ಲಂಡನ್ : ಬ್ರಟನ್ನಿನ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಕ್ಷವು ಭರ್ಜರಿ ಜಯ ಸಾಧಿಸಿದೆ. ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಯುನೈಟೆಡ್ ಕಿಂಗ್‌ಡಂನ ಮುಂದಿನ ಪ್ರಧಾನ ಮಂತ್ರಿಯಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ದೊರೆ ಕಿಂಗ್ ಚಾರ್ಲ್ಸ್ III ಅವರು 61 ವರ್ಷದ ಕೀರ್ ಸ್ಟಾರ್ಮರ್ ಅವರನ್ನು ಸರ್ಕಾರ ರಚಿಸುವಂತೆ ಆಹ್ವಾನಿಸಿದ್ದಾರೆ.
61 ವರ್ಷದ ಕೀರ್ ಸ್ಟಾರ್ಮರ್ ಅವರ ಮೇಲೆ ಅಲ್ಲಿನ ಜನ ವಿಶ್ವಾಸವಿಟ್ಟು ಈ ಬಾರಿ ಅವರಿಗೆ ಅಧಿಕಾರ ನೀಡಿದ್ದಾರೆ. 650 ಸ್ಥಾನಗಳ ಸಂಸತ್ತಿನಲ್ಲಿ ಲೇಬರ್ ಪಕ್ಷವು 412 ಸ್ಥಾನಗಳನ್ನು ಗೆದ್ದಿದೆ. ಭಾರತದ ಸಂಜಾತ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷವು ಕೇವಲ 121 ಸ್ಥಾನಗಳನ್ನು ಮಾತ್ರ ಗೆದ್ದಿದೆ. ಫಲಿತಾಂಶಗಳು ಕನ್ಸರ್ವೇಟಿವ್ ಪಕ್ಷದ 14 ವರ್ಷಗಳ ಆಡಳಿತವನ್ನು ಕೊನೆಗೊಳಿಸಿದವು.
ಸ್ಟಾರ್ಮರ್ ತಮ್ಮ ಉದ್ಘಾಟನಾ ಭಾಷಣದಲ್ಲಿ ದೇಶವನ್ನು ಮೊದಲ ಸ್ಥಾನದಲ್ಲಿ ಮತ್ತು ಪಕ್ಷವನ್ನು ಎರಡನೇ ಸ್ಥಾನದಲ್ಲಿ ಇರಿಸುವುದಾಗಿ ಹೇಳಿದ್ದಾರೆ. ಇಂದಿನಿಂದಲೇ ಕೆಲಸ ಪ್ರಾರಂಭಿಸುವುದಾಗಿ ಹೇಳಿದ್ದಾರೆ. “ನಮ್ಮ ಕೆಲಸ ತುರ್ತು ಮತ್ತು ನಾವು ಅದನ್ನು ಇಂದು ಪ್ರಾರಂಭಿಸುತ್ತೇವೆ. ಇಟ್ಟಿಗೆಯಿಂದ ನಾವು ಅವಕಾಶದ ಮೂಲಸೌಕರ್ಯವನ್ನು ಮರುನಿರ್ಮಾಣ ಮಾಡುತ್ತೇವೆ” ಎಂದು ಸ್ಟಾರ್ಮರ್ ಡೌನಿಂಗ್ ಸ್ಟ್ರೀಟ್‌ನ ಹೊರಗಿನ ಉದ್ಘಾಟನಾ ಭಾಷಣದಲ್ಲಿ ಹೇಳಿದರು.
ಈ ಮಧ್ಯೆ ಪ್ರಧಾನಿ ರಿಷಿ ಸುನಕ್ ಸೋಲಿನ ಹೊಣೆ ಹೊತ್ತುಕೊಂಡಿದ್ದಾರೆ. ರಾಜನನ್ನು ಭೇಟಿಯಾಗಿ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಆಡಳಿತ ವಿರೋಧಿ ಅಲೆಯನ್ನು ಗೌರವಿಸುವುದಾಗಿ ಅವರು ಹೇಳಿದ್ದಾರೆ.
