
ನವದೆಹಲಿ: ಮೇ 9-10ರ ಮಧ್ಯರಾತ್ರಿ ರಾವಲ್ಪಿಂಡಿಯ ವಿಮಾನ ನಿಲ್ದಾಣ ಸೇರಿದಂತೆ ನಮ್ಮ ಪ್ರಮುಖ ಸೇನಾ ನೆಲೆಗಳ ಮೇಲೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಉಡಾಯಿಸಿ ನಮ್ಮ ಯೋಜನೆಗಳನ್ನು ಭಾರತವು ವಿಫಲಗೊಳಿಸಿತು ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ.
ಪಾಕಿಸ್ತಾನದ ಪರವಾಗಿ ನಿಂತ ಕೆಲವೇ ರಾಷ್ಟ್ರಗಳಲ್ಲಿ ಒಂದಾದ ಅಜೆರ್ಬೈಜಾನ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಾಕ್ ಪ್ರಧಾನಿ ಷರೀಫ್, ಅಸಿಮ್ ಮುನೀರ್ ನೇತೃತ್ವದ ಸೇನೆಯು ಮೇ 10 ರಂದು ಬೆಳಗಿನ ಪ್ರಾರ್ಥನೆಯ ನಂತರ ಭಾರತದ ಮೇಲೆ ದಾಳಿ ಮಾಡಲು ಯೋಜಿಸಿತ್ತು. ಆದರೆ, ಭಾರತವು ಅದಕ್ಕಿಂತ ಮುಂಚೆಯೇ ಪಾಕಿಸ್ತಾನದ ವಿವಿಧ ಪ್ರಾಂತ್ಯಗಳ ಮೇಲೆ ದೀರ್ಘ-ಶ್ರೇಣಿಯ ಸೂಪರ್ಸಾನಿಕ್ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಗಳಿಂದ ದಾಳಿ ನಡೆಸಿತು ಎಂದು ಪ್ರಧಾನಿ ಹೇಳಿದರು

ಪಾಕ್ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ನೇತೃತ್ವದ ಪಾಕಿಸ್ತಾನಿ ಸೇನೆಯು ಮೇ 10 ರಂದು ಬೆಳಗಿನ ಪ್ರಾರ್ಥನೆಯ ನಂತರ ಬೆಳಿಗ್ಗೆ 4:30 ಕ್ಕೆ ಭಾರತದ ಮೇಲೆ ದಾಳಿ ಮಾಡಲು ಯೋಜಿಸಿತ್ತು. ಆದರೆ ಭಾರತವು ಅದಕ್ಕಿಂತ ಮೊದಲೇ ಬ್ರಹ್ಮೋಸ್ ಕ್ಷಿಪಣಿಗಳಿಂದ ದಾಳಿ ನಡೆಸಿ ಹಲವಾರು ಪಾಕಿಸ್ತಾನಿ ಸೇನಾ ನೆಲೆಗಳನ್ನುಳು ಮತ್ತು ಕಾರ್ಯತಂತ್ರದ ಸ್ಥಳಗಳನ್ನು ನಾಶಮಾಡಿತು.
“ಮೇ 9-10ರ ರಾತ್ರಿ, ನಾವು ಭಾರತ ನಡೆಸಿದ ಆಕ್ರಮಣಕ್ಕೆ ಕ್ರಮಬದ್ಧವಾಗಿ ಪ್ರತಿಕ್ರಿಯಿಸಲು ನಿರ್ಧರಿಸಿದ್ದೆವು. ಫಜ್ರ್ ಪ್ರಾರ್ಥನೆಯ ನಂತರ ಮೇ 10 ಬೆಳಿಗ್ಗೆ 4:30 ಕ್ಕೆ ನಮ್ಮ ಸಶಸ್ತ್ರ ಪಡೆಗಳು ಭಾರತಕ್ಕೆ ಪಾಠ ಕಲಿಸಲು ಸಿದ್ಧವಾಗಿದ್ದವು. ಆದರೆ ಅದಕ್ಕೋ ಮೊದಲೇ, ಭಾರತ ಮತ್ತೊಮ್ಮೆ ರಾವಲ್ಪಿಂಡಿಯ ವಿಮಾನ ನಿಲ್ದಾಣ ಸೇರಿದಂತೆ ಪಾಕಿಸ್ತಾನದ ವಿವಿಧ ಪ್ರಾಂತ್ಯಗಳನ್ನು ಗುರಿಯಾಗಿಸಿಕೊಂಡು ಬ್ರಹ್ಮೋಸ್ ಬಳಸಿ ಕ್ಷಿಪಣಿ ದಾಳಿ ನಡೆಸಿತು” ಎಂದು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ ಷರೀಫ್ ಹೇಳಿದರು.
“ನಮ್ಮ ಯೋಜಿತ ದಾಳಿ ಸಮಯ ಬರುವ ಮೊದಲೇ ಭಾರತ ನೂರ್ ಖಾನ್ (ರಾವಲ್ಪಿಂಡಿ) ಮತ್ತು ಮುರಿಯ್ (ಚಕ್ವಾಲ್) ನೆಲೆಗಳನ್ನು ನಾಶಪಡಿಸಿತು” ಎಂದು ಅವರು ಹೇಳಿದರು.
