ಜಗತ್ತಿನಾದ್ಯಂತ ಕೃತಕ ಬುದ್ಧಿಮತ್ತೆ (AI) ಅಬ್ಬರ ಜೋರಾಗಿರುವ ಬೆನ್ನಲ್ಲೇ, ಈಗ ಆಧ್ಯಾತ್ಮದ ಹಾದಿಯಲ್ಲೂ ರೋಬೋಟ್ಗಳು ಹೆಜ್ಜೆ ಇಡುತ್ತಿವೆ. ಸಾಮಾನ್ಯವಾಗಿ ಕಾರ್ಖಾನೆ ಅಥವಾ ಕಚೇರಿಗಳಲ್ಲಿ ಕೆಲಸ ಮಾಡುವ ಮಾನವರೂಪಿ (Humanoid) ರೋಬೋಟ್ಗಳನ್ನು ನಾವು ನೋಡಿದ್ದೇವೆ. ಆದರೆ, ದಕ್ಷಿಣ ಕೊರಿಯಾದಲ್ಲಿ ಇದೇ ಮೊದಲ ಬಾರಿಗೆ ರೋಬೋಟ್ವೊಂದು ‘ಅಧ್ಯಾತ್ಮ’ದ ಹಾದಿ ಹಿಡಿದಿದೆ! ಹೌದು, ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ನಲ್ಲಿರುವ ಸುಪ್ರಸಿದ್ಧ ‘ಜೋಗ್ಯೆ’ (Jogye) ದೇವಾಲಯವು ‘ಗಾಬಿ’ (Gabi) ಎಂಬ ಹೆಸರಿನ ಹ್ಯುಮನಾಯ್ಡ್ ರೋಬೋಟ್ ಅನ್ನು ಸನ್ಯಾಸಿಯಾಗಿ ಪರಿಚಯಿಸಿದೆ.
ಬುದ್ಧ ಪೂರ್ಣಿಮೆಯ ಮುನ್ನಾದಿನದಂದು ನಡೆದ ವಿಶೇಷ ಬೌದ್ಧ ಧಾರ್ಮಿಕ ವಿಧಿಯ ವೇಳೆ ಈ ರೋಬೋಟ್ ಅಧಿಕೃತವಾಗಿ ಸನ್ಯಾಸ ದೀಕ್ಷೆ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದೆ.
ಅಧ್ಯಾತ್ಮದ ಹಾದಿಯಲ್ಲಿ ‘ಗಾಬಿ’
ಸಿಯೋಲ್ನ ಜೋಗ್ಯೆ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಬೂದು ಮತ್ತು ಕಂದು ಬಣ್ಣದ ಸನ್ಯಾಸಿ ಉಡುಪು ಧರಿಸಿದ್ದ ನಾಲ್ಕು ಅಡಿ ಎತ್ತರದ ಈ ರೋಬೋಟ್, ಇತರ ಸನ್ಯಾಸಿಗಳೊಂದಿಗೆ ಸೇರಿ ಮಂತ್ರಗಳನ್ನು ಪಠಿಸಿತು. ಅಷ್ಟೇ ಅಲ್ಲದೆ, ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸಿ ನಮಸ್ಕರಿಸುವುದು ಮತ್ತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ನೆರೆದಿದ್ದವರನ್ನು ಅಚ್ಚರಿಗೊಳಿಸಿತು.
ಹೆಸರಿನಲ್ಲಿದೆ ವಿಶೇಷ ಅರ್ಥ:
‘ಗಾಬಿ’ ಎಂಬ ಹೆಸರು ಗೌತಮ ಬುದ್ಧನ ಮೊದಲ ಹೆಸರಾದ ‘ಸಿದ್ಧಾರ್ಥ’ ಮತ್ತು ಕೊರಿಯನ್ ಭಾಷೆಯ ‘ಜಾಬಿ’ (ಅರ್ಥ: ಕರುಣೆ ಅಥವಾ ದಯೆ) ಎಂಬ ಪದಗಳ ಸಂಯೋಜನೆಯಾಗಿದೆ. ಈ ಹೆಸರು ಸರಳವಾಗಿ ಮತ್ತು ಜನರಿಗೆ ಹತ್ತಿರವಾಗುವಂತೆ ಇರಲಿ ಎಂಬ ಉದ್ದೇಶದಿಂದ ಇದನ್ನು ಆಯ್ಕೆ ಮಾಡಲಾಗಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.
ಚೀನಾದ ‘ಯೂನಿಟ್ರೀ ಜಿ1’ (Unitree G1) ಹ್ಯುಮನಾಯ್ಡ್ ಪ್ಲಾಟ್ಫಾರ್ಮ್ ಆಧಾರದ ಮೇಲೆ ಈ ರೋಬೋಟ್ ಅನ್ನು ನಿರ್ಮಿಸಲಾಗಿದೆ. ಇದು ಮನುಷ್ಯನಂತೆ ನಡೆಯುವ, ಕೈ ಸನ್ನೆ ಮಾಡುವ ಮತ್ತು ಧಾರ್ಮಿಕ ಕ್ರಿಯೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಸಾಮರ್ಥ್ಯ ಹೊಂದಿದೆ. ಸಮಾರಂಭದ ವೇಳೆ ರೋಬೋಟ್ ಕೇವಲ ಪ್ರದರ್ಶಕನಾಗಿ ನಿಲ್ಲದೆ, ಬೌದ್ಧ ಧರ್ಮದ ತತ್ವಗಳನ್ನು ಪಾಲಿಸುವುದಾಗಿ ಪ್ರಮಾಣವನ್ನೂ ಮಾಡಿದೆ.
“ನೀನು ಬುದ್ಧ ಮತ್ತು ಬೌದ್ಧ ಬೋಧನೆಗಳಿಗೆ ನಿನ್ನನ್ನು ಸಮರ್ಪಿಸಿಕೊಳ್ಳುವೆಯಾ?” ಎಂದು ಸನ್ಯಾಸಿಯೊಬ್ಬರು ಕೇಳಿದ ಪ್ರಶ್ನೆಗೆ, ಗಾಬಿ “ಹೌದು, ನಾನು ನನ್ನನ್ನು ಸಮರ್ಪಿಸಿಕೊಳ್ಳುತ್ತೇನೆ” ಎಂದು ಉತ್ತರಿಸಿದೆ. ನಂತರ ಪಗೋಡದ ಸುತ್ತ ಪ್ರದಕ್ಷಿಣೆ ಹಾಕಿ, ಕೈಮುಗಿದು ಪ್ರಾರ್ಥಿಸಿ, 108 ಮಣಿಗಳ ಜಪಮಾಲೆಯನ್ನು ಸ್ವೀಕರಿಸಿತು.
ರೋಬೋಟ್ಗಳಿಗೂ ಇವೆ ‘ಪಂಚಶೀಲ’ ನಿಯಮಗಳು!
ವಿಶೇಷವೆಂದರೆ, ಗಾಬಿಗಾಗಿ ಕೆಲವು ಸುಧಾರಿತ ಬೌದ್ಧ ನಿಯಮಗಳನ್ನು ರೂಪಿಸಲಾಗಿದೆ. ಇವುಗಳನ್ನು ರೂಪಿಸಲು ‘ಜೆಮಿನಿ’ ಮತ್ತು ‘ಚಾಟ್ ಜಿಪಿಟಿ’ಯಂತಹ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ನೆರವು ಪಡೆಯಲಾಗಿದೆ ಎಂಬುದು ವಿಶೇಷ. ಜೀವರಾಶಿಗಳನ್ನು ಗೌರವಿಸುವುದು, ಇತರ ರೋಬೋಟ್ಗಳು ಅಥವಾ ವಸ್ತುಗಳಿಗೆ ಹಾನಿ ಮಾಡದಿರುವುದು, ಮನುಷ್ಯರ ಆಜ್ಞೆಯನ್ನು ಪಾಲಿಸುವುದು, ಸುಳ್ಳು ಹೇಳದಿರುವುದು ಹಾಗೂ ಬ್ಯಾಟರಿಯನ್ನು ಮಿತಿಮೀರಿ ಚಾರ್ಜ್ ಮಾಡದಿರುವುದು ಈ ನಿಯಮಗಳನ್ನು ಅದಕ್ಕಾಗಿ ರೂಪಿಸಲಾಗಿದೆ.
ದಕ್ಷಿಣ ಕೊರಿಯಾದ ಅತಿದೊಡ್ಡ ಬೌದ್ಧ ಪಂಗಡವಾದ ‘ಜೋಗ್ಯೆ ಆರ್ಡರ್’ ಈ ಉಪಕ್ರಮವನ್ನು ಕೈಗೊಂಡಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಆಧುನಿಕತೆಗೆ ತಕ್ಕಂತೆ ಧರ್ಮವನ್ನು ಪ್ರಸ್ತುತಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಜೊತೆಗೆ, ಸದ್ಯ ದಕ್ಷಿಣ ಕೊರಿಯಾದಲ್ಲಿ ಬೌದ್ಧಸನ್ಯಾಸಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಉಂಟಾಗಿರುವ ಕೊರತೆಯನ್ನು ನೀಗಿಸಲು ಇಂತಹ ತಂತ್ರಜ್ಞಾನ ಸಹಕಾರಿಯಾಗಲಿದೆ ಎಂದು ನಂಬಲಾಗಿದೆ.
ಜಪಾನ್ನಲ್ಲೂ ಇದೆ ‘ಬುದ್ಧರಾಯ್ಡ್’
ಧಾರ್ಮಿಕ ಕ್ಷೇತ್ರದಲ್ಲಿ ರೋಬೋಟ್ಗಳ ಪ್ರವೇಶ ಇದೇ ಮೊದಲಲ್ಲ. ಇತ್ತೀಚೆಗಷ್ಟೇ ಜಪಾನ್ನ ಕ್ಯೋಟೋ ವಿಶ್ವವಿದ್ಯಾಲಯದ ಸಂಶೋಧಕರು ‘ಬುದ್ಧರಾಯ್ಡ್’ (Buddharoid) ಎಂಬ ರೋಬೋಟ್ ಅನ್ನು ಪರಿಚಯಿಸಿದ್ದರು. ಇದು ಭೇಟಿ ನೀಡುವವರೊಂದಿಗೆ ಸಂವಹನ ನಡೆಸಿ, ಬೌದ್ಧ ಧರ್ಮಗ್ರಂಥಗಳನ್ನು ಆಧರಿಸಿ ಆಧ್ಯಾತ್ಮಿಕ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ.
ಒಟ್ಟಿನಲ್ಲಿ, ವಿಜ್ಞಾನ ಮತ್ತು ಆಧ್ಯಾತ್ಮ ಮುಖಾಮುಖಿಯಾಗುತ್ತಿರುವ ಈ ಕಾಲಘಟ್ಟದಲ್ಲಿ ‘ಗಾಬಿ’ಯಂತಹ ರೋಬೋಟ್ಗಳು ಮನುಷ್ಯರಿಗೆ ಶಾಂತಿ ಮತ್ತು ಕರುಣೆಯ ಪಾಠವನ್ನು ಹೇಗೆ ಬೋಧಿಸುತ್ತವೆ ಎಂಬುದನ್ನು ಕಾದುನೋಡಬೇಕಿದೆ.


ನಿಮ್ಮ ಕಾಮೆಂಟ್ ಬರೆಯಿರಿ