಿಯುವವರೆಗೆ ಕದನ ವಿರಾಮವನ್ನು ವಿಸ್ತರಿಸಲಾಗಿದೆ. ಎರಡೂ ಕಡೆಯ ಮಾತುಕತೆಗಳು ಶನಿವಾರದಿಂದ ಪ್ರಾರಂಭವಾಗಲಿವೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement