
ಅರಾ (ಬಿಹಾರ): ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದ ಕಲಾವಿದೆಯೊಬ್ಬರಿಗೆ ಪ್ರೇಕ್ಷಕರು ಬಲವಂತವಾಗಿ ನಾಣ್ಯಗಳನ್ನು ನುಂಗಿಸಿದ ಅಮಾನವೀಯ ಘಟನೆ ಬಿಹಾರದ ಭೋಜಪುರ ಜಿಲ್ಲೆಯ ಚಾಂದ್ವಾ ತೋಲಾ ಪ್ರದೇಶದಲ್ಲಿ ನಡೆದಿದೆ. ನಾಣ್ಯ ನುಂಗಿದ್ದರಿಂದ ನರ್ತಕಿಯ ಆರೋಗ್ಯ ತೀವ್ರವಾಗಿ ಕ್ಷೀಣಿಸಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಚಾಂದ್ವಾ ತೋಲಾದಲ್ಲಿ ಆಯೋಜಿಸಲಾಗಿದ್ದ ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ನರ್ತಕಿ ನೃತ್ಯ ಮಾಡುತ್ತಿದ್ದರು. ಈ ವೇಳೆ ಪ್ರೇಕ್ಷಕರಲ್ಲಿದ್ದ ಕೆಲವರು ಅತಿಯಾದ ಉತ್ಸಾಹದಿಂದ ವೇದಿಕೆಯ ಮೇಲೆ ನುಗ್ಗಿದ್ದಾರೆ. ಕಾರ್ಯಕ್ರಮದ ಗದ್ದಲದ ನಡುವೆಯೇ ಕೆಲ ಕಿಡಿಗೇಡಿಗಳು ನರ್ತಕಿಯ ಬಾಯಿಗೆ ಬಲವಂತವಾಗಿ ನಾಣ್ಯಗಳನ್ನು ತುರುಕಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದಾದ ಕೆಲವೇ ಕ್ಷಣಗಳಲ್ಲಿ ಕಲಾವಿದೆ ಅಸ್ವಸ್ಥಗೊಂಡಿದ್ದು, ವೇದಿಕೆಯ ಮೇಲೆಯೇ ಕುಸಿದು ಬಿದ್ದಿದ್ದಾರೆ. ಇದರಿಂದ ಸಂಭ್ರಮದ ವಾತಾವರಣವು ದಿಢೀರ್ ಆತಂಕಕ್ಕೆ ತಿರುಗಿತು.
ನರ್ತಕಿಯ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದಂತೆ ಅವರನ್ನು ತಕ್ಷಣವೇ ಅರಾ ಸದರ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ನೀಡಿದ ವೈದ್ಯರು ಆಕೆಯ ಗಂಟಲಿನಲ್ಲಿ ಸಿಲುಕಿದ್ದ ನಾಣ್ಯಗಳನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಆದಾಗ್ಯೂ, ನರ್ತಕಿಯ ಸ್ಥಿತಿ ಇನ್ನೂ ಚಿಂತಾಜನಕವಾಗಿದ್ದು, ವೈದ್ಯಕೀಯ ತಂಡವು ಆಕೆಯನ್ನು ನಿರಂತರ ನಿಗಾದಲ್ಲಿ ಇರಿಸಿದೆ. ನಾಣ್ಯ ನುಂಗಿದ್ದರಿಂದ ಒಳ ಭಾಗದ ಅಂಗಾಂಗಗಳಿಗೆ ಏನಾದರೂ ಹಾನಿಯಾಗಿದೆಯೇ ಎಂಬ ಬಗ್ಗೆ ಹೆಚ್ಚಿನ ತಪಾಸಣೆಗಳು ನಡೆಯುತ್ತಿವೆ.
ಘಟನೆಯ ಬಗ್ಗೆ ಆಕೆಯ ಪತಿ ರಾಜು ಕುಮಾರ ಮಾತನಾಡಿ, “ನನ್ನ ಪತ್ನಿ ನೃತ್ಯ ಮಾಡುತ್ತಿದ್ದಾಗ ವೇದಿಕೆಗೆ ನುಗ್ಗಿದ ಕೆಲವರು ಆಕೆಯ ಬಾಯಿಗೆ ನಾಣ್ಯಗಳನ್ನು ತುರುಕಿದರು. ಒಂದು ನಾಣ್ಯವನ್ನು ಆಕೆಯಗಂಟಲಿನ ಒಳಗೆಹೋಯಿತು. ಪರಿಸ್ಥಿತಿ ಬಿಗಡಾಯಿಸಿದಾಗ ನಾವು ಆಸ್ಪತ್ರೆಗೆ ಓಡಿದೆವು,” ಎಂದು ನೋವು ತೋಡಿಕೊಂಡಿದ್ದಾರೆ.
ಸಾರ್ವಜನಿಕ ಆಕ್ರೋಶ ಮತ್ತು ಪೊಲೀಸ್ ತನಿಖೆ
ಈ ಘಟನೆಯು ಕಲಾವಿದರ ಸುರಕ್ಷತೆಯ ಬಗ್ಗೆ ದೊಡ್ಡ ಮಟ್ಟದ ಪ್ರಶ್ನೆಗಳನ್ನು ಎತ್ತಿದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರ ವರ್ತನೆ ಮತ್ತು ಆಯೋಜಕರ ವೈಫಲ್ಯದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಾವಿದರ ವೈಯಕ್ತಿಕ ಘನತೆ ಮತ್ತು ಸುರಕ್ಷತೆಗೆ ಧಕ್ಕೆ ತಂದಿರುವ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.
ಪ್ರಸ್ತುತ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯು ಘಟನೆಯ ಬಗ್ಗೆ ತನಿಖೆ ಆರಂಭಿಸಿದೆ. ಕಾರ್ಯಕ್ರಮದ ಸಂಘಟಕರು ಮತ್ತು ಸಾಕ್ಷಿಗಳಿಂದ ಹೇಳಿಕೆಗಳನ್ನು ಪಡೆಯಲಾಗುತ್ತಿದ್ದು, ಜನಸಂದಣಿ ನಿಯಂತ್ರಿಸುವಲ್ಲಿ ಉಂಟಾದ ಲೋಪದೋಷಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ.



ನಿಮ್ಮ ಕಾಮೆಂಟ್ ಬರೆಯಿರಿ