ಅದಕ್ಕೂ ಮೊದಲು ತಮ್ಮ ವಿದಾಯ ಭಾಷಣದಲ್ಲಿ ಸ್ಟಾರ್ಮರ್ ಅವರನ್ನು “ಸಭ್ಯ, ಸಾರ್ವಜನಿಕ ಮನೋಭಾವದ ವ್ಯಕ್ತಿ” ಎಂದು ಬಣ್ಣಿಸಿದ್ದಾರೆ. ಲೇಬರ್ ಬಹುಮತದ ಸ್ಥಾನ ದಾಟುವ ಮೊದಲೇ ಸುನಕ್ ಸೋಲನ್ನು ಒಪ್ಪಿಕೊಂಡರು ಮತ್ತು ಚುನಾವಣಾ ವಿಜಯದ ಬಗ್ಗೆ ಲೇಬರ್ ಪಕ್ಷದ ನಾಯಕ ಸ್ಟಾರ್ಮರ್ ಅವರನ್ನು ಅಭಿನಂದಿಸಿದರು.
ಯಾರು ಈ ಕೀರ್ ಸ್ಟಾರ್ಮರ್…?
1962ರ ಸೆಪ್ಟೆಂಬರ್ 2ರಂದು ಲಂಡನ್‌ನ ಸೌತ್ ವಾಕ್‌ನಲ್ಲಿ ಜನಿಸಿರುವ ಕೀರ್ ಸ್ಟಾರ್ಮರ್ ಅವರು ಕಾನೂನು ಪದವೀಧರರು. 2007ರಲ್ಲಿ ವಕೀಲೆ ವಿಕ್ಟೋರಿಯಾ ಅಲೆಗ್ಸಾಂಡರ್ ಅವರನ್ನು ಮದುವೆಯಾಗಿದ್ದು ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಕೀರ್ ಸ್ಟಾರ್ಮರ್ ತಮ್ಮ ಕಾಲೇಜು ದಿನಗಳಿಂದಲೇ ಲೇಬರ್ ಪಕ್ಷದೊಂದಿಗೆ ಗುರುತಿಸಿಕೊಂಡು ಪಕ್ಷ ಸಂಘಟನೆ ಹಾಗೂ ಆಡಳಿತ ಪಕ್ಷದ ವೈಫಲ್ಯಗಳನ್ನು ತೆರೆದಿಡುವಲ್ಲಿ ಪ್ರಮುಖ ಪಾತ್ರ ವಹಿಸಿಕೊಂಡು ಬಂದವರು. ಅವರು 2015ರಿಂದಲೂ ಹೌಸ್ ಕಾಮನ್ಸ್‌ನ ಸದಸ್ಯರಾಗಿ ಚುನಾಯಿತರಾಗುತ್ತಿದ್ದಾರೆ. ಇಂಗ್ಲೆಂಡ್‌ನ ಹಾಲ್‌ಬೋರ್ನ್ ಸಂಸದರಾಗಿ, ಕನ್ಸರ್ವೇಟಿವ್ ಪಕ್ಷದ ವೈಫಲ್ಯ ಜನರ ಮುಂದೆ ಇಡುತ್ತಾ ನಾಯಕರಾಗಿ ಬೆಳೆದರು. 2020ರಿಂದ ಹೌಸ್ ಆಫ್ ಕಾಮನ್ಸ್‌ನಲ್ಲಿ ವಿಪಕ್ಷದ ನಾಯಕರಾಗಿದ್ದರು.
ಈ ಚುನಾವಣೆಯಲ್ಲಿ ಕೀರ್ ಅವರು ಅಭಿವೃದ್ಧಿ, ಆರೋಗ್ಯ, ಹಸಿರು ಇಂಧನ, ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕುವುದು ಹಾಗೂ ಶಿಕ್ಷಣ ಕ್ಷೇತ್ರ ಸುಧಾರಣೆ ಎಂಬ ಐದು ಸೂತ್ರಗಳನ್ನು ಮುಂದಿಟ್ಟು ಪ್ರಚಾರ ನಡೆಸಿದ್ದರು. ಇದು ಫಲ ನೀಡಿದೆ.
ಲೇಬರ್ ಪಕ್ಷವು ಹೌಸ್ ಆಫ್ ಕಾಮನ್ಸ್‌ನ 650 ಸ್ಥಾನಗಳಲ್ಲಿ 420ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಬಹುಮತಕ್ಕೆ 326 ಸ್ಥಾನಗಳು ಬೇಕು. ಲೇಬರ್ ಪಾರ್ಟಿ ಸೂಪರ್ ಮೆಜಾರಿಟಿ ಗಳಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