ಸಚಿವರ ಬಂಗಲೆ ಪ್ರವೇಶಿಸಿದ ಚಿರತೆ ; ವೀಡಿಯೊ ವೈರಲ್‌

ಜೈಪುರ: ಅತಿ ಹೆಚ್ಚು ಭದ್ರತೆಯಿರುವ ಜೈಪುರದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಚಿರತೆಯೊಂದು ಕಾಣಿಸಿಕೊಂಡು ಭಾರಿ ಆತಂಕ ಸೃಷ್ಟಿಸಿತ್ತು. ಶಾಲೆಯ ಆವರಣ, ಹಾಗೂ ರಾಜಸ್ಥಾನ ಸಚಿವರ ಅಧಿಕೃತ ನಿವಾಸ ಸೇರಿದಂತೆ ಹಲವು ವಸತಿ ಪ್ರದೇಶಗಳಲ್ಲಿ ಈ ಚಿರತೆ ಸಂಚರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿಯ ಪ್ರಕಾರ, ಗುರುವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಸಚಿವರ ಬಂಗಲೆಯಲ್ಲಿ ಚಿರತೆ ಓಡಾಡುತ್ತಿರುವುದು ಕಂಡುಬಂದಿದೆ. ಚಿರತೆಯು ಮೊದಲು ಟೈನಿ ಬ್ಲಾಸಮ್ ಸೀನಿಯರ್ ಸೆಕೆಂಡರಿ ಶಾಲೆಗೆ ಪ್ರವೇಶಿಸಿತ್ತು. ನಂತರ ಅದು ಜಲಸಂಪನ್ಮೂಲ ಸಚಿವ ಸುರೇಶ ಸಿಂಗ್ ರಾವತ್ ಅವರ ಅಧಿಕೃತ ನಿವಾಸದ ಕಡೆಗೆ ತೆರಳಿತು ಎಂದು ವರದಿಯಾಗಿದೆ.

ಈ ನಿವಾಸವು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರ ಬಂಗಲೆಯ ಎದುರಿನಲ್ಲಿದೆ.ಸಿಸಿಟಿವಿ ದೃಶ್ಯಾವಳಿಗಳಲ್ಲಿಯೂ ಅದರ ಉಪಸ್ಥಿತಿ ದೃಢಪಟ್ಟಿದ್ದು, ನಂತರ ತಕ್ಷಣವೇ ಪೊಲೀಸರು ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ಇಲಾಖೆಯ ರಕ್ಷಣಾ ತಂಡವು ಕ್ಷಣಾರ್ಧದಲ್ಲಿ ಸ್ಥಳಕ್ಕೆ ತಲುಪಿತು ಮತ್ತು ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರಿಯಲಾಯಿತು.
ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆ ತಕ್ಷಣ ಕಾರ್ಯಾಚರಣೆಗೆ ಇಳಿಯಿತು. ಹಲವಾರು ಗಂಟೆಗಳ ಪ್ರಯತ್ನದ ನಂತರ, ಚಿರತೆಯನ್ನು ಅರಿವಳಿಕೆ ನೀಡಿ ಯಶಸ್ವಿಯಾಗಿ ರಕ್ಷಿಸಲಾಯಿತು ಎಂದು ಮುಖ್ಯ ವನ್ಯಜೀವಿ ವಾರ್ಡನ್ ಶಿಖಾ ಮೆಹ್ರಾ ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಟೈಗರ್‌ ಶ್ರಾಫ್‌ ಮೇಲೆ ಗುಂಡಿನ ದಾಳಿ ಪ್ರಕರಣ ; ಸೂರತ್‌ನಲ್ಲಿ ಆರೋಪಿಗಳು ಓಡಿ ಹೋಗಿ ರೈಲು ಹತ್ತಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

https://x.com/i/status/1991364527053762973

ರಕ್ಷಣಾ ಕಾರ್ಯಾಚರಣೆ ಯಶಸ್ವಿ
“ಯಾವುದೇ ಪ್ರಾಣಹಾನಿಯಾಗಿಲ್ಲ. ನಾನು ವೈಯಕ್ತಿಕವಾಗಿ ಸ್ಥಳದಲ್ಲಿ ಹಾಜರಿದ್ದು ಸಂಪೂರ್ಣ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಿದ್ದೇನೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆದರೆ ತಕ್ಷಣ ಅರಣ್ಯ ಇಲಾಖೆ ತಂಡಕ್ಕೆ ಮಾಹಿತಿ ನೀಡಬೇಕು. ಜೊತೆಗೆ, ವನ್ಯಜೀವಿಗಳಿಗೆ ಹಾನಿಯಾಗುವುದನ್ನು ತಡೆಯಲು ಜನರು ಎಚ್ಚರಿಕೆಯಿಂದಿರಬೇಕು ಮತ್ತು ಓಡಾಟವನ್ನು ಕಡಿಮೆ ಮಾಡಬೇಕು ಎಂದು ಶಿಖಾ ಮೆಹ್ರಾ ಹೇಳಿದ್ದಾರೆ.
ಸಿವಿಲ್ ಲೈನ್ಸ್ ಪ್ರದೇಶವು ರಾಜಭವನ, ಮುಖ್ಯಮಂತ್ರಿಗಳ ನಿವಾಸ, ಮತ್ತು ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಅಧಿಕೃತ ನಿವಾಸಗಳನ್ನು ಒಳಗೊಂಡಿರುವಂತಹ ಸೂಕ್ಷ್ಮ ಪ್ರದೇಶವಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement