
ಇಂಡೋನೇಷ್ಯಾದ ಸಜೀವ ‘ಮೌಂಟ್ ಬ್ರೋಮೋ’ ಜ್ವಾಲಾಮುಖಿಯ ಅಂಚಿನಲ್ಲಿ ಭಗವಾನ್ ಗಣೇಶನ 700 ವರ್ಷಗಳಷ್ಟು ಹಳೆಯದಾದ ಅಪರೂಪದ ಮೂರ್ತಿಯೊಂದು ನೆಲೆ ನಿಂತಿದೆ. ಸ್ಥಳೀಯರಿಂದ ಅತ್ಯಂತ ಭಕ್ತಿ-ಗೌರವಗಳಿಂದ ಪೂಜಿಸಲ್ಪಡುವ ಈ ಪವಿತ್ರ ತಾಣವು ಆಧ್ಯಾತ್ಮಿಕ ರಹಸ್ಯಗಳು ಹಾಗೂ ಪ್ರಾಚೀನ ಆಚರಣೆಗಳಿಂದ ಆವೃತವಾಗಿದೆ. ಈ ಗಣೇಶನೇ ಜ್ವಾಲಾಮುಖಿಯ ವಿನಾಶಕಾರಿ ಸ್ಫೋಟಗಳಿಂದ ಸುತ್ತಮುತ್ತಲಿನ ಹಳ್ಳಿಗಳನ್ನು ರಕ್ಷಿಸುತ್ತಾನೆ ಎಂಬ ಬಲವಾದ ನಂಬಿಕೆ ಅಲ್ಲಿನ ಜನರಲ್ಲಿದೆ.
ಇಂಡೋನೇಷ್ಯಾದಲ್ಲಿ ಇಸ್ಲಾಂ ಧರ್ಮೀಯರೇ ಬಹುಸಂಖ್ಯಾತರು. ಶತಮಾನಗಳ ಹಿಂದೆ ‘ತೆಂಗರ್’ ಬುಡಕಟ್ಟು ಜನಾಂಗದವರಿಂದ ಪ್ರತಿಷ್ಠಾಪಿಸಲ್ಪಟ್ಟ ಈ ಗಣೇಶನ ಮೂರ್ತಿಯು ಸಾಮಾನ್ಯ ದೇವಾಲಯಗಳ ವಿಗ್ರಹಗಳಿಗಿಂತ ತೀರಾ ಭಿನ್ನವಾಗಿದೆ. ಏಕೆಂದರೆ, ಸದಾ ಸಜೀವವಾಗಿರುವ ಜ್ವಾಲಾಮುಖಿಯ ಅಪಾಯಕಾರಿ ಕ್ರೇಟರ್ (ಜ್ವಾಲಾಮುಖಿಯ ಬಾಯಿ) ತುದಿಯಲ್ಲಿ, ಮಂಜಿನಂತೆ ಆವರಿಸುವ ಬೂದಿಯ ಮಧ್ಯೆ ಭಗವಾನ್ ಗಣೇಶನ ಪ್ರಾಚೀನ ಮೂರ್ತಿ ಅತ್ಯಂತ ಶಾಂತವಾಗಿ, ಗಂಭೀರವಾಗಿ ಕುಳಿತಿದೆ! ಇಂಡೋನೇಷ್ಯಾದ ಪೂರ್ವ ಜಾವಾದಲ್ಲಿರುವ ಈ ಗಣೇಶ ಮೂರ್ತಿಯನ್ನು ಧರ್ಮಾತೀತವಾಗಿ ಎಲ್ಲರೂ ಗೌರವಿಸುತ್ತಾರೆ.

ಐತಿಹಾಸಿಕ ಮತ್ತು ಆಧ್ಯಾತ್ಮಿಕ ಹಿನ್ನೆಲೆ
ಈ ಗಣೇಶನ ಮೂರ್ತಿಯು ಸುಮಾರು 700 ವರ್ಷಗಳಿಗಿಂತಲೂ ಹಳೆಯದಾಗಿದ್ದು, 13 ರಿಂದ 15 ನೇ ಶತಮಾನದಲ್ಲಿ ಇಂಡೋನೇಷ್ಯಾವನ್ನು ಆಳಿದ ಪ್ರಸಿದ್ಧ ಮಜಾಪಹಿತ ಸಾಮ್ರಾಜ್ಯದ (Majapahit Empire) ಕಾಲದಲ್ಲಿ ಸ್ಥಾಪಿತವಾಗಿದೆ ಎಂದು ನಂಬಲಾಗಿದೆ. ಆ ಕಾಲದ ಹಿಂದೂ-ಬೌದ್ಧ ರಾಜವಂಶವು ಧಾರ್ಮಿಕ ಸಹಿಷ್ಣುತೆಗೆ ಹೆಸರಾಗಿತ್ತು. ಶಿವ, ವಿಷ್ಣು ಮತ್ತು ವಿಘ್ನನಿವಾರಕ ಗಣೇಶನನ್ನು ಅಲ್ಲಿ ವ್ಯಾಪಕವಾಗಿ ಆರಾಧಿಸಲಾಗುತ್ತಿತ್ತು.
ಮೌಂಟ್ ಬ್ರೋಮೋ ಜ್ವಾಲಾಮುಖಿಯ ಕ್ರೇಟರ್ (ಜ್ವಾಲಾಮುಖಿಯ ಬಾಯಿ) ಅಂಚಿನಲ್ಲೇ ಈ ಮೂರ್ತಿಯನ್ನು ಪ್ರತಿಷ್ಠಾಪಿಸಿರುವುದರ ಹಿಂದೆ ಒಂದು ಬಲವಾದ ಕಾರಣವಿದೆ. ಗಣೇಶನನ್ನು ಇಲ್ಲಿ ಜ್ವಾಲಾಮುಖಿಯ ರಕ್ಷಕ ದೇವನಾಗಿ ಪ್ರತಿಷ್ಠಾಪಿಸಲಾಗಿದೆ. ಗಣೇಶನ ಉಪಸ್ಥಿತಿಯು ಅಗ್ನಿ ದೇವನನ್ನು ಶಾಂತಗೊಳಿಸುತ್ತದೆ ಮತ್ತು ಬ್ರಹ್ಮಾಂಡದ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ ಎಂಬುದು ಸ್ಥಳೀಯರ ನಂಬಿಕೆ. ಲಂಬೋದರನ ಆಶೀರ್ವಾದದಿಂದಾಗಿಯೇ ಸುತ್ತಮುತ್ತಲಿನ ಪ್ರದೇಶಗಳು ಜ್ವಾಲಾಮುಖಿಯ ವಿನಾಶಕಾರಿ ಸ್ಫೋಟದಿಂದ ರಕ್ಷಿಸಲ್ಪಟ್ಟಿವೆ ಮತ್ತು ಭೂಮಿ ಸದಾ ಫಲವತ್ತಾಗಿ ಉಳಿದಿದೆ ಎಂದು ಅಲ್ಲಿನ ಜನ ನಂಬುತ್ತಾರೆ.
ಮೌಂಟ್ ಬ್ರೋಮೋ ಪೂರ್ವ ಜಾವಾದಲ್ಲಿ ಸಮುದ್ರ ಮಟ್ಟದಿಂದ 2,329 ಮೀಟರ್ (7,641 ಅಡಿ) ಎತ್ತರದಲ್ಲಿದೆ. ಇದು ‘ತೆಂಗರ್ ಕಾಲ್ಡೆರಾ’ ಎಂಬ ಬೃಹತ್ ಜ್ವಾಲಾಮುಖಿ ಸಂಕೀರ್ಣದ ಒಂದು ಭಾಗವಾಗಿದೆ. ಈ ಜ್ವಾಲಾಮುಖಿ ಇಂದಿಗೂ ಸಜೀವವಾಗಿದ್ದು (Active), ಸದಾ ಹೊಗೆ, ಸಣ್ಣ ಪ್ರಮಾಣದ ಭೂಕಂಪನ ಅಗುತ್ತಿರುತ್ತದೆ ಮತ್ತು ಬೂದಿಯನ್ನು ಕಾರುತ್ತಿರುತ್ತದೆ. ಈ ಪ್ರದೇಶದಲ್ಲಿ ಪ್ರಮುಖವಾಗಿ ‘ತೆಂಗರೀಸ್’ (Tenggerese) ಎಂಬ ಹಿಂದೂ ಸಮುದಾಯದ ಜನರು ವಾಸಿಸುತ್ತಿದ್ದು, ಅವರು ಈ ಜ್ವಾಲಾಮುಖಿಯನ್ನು ಅತ್ಯಂತ ಪವಿತ್ರವೆಂದು ಅವರು ಭಾವಿಸುತ್ತಾರೆ. ಈ ಮೂರ್ತಿಯು ತೆಂಗರ್ ಸಮುದಾಯಕ್ಕೆ ಕೇವಲ ಒಂದು ಧಾರ್ಮಿಕ ಸಂಕೇತ ಮಾತ್ರವಲ್ಲ; ಇದು ಅವರ ಸಾಂಸ್ಕೃತಿಕ ಗುರುತು, ಪೂರ್ವಜರ ನಂಬಿಕೆ ಮತ್ತು ಶತಮಾನಗಳಷ್ಟು ಹಳೆಯದಾದ ಸಂಪ್ರದಾಯವನ್ನು ಪ್ರತಿನಿಧಿಸುತ್ತದೆ.
ಇಂಡೋನೇಷ್ಯಾ ದೇಶವು ಪೆಸಿಫಿಕ್ ಮಹಾಸಾಗರದ “ರಿಂಗ್ ಆಫ್ ಫೈರ್” (Ring of Fire) ವಲಯದಲ್ಲಿದ್ದು, ಇಲ್ಲಿ ಒಟ್ಟು 141 ಜ್ವಾಲಾಮುಖಿಗಳಿವೆ. ಇವುಗಳಲ್ಲಿ 130 ಜ್ವಾಲಾಮುಖಿಗಳು ಇಂದಿಗೂ ಸಜೀವವಾಗಿವೆ. ವಿಶೇಷವೆಂದರೆ, ‘ಮೌಂಟ್ ಬ್ರೋಮೋ’ ಎಂಬ ಈ ಸಜೀವ ಜ್ವಾಲಾಮುಖಿ ಹೆಸರಿನಲ್ಲಿ ಬ್ರೋಮೋ ಎಂಬ ಪದವು ಹಿಂದೂ ಧರ್ಮದ ಸೃಷ್ಟಿಕರ್ತನಾದ “ಬ್ರಹ್ಮ” ದೇವನ ಹೆಸರಿನಿಂದಲೇ ಬಂದಿದೆ.
ನಿತ್ಯ ಪೂಜೆ, ಆಚರಣೆ ಮತ್ತು ನೈವೇದ್ಯಗಳು
ಗಣೇಶ ಚತುರ್ಥಿಯಂತಹ ಹಬ್ಬಗಳ ಸಂದರ್ಭದಲ್ಲಿ ಭಕ್ತರು ಈ ಜ್ವಾಲಾಮುಖಿಯ ಬಳಿ ಒಟ್ಟುಗೂಡಿ ವಿಶೇಷ ಪೂಜೆ-ಪುನಸ್ಕಾರಗಳನ್ನು ನೆರವೇರಿಸಿ, ದೇವರ ಆಶೀರ್ವಾದವನ್ನು ಬೇಡುತ್ತಾರೆ.
ತೆಂಗರೀಸ್ ಹಿಂದೂಗಳು ಮತ್ತು ಇಲ್ಲಿಗೆ ಭೇಟಿ ನೀಡುವ ತೀರ್ಥಯಾತ್ರಿಕರು ಪ್ರತಿದಿನವೂ ಗಣೇಶನಿಗೆ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಾರೆ.
ಪ್ರತಿದಿನ ಸೂರ್ಯೋದಯಕ್ಕೂ ಮುನ್ನವೇ ಇಲ್ಲಿ ಧೂಪ ಮತ್ತು ತೈಲ ದೀಪಗಳನ್ನು ಹಚ್ಚಲಾಗುತ್ತದೆ. ಹಳದಿ ಚೆಂಡುಹೂವು ಮತ್ತು ಕೆಂಪು ದಾಸವಾಳದ ಹೂವುಗಳನ್ನು ಹೆಚ್ಚಾಗಿ ದೇವರಿಗೆ ಅರ್ಪಿಸಲಾಗುತ್ತದೆ. ಒಣ ಹಣ್ಣುಗಳು, ಅಕ್ಕಿ ಮತ್ತು ಅರಿಶಿನ ಪುಡಿಯನ್ನು ಗಣೇಶನ ಪಾದಗಳ ಬಳಿ ಇಟ್ಟು ನೈವೇದ್ಯ ಮಾಡಲಾಗುತ್ತದೆ. ಜ್ವಾಲಾಮುಖಿಯ ಬೂದಿ ಮತ್ತು ಮರಳನ್ನೇ ಭಕ್ತರು ತಮ್ಮ ಹಣೆಗೆ ತಿಲಕವಾಗಿ ಇಟ್ಟುಕೊಳ್ಳುತ್ತಾರೆ.
ಸಂಕಷ್ಟ ಚತುರ್ಥಿ, ಗಣೇಶ ಚತುರ್ಥಿ ಮತ್ತು ಅಮಾವಾಸ್ಯೆಯ ದಿನಗಳಲ್ಲಿ ಇಲ್ಲಿ ಸಮುದಾಯ ಪೂಜೆಗಳು ನಡೆಯುತ್ತವೆ. ಆರತಿ ಬೆಳಗಿ, ‘ಗಣಪತಿ ಅಥರ್ವಶೀರ್ಷ’ವನ್ನು ಪಠಿಸಲಾಗುತ್ತದೆ. ಗ್ರಹ ದೋಷಗಳ ನಿವಾರಣೆಗಾಗಿ ಮತ್ತು ವಿಪತ್ತುಗಳಿಂದ ರಕ್ಷಣೆ ಪಡೆಯಲು ಭಕ್ತರು ಇಲ್ಲಿ ಕೆಂಪು ದಾರ ಹಾಗೂ ಗಂಟೆಗಳನ್ನು ಕಟ್ಟುತ್ತಾರೆ.
‘ಯಜ್ಞ ಕಾಸದ’ ಮಹಾಹಬ್ಬ
ಇಲ್ಲಿ ನಡೆಯುವ ಅತ್ಯಂತ ದೊಡ್ಡ ವಾರ್ಷಿಕ ಹಿಂದೂ ಧಾರ್ಮಿಕ ಉತ್ಸವ ಎಂದರೆ ‘ಯಜ್ಞ ಕಾಸದ’ ಹಬ್ಬ. ತೆಂಗರೀಸ್ ಕ್ಯಾಲೆಂಡರ್‌ನ 12 ನೇ ತಿಂಗಳಿನಲ್ಲಿ (ಅಂದರೆ ಸರಿಸುಮಾರು ಜುಲೈ-ಆಗಸ್ಟ್ ತಿಂಗಳಲ್ಲಿ) ಈ ಹಬ್ಬ ಆಚರಿಸಲಾಗುತ್ತದೆ.
ಈ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಮೌಂಟ್ ಬ್ರೋಮೋ ಬೆಟ್ಟವನ್ನು ಹತ್ತಿ ಬಂದು, ತಮ್ಮ ಆರಾಧ್ಯ ದೈವ ‘ಇಡಾ ಸಾಂಗ್ ಹ್ಯಾಂಗ್ ವಿಧಿ ವಾಸಾ’ (ಸರ್ವಶಕ್ತ ದೇವರು)ನನ್ನು ಪ್ರಾರ್ಥಿಸಿ ಜ್ವಾಲಾಮುಖಿಯ ಕ್ರೇಟರ್ ಒಳಗೆ ಧಾನ್ಯಗಳು, ಹಣ್ಣುಗಳು, ತರಕಾರಿಗಳು, ಮತ್ತು ಹಣವನ್ನು ಕಾಣಿಕೆಯಾಗಿ ಎಸೆಯುತ್ತಾರೆ. ಈ ಪ್ರಮುಖ ಆಚರಣೆಯ ಮುನ್ನ ಭಕ್ತರು ಗಣೇಶನಿಗೂ ವಿಶೇಷ ಪೂಜೆ ಸಲ್ಲಿಸುತ್ತಾರೆ. ಇದು ಹಿಂದೂ ಧರ್ಮ ಮತ್ತು ಸ್ಥಳೀಯ ಪ್ರಕೃತಿ ಆರಾಧನೆಯ (Animist) ಅಪೂರ್ವ ಸಮ್ಮಿಲನವಾಗಿದೆ.
ಭಾರತದ ಸಾಂಪ್ರದಾಯಿಕ ತೀರ್ಥ ಕ್ಷೇತ್ರಗಳ ಪಟ್ಟಿಯಲ್ಲಿ ಇದು ಇಲ್ಲದಿದ್ದರೂ, ಜಗತ್ತಿನಾದ್ಯಂತ ಇರುವ ಗಣೇಶ ಭಕ್ತರಿಗೆ ಮೌಂಟ್ ಬ್ರೋಮೋ ಆಧ್ಯಾತ್ಮಿಕ ಕೇಂದ್ರವಾಗಿ ಮಾರ್ಪಟ್ಟಿದೆ. ಜ್ವಾಲಾಮುಖಿಯ ರೌದ್ರಾವತಾರ ಮತ್ತು ಗಣೇಶನ ಪರಮ ಶಾಂತ ಹಾಗೂ ಘಂಭಿರ ರೂಪ ಒಟ್ಟಿಗೆ ನೋಡಲು ಸಿಗುತ್ತದೆ.


ನಿಮ್ಮ ಕಾಮೆಂಟ್ ಬರೆಯಿರಿ