ಪಾಕಿಸ್ತಾನದ ಮಿಲಿಟರಿ ನೆಲೆಗಳ ಭಾರತದ ಕ್ಷಿಪಣಿ ದಾಳಿ ಮಾಡಿದ್ದನ್ನು ಇದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಸಮ್ಮುಖದಲ್ಲಿ ಒಪ್ಪಿಕೊಂಡಿದ್ದಾರೆ.
ವಾಸ್ತವವಾಗಿ, ಪಶ್ಚಿಮ ಗಡಿಯಲ್ಲಿ ಭಾರತದ ನಾಗರಿಕ ಪ್ರದೇಶಗಳ ಮೇಲೆ ಪಾಕಿಸ್ತಾನ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದಕ್ಕೆ ಪ್ರತಿಕ್ರಿಯೆಯಾಗಿ ಭಾರತವು ಗುರಿಯಾಗಿಸಿಕೊಂಡು ದಾಳಿ ನಡೆಸಿದ 11 ಮಿಲಿಟರಿ ತಾಣಗಳಲ್ಲಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯೂ ಸೇರಿತ್ತು.
ಭಾರತವು ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯ ಅಡಿಯಲ್ಲಿ ಭಾರತವು ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಪ್ರಯೋಗಿಸಿ ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ನಿಖರ ದಾಳಿ ನಡೆಸಿತ್ತು. ಪಾಕಿಸ್ತಾನವು ಭಾರತೀಯ ನಗರಗಳ ಮೇಲೆ ಡ್ರೋನ್ ದಾಳಿ ನಡೆಸಲು ಮುಂದಾಯಿತು. ಆದಾಗ್ಯೂ, ವಾಯು ರಕ್ಷಣಾ ವ್ಯವಸ್ಥೆ – ಎಸ್ -400 ಮತ್ತು ಆಕಾಶ್ ಅವುಗಳನ್ನು ತಡೆದು ಹೊಡೆದುರುಳಿಸಿತು.
ನಂತರ, ಮೇ 10 ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮವನ್ನು ಘೋಷಿಸಲಾಯಿತು.
ಆಪರೇಷನ್ ಸಿಂಧೂರ
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ಆಪರೇಷನ್ ಸಿಂಧೂರ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ಮೇಲೆ “ನಿಖರವಾದ ದಾಳಿಗಳನ್ನು” ಪ್ರಾರಂಭಿಸಿತು, ಈ ದಾಳಿಯಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್ನ 10 ಕುಟುಂಬ ಸದಸ್ಯರು ಹಾಗೂ ನಾಲ್ವರು ಆಪ್ತ ಸಹಾಯಕರು ಸೇರಿದಂತೆ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವಿಗೀಡಾದರು.
ಬಹಾವಲ್ಪುರದಲ್ಲಿರುವ ಜೈಶ್ನ ಮರ್ಕಜ್ ಸುಭಾನ್ ಅಲ್ಲಾ, ತೆಹ್ರಾ ಕಲಾನ್ನಲ್ಲಿರುವ ಸರ್ಜಲ್ ಕ್ಯಾಂಪ್, ಕೋಟ್ಲಿಯ ಮರ್ಕಜ್ ಅಬ್ಬಾಸ್ ಮತ್ತು ಮುಜಫರಾಬಾದ್ನಲ್ಲಿರುವ ಸೈಯದ್ನಾ ಬಿಲಾಲ್ ಕ್ಯಾಂಪ್ ಗುರಿಯಾಗಿಸಿಕೊಂಡರು. ಲಷ್ಕರೆನ ಪ್ರಬಲ ನೆಲೆಗಳಾದ ಮುರ್ಡಿಕೆಯಲ್ಲಿರುವ ಮರ್ಕಜ್ ತೈಬಾ, ಬರ್ನಾಲಾದ ಮರ್ಕಜ್ ಅಹ್ಲೆ ಹದೀಸ್ ಮತ್ತು ಮುಜಫರಾಬಾದ್ನ ಶ್ವಾಯಿ ನಲ್ಲ ಶಿಬಿರಗಳ ಮೇಲೂ ದಾಳಿ ನಡೆಸಲಾಯಿತು. ಕೋಟ್ಲಿಯ ಮಕಾಜ್ ರಹೀಲ್ ಶಾಹಿದ್ನಲ್ಲಿರುವ ಹಿಜ್ಬುಲ್ ಮುಜಾಹಿದ್ದೀನ್ನ ಸೌಲಭ್ಯಗಳು ಮತ್ತು ಸಿಯಾಲ್ಕೋಟ್ನಲ್ಲಿರುವ ಮೆಹಮೂನಾ ಜೋಯಾ ಮೇಲೆ ಸಹ ದಾಳಿ ಮಾಡಲಾಯಿತು.


ನಿಮ್ಮ ಕಾಮೆಂಟ್ ಬರೆಯಿರಿ