ಎಎಪಿ ರಾಜ್ಯಸಭೆ ಉಪನಾಯಕನ ಸ್ಥಾನದಿಂದ ಪ್ರಮುಖ ನಾಯಕ ರಾಘವ ಚಡ್ಡಾ ವಜಾ…! ದಿಢೀರ್‌ ಬದಲಾವಣೆಗೆ ಕಾರಣ ?

 ನವದೆಹಲಿ: ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ (AAP) ತನ್ನ ಸಂಸದೀಯ ಮಂಡಳಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕ ಸ್ಥಾನದಿಂದ ರಾಘವ್ ಚಡ್ಡಾ ಅವರನ್ನು ಕೆಳಗಿಳಿಸಿದ್ದು, ಅವರ ಜಾಗಕ್ಕೆ ಪಂಜಾಬ್ ಸಂಸದ ಅಶೋಕ್ ಮಿತ್ತಲ್ ಅವರನ್ನು ನೇಮಿಸಲಾಗಿದೆ.
ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯ ಚಾನ್ಸಲರ್ ಆಗಿರುವ ಅಶೋಕ ಮಿತ್ತಲ್ ಈಗ ಮೇಲ್ಮನೆಯಲ್ಲಿ ಪಕ್ಷದ ಉಪ ನಾಯಕರಾಗಿದ್ದಾರೆ. ಸಂಜಯ ಸಿಂಗ್ ಅವರು ರಾಜ್ಯಸಭೆಯಲ್ಲಿ ಪಕ್ಷದ ನಾಯಕರಾಗಿ ಮುಂದುವರಿದಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಸ್ತುತ ಆಮ್‌ ಆದ್ಮಿ ಪಕ್ಷವು 10 ಸದಸ್ಯರನ್ನು ಹೊಂದಿದೆ (ಪಂಜಾಬ್‌ನಿಂದ 7 ಮತ್ತು ದೆಹಲಿಯಿಂದ 3). ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ, ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ನಂತರ ನಾಲ್ಕನೇ ದೊಡ್ಡ ಪಕ್ಷವಾಗಿದೆ.
37 ವರ್ಷದ ರಾಘವ ಚಡ್ಡಾ ಪಕ್ಷದ ಸ್ಥಾಪನೆಯ ದಿನಗಳಿಂದಲೂ ಕೇಜ್ರಿವಾಲ್ ಅವರ ಆಪ್ತ ವಲಯದಲ್ಲಿದ್ದವರು. ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಇವರು, 23ನೇ ವಯಸ್ಸಿನಲ್ಲಿ ‘ದೆಹಲಿ ಲೋಕಪಾಲ್ ಮಸೂದೆ’ ಕರಡು ಸಿದ್ಧಪಡಿಸುವ ಮೂಲಕ ರಾಜಕೀಯಕ್ಕೆ ಕಾಲಿಟ್ಟಿದ್ದರು. 26ನೇ ವಯಸ್ಸಿಗೆ ಪಕ್ಷದ ರಾಷ್ಟ್