ಸೌದಿ ಅರೇಬಿಯಾದ ಮೆಕ್ಕಾದಲ್ಲಿರುವ ಮಸೀದಿಯ (ಮಸ್ಜಿದ್ ಅಲ್-ಹರಾಮ್) ಮೇಲಿನ ಮಹಡಿಯಿಂದ ವ್ಯಕ್ತಿಯೊಬ್ಬ ಕೆಳಕ್ಕೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೇಳೆ ಕೆಳಗೆ ನಿಂತಿದ್ದ ಭದ್ರತಾ ಅಧಿಕಾರಿಯೊಬ್ಬರು ಸಮಯಪ್ರಜ್ಞೆ ಮೆರೆದು, ವ್ಯಕ್ತಿ ನೆಲಕ್ಕೆ ಅಪ್ಪಳಿಸದಂತೆ ತಡೆದು ಆತನ ಜೀವ ಉಳಿಸಿದ್ದಾರೆ. ಈ ಸಾಹಸದ ನಡುವೆ ಅಧಿಕಾರಿಗೂ ಗಂಭೀರ ಗಾಯಗಳಾಗಿವೆ.
ಮೆಕ್ಕಾ ಪ್ರಾಂತ್ಯದ ಎಮಿರೇಟ್ ಪ್ರಕಟಣೆಯ ಪ್ರಕಾರ, ವ್ಯಕ್ತಿಯು ಮೇಲಿನ ಮಹಡಿಯಿಂದ ಕೆಳಕ್ಕೆ ಜಿಗಿಯಲು ಮುಂದಾದ ಕೂಡಲೇ ಗ್ರಾಂಡ್ ಮಸೀದಿಯ ವಿಶೇಷ ಭದ್ರತಾ ಪಡೆಗಳು ಕಾರ್ಯಪ್ರವೃತ್ತರಾದವು. ವ್ಯಕ್ತಿ ಕೆಳಕ್ಕೆ ಬೀಳುವಾಗ ಆತನನ್ನು ಹಿಡಿಯಲು ಪ್ರಯತ್ನಿಸಿದ ಅಧಿಕಾರಿಗೆ ಮೂಳೆ ಮುರಿತದಂತಹ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಪಡೆಗಳ ಹೇಳಿಕೆ
“ಗ್ರಾಂಡ್ ಮಸೀದಿಯ ಮೇಲಿನ ಮಹಡಿಯಿಂದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಆತ ನೆಲಕ್ಕೆ ಬೀಳುವ ಕ್ಷಣದಲ್ಲಿ ಅಧಿಕಾರಿಯೊಬ್ಬರು ತಡೆದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಪ್ರಸ್ತುತ ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ.
ವೈರಲ್ ಆಗಿರುವ ವೀಡಿಯೊ ತುಣುಕಿನಲ್ಲಿ, ವ್ಯಕ್ತಿಯೊಬ್ಬ ಮೇಲಿನ ಮಹಡಿಯ ಅಂಚಿಗೆ ಬಂದು ಕೆಳಕ್ಕೆ ಜಿಗಿಯುವುದು ಕಂಡುಬಂದಿದೆ. ಆತನನ್ನು ತಡೆಯಲು ಭದ್ರತಾ ಸಿಬ್ಬಂದಿ ಧಾವಿಸಿದ್ದಾರೆ. ಅಷ್ಟರಲ್ಲಿ ಆತ ಕೆಳಕ್ಕೆ ಜಿಗಿದಿದ್ದು, ಕೆಳಗೆ ನಿಂತಿದ್ದ ಗಾರ್ಡ್ ಆತನ ವೇಗವನ್ನು ತಡೆಯಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಗಾಯಗೊಂಡಿದ್ದಾರೆ.
ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಗ್ರಾಂಡ್ ಮಸೀದಿಯ ಮುಖ್ಯ ಇಮಾಮ್ ಶೇಖ್ ಡಾ. ಅಬ್ದುರ್ ರೆಹಮಾನ್ ಅಸ್ ಸುದೈಸ್ ಅವರು ಪ್ರವಾಸಿಗರು ಮತ್ತು ಭಕ್ತರು ಮಸೀದಿಯ ನಿಯಮಗಳನ್ನು ಪಾಲಿಸಬೇಕು ಹಾಗೂ ಈ ಪವಿತ್ರ ಸ್ಥಳದ ಘನತೆಯನ್ನು ಗೌರವಿಸಬೇಕು.
ಇಸ್ಲಾಮಿಕ್ ಕಾನೂನಿನ ಪ್ರಕಾರ ಆತ್ಮಹತ್ಯೆಯು ಕಟ್ಟುನಿಟ್ಟಾಗಿ ನಿಷೇಧಿಸಲ್ಪಟ್ಟಿದೆ. ಕೆಲವು ವ್ಯಕ್ತಿಗಳು ಇಂತಹ ಕೃತ್ಯಕ್ಕೆ ಮುಂದಾಗುವುದು ಸರಿಯಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಈ ಹಿಂದೆಯೂ ಅಂದರೆ 2017ರಲ್ಲಿ ಸಾವಿರಾರು ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ, ಕಾಬಾದ ಸಮೀಪವಿರುವ ಮೇಲಿನ ಮಹಡಿಯಿಂದ ವ್ಯಕ್ತಿಯೊಬ್ಬ ಜಿಗಿದು ಪ್ರಾಣ ಕಳೆದುಕೊಂಡಿದ್ದ ಘಟನೆ ನಡೆದಿತ್ತು. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ ಎಂದು ಮಕ್ಕಳ ಪ್ರಾಧಿಕಾರ ತಿಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