S-400 ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಂ ಯಶಸ್ಸಿನ ಬೆನ್ನಲ್ಲೇ ರಷ್ಯಾದ ಜೊತೆ S-500 ಜಂಟಿ ಉತ್ಪಾದನೆಗೆ ಭಾರತ ಸಜ್ಜು ; ಮಿಲಿಟರಿಗೆ ಇದು ಯಾಕೆ ಮಹತ್ವದ್ದು…?

ನವದೆಹಲಿ :ಭಾರತದ ವಾಯು ರಕ್ಷಣಾ ಸಾಮರ್ಥ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮಹತ್ವದ ಹೆಜ್ಜೆಯನ್ನಿಡಲಾಗಿದೆ. ಆಪರೇಷನ್ ಸಿಂದೂರ (Operation Sindoor) ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ರಷ್ಯಾದ ನಿರ್ಮಿತ S-400 ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಮ್‌ ನಂತರ, ಭಾರತವು ಇದೀಗ ಅದರ ಅತ್ಯಾಧುನಿಕ ಅದರ ಮುಂದಿನ ಹಂತದ S-500 ‘ಪ್ರೋಮಿಥಿಯಸ್’ ಕ್ಷಿಪಣಿ ವ್ಯವಸ್ಥೆಯ ಜಂಟಿ ಉತ್ಪಾದನೆ (Co-production) ಒಪ್ಪಂದದತ್ತ ಗಮನ ಹರಿಸಿದೆ.
ವಾಯುಪಡೆಯ ಪ್ರಾಬಲ್ಯಕ್ಕೆ ಕಾರಣ ಭಾರತವು 2018 ರಲ್ಲಿ ರಷ್ಯಾದಿಂದ $5.43 ಶತಕೋಟಿ ವೆಚ್ಚದಲ್ಲಿ ಐದು S-400 ರೆಜಿಮೆಂಟ್‌ಗಳಿಗೆ ಆದೇಶ ನೀಡಿತ್ತು. ಈ ವರ್ಷ ಮೇ ತಿಂಗಳಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಭಾರತದ ಆಕ್ರಮಣಕಾರಿ ಕಾರ್ಯಾಚರಣೆಗಳ ಸಂದರ್ಭದಲ್ಲಿ, S-400 ವ್ಯವಸ್ಥೆಯು ಅತ್ಯಂತ ಪರಿಣಾಮಕಾರಿ ಎಂದು ಸಾಬೀತಾಗಿದೆ.
ಪಾಕಿಸ್ತಾನದ ವಾಯುಪ್ರದೇಶದ ನೂರಾರು ಕಿಲೋಮೀಟರ್ ಒಳಗೆ ನುಸುಳಿ ಪಾಕಿಸ್ತಾನಿ ವಿಮಾನಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿ, ಟ್ರ್ಯಾಕ್ ಮಾಡಿ ಮತ್ತು ಹೊಡೆದುರುಳಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ. ಇದು ಪಾಕಿಸ್ತಾನದ ಮೇಲೆ ಸಂಪೂರ್ಣ ವಾಯು ಪ್ರಾಬಲ್ಯ ಸಾಧಿಸಲು ಮತ್ತು ವಿರೋಧಿಗಳ ವಿರುದ್ಧ ಪ್ರಬಲವಾದ ನಿರೋಧಕ ಶಕ್ತಿಯಾಗಿ (Deterrent) ಕಾರ್ಯನಿರ್ವಹಿಸಿತು.

S-400 ರ ಈ ಅತ್ಯಂತ ಪ್ರಭಾವಶಾಲಿ ಪ್ರದರ್ಶನದಿಂದ ಪ್ರೇರಿತರಾದ ಭಾರತ, ಈಗ ಹೆಚ್ಚುವರಿಯಾಗಿ ಇನ್ನೂ ಐದು S-400 ರೆಜಿಮೆಂಟ್‌ಗಳನ್ನು ರಷ್ಯಾದಿಂದ ಪಡೆಯಲು ಉತ್ಸುಕವಾಗಿದೆ. (ಒಂದು S-400 ರೆಜಿಮೆಂಟ್‌ನಲ್ಲಿ ಎರಡು ಬ್ಯಾಟರಿಗಳಾಗಿ ವಿಂಗಡಿಸಲಾದ 16 ಲಾಂಚರ್ ವಾಹನಗಳು ಇರುತ್ತವೆ.)
ಮುಂದಿನ ಮೆಗಾ ಡೀಲ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಭಾರತಕ್ಕೆ (ಡಿಸೆಂಬರ್‌ ೪) ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ಪ್ರಮುಖ ರಕ್ಷಣಾ ಮಾತುಕತೆಗಳ ಕೇಂದ್ರಬಿಂದು S-500 ವ್ಯವಸ್ಥೆಯಾಗಿದೆ. S-500 ಎಂಬುದು ಕೇವಲ S-400 ಸುಧಾರಿತ ಅಪ್‌ಗ್ರೇಡ್ ಆಗಿರದೆ, ಸಂಪೂರ್ಣವಾಗಿ ಭಿನ್ನ ಮತ್ತು ಉನ್ನತ ಸಾಮರ್ಥ್ಯಗಳನ್ನು ಹೊಂದಿರುವ ಶಸ್ತ್ರಾಸ್ತ್ರ ವ್ಯವಸ್ಥೆಯಾಗಿದೆ.
S-400 ಒಪ್ಪಂದಕ್ಕಿಂತ ಭಿನ್ನವಾಗಿ, S-500 ಅನ್ನು ಜಂಟಿ ಉತ್ಪಾದನಾ ಒಪ್ಪಂದದ (Co-production Agreement) ರೂಪದಲ್ಲಿ ಪ್ರಸ್ತಾಪಿಸಲಾಗಿದೆ. ಇದರ ಅಡಿಯಲ್ಲಿ, ಭಾರತೀಯ ಪಾಲುದಾರರು ರಷ್ಯಾದ ಅಲ್ಮಾಜ್ ಆಂಟೆ (Almaz Antey) ಸಂಸ್ಥೆಯೊಂದಿಗೆ ಕೈಜೋಡಿಸಿ, ಈ ಕ್ಷಿಪಣಿಯ ಭಾಗಗಳನ್ನು ಭಾರತದಲ್ಲಿಯೇ ಸ್ಥಳೀಯವಾಗಿ ತಯಾರಿಸುವ ಸಾಧ್ಯತೆ ಇದೆ. ಇದು ರಕ್ಷಣಾ ವಲಯದಲ್ಲಿ ಭಾರತದ ಸ್ವಾವಲಂಬನೆಯನ್ನು ಹೆಚ್ಚಿಸಲಿದೆ.
S-400 ಮತ್ತು S-500 ನಡುವಿನ ಪ್ರಮುಖ ವ್ಯತ್ಯಾಸಗಳು
S-400 ಪ್ರಾದೇಶಿಕ ವಾಯು ಪ್ರಾಬಲ್ಯ ನೀಡಿದರೆ, S-500 ‘ಪ್ರೋಮಿಥಿಯಸ್’ ಕ್ಷಿಪಣಿ ವ್ಯವಸ್ಥೆಯು ಭಾರತಕ್ಕೆ ವಾಯು, ಕ್ಷಿಪಣಿ ಮತ್ತು ಸಮೀಪದ ಬಾಹ್ಯಾಕಾಶ (Near-Space)ದಲ್ಲಿ ಪ್ರಾಬಲ್ಯ ಪಡೆಯಲು ವಿನ್ಯಾಸಗೊಳಿಸಲಾಗಿದೆ. ಈ ಎರಡು ಸಿಸ್ಟಂ ನಡುವಿನ ವ್ಯತ್ಯಾಸಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:
ವ್ಯಾಪ್ತಿ
S-400: 400 ಕಿಮೀ
S-500: 500-600 ಕಿಮೀ
ಎತ್ತರ
S-400: 30 ಕಿಮೀ ವರೆಗೆ
S-500: 180-200 ಕಿಮೀ ವರೆಗೆ
ಟಾರ್ಗೆಟ್‌ ಪ್ರಕಾರಗಳು
S-400: ವಿಮಾನ, ಡ್ರೋನ್‌ಗಳು, ಕ್ರೂಸ್ ಕ್ಷಿಪಣಿಗಳು
S-500: ಮೇಲಿನ ಎಲ್ಲಾ + ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಹೈಪರ್ಸೋನಿಕ್‌ ಕ್ಷಿಪಣಿಗಳು

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

ರಕ್ಷಣೆಯಲ್ಲಿ ಪಾತ್ರ
S-400: ಥಿಯೆಟರ್‌ ವಾಯು ರಕ್ಷಣೆ (ವಿಮಾನ, ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಸೇರಿದಂತೆ ವೈಮಾನಿಕ ಬೆದರಿಕೆಗಳಿಂದ ನಿರ್ದಿಷ್ಟ ಪ್ರದೇಶ ರಕ್ಷಿಸಲು ವಿನ್ಯಾಸಗೊಳಿಸಲಾದ ರಕ್ಷಣಾತ್ಮಕ ಕ್ರಮಗಳ ಲೇಯರ್ಡ್ ವ್ಯವಸ್ಥೆ)
S-500: ರಾಷ್ಟ್ರೀಯ ಬ್ಯಾಲಿಸ್ಟಿಕ್ ಮತ್ತು ಹೈಪರ್‌ಸಾನಿಕ್ ರಕ್ಷಣೆ
ಇಂಟರ್‌ಸೆಪ್ಟರ್ ಫ್ಯಾಮಿಲಿ
S-400: 48N6, 40N6 ಕ್ಷಿಪಣಿಗಳು
S-500: 77N6-N, 77N6-N1 ಹಿಟ್-ಟು-ಕಿಲ್ ಇಂಟರ್‌ಸೆಪ್ಟರ್‌ಗಳು
ಬೆದರಿಕೆ ವರ್ಗ
S-400: ಯುದ್ಧತಂತ್ರ ಮತ್ತು ಕಾರ್ಯಾಚರಣೆ (Tactical and operational)
S-500: ಯುದ್ಧತಂತ್ರ ಮತ್ತು ಕಾರ್ಯತಂತ್ರ (Tactical & Strategic)
ವ್ಯಾಪ್ತಿಯ ಪರಿಣಾಮ
S-400: ಪ್ರದೇಶ / ಥಿಯೆಟರ್‌ಅನ್ನು ರಕ್ಷಿಸುತ್ತದೆ (Protects region / theatre)
S-500: ನಗರಗಳು ಮತ್ತು ನಿರ್ಣಾಯಕ ರಾಷ್ಟ್ರೀಯ ಸ್ವತ್ತುಗಳನ್ನು ರಕ್ಷಿಸುತ್ತದೆ (Protects cities and critical national assets)
ಅಲ್ಲದೆ, S-500 ವ್ಯವಸ್ಥೆ ಉನ್ನತ ಮಟ್ಟದ ಸಾಮರ್ಥ್ಯಗಳನ್ನು ಹೊಂದಿದೆ.
ಇದು S-400 ನಿಭಾಯಿಸುವ ಯುದ್ಧತಂತ್ರದ ಬೆದರಿಕೆಗಳ ಜೊತೆಗೆ, ಕಾರ್ಯತಂತ್ರದ (Strategic) ಬೆದರಿಕೆಗಳನ್ನು ಮತ್ತು ಭವಿಷ್ಯದ ಹೈಪರ್‌ಸಾನಿಕ್ ಯುದ್ಧತಂತ್ರವನ್ನು ಎದುರಿಸಲು ನಿರ್ಮಿಸಲಾಗಿದೆ. S-400 ಈಗಾಗಲೇ ಭಾರತದ ಆಕಾಶ, ಇಸ್ರೇಲ್‌ನ MRSAM ಮತ್ತು ಸ್ಪೈಡರ್ ಸೇರಿದಂತೆ ಅಂತಾರಾಷ್ಟ್ರೀಯ ವ್ಯವಸ್ಥೆಗಳೊಂದಿಗೆ ಉತ್ತಮವಾಗಿ ಸಂಯೋಜನೆಗೊಂಡಿದೆ. ಇದನ್ನು S-500 ಕೂಡ ಮುಂದುವರಿಸುವ ನಿರೀಕ್ಷೆ ಇದೆ.S-500 ಒಪ್ಪಂದವು ರಷ್ಯಾದೊಂದಿಗೆ ಭಾರತದ ಇದುವರೆಗಿನ ಅತಿದೊಡ್ಡ ಏಕೈಕ ಶಸ್ತ್ರಾಸ್ತ್ರ ಒಪ್ಪಂದವಾಗಿ ಹೊರಹೊಮ್ಮುವ ಸಾಧ್ಯತೆ ಇದೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement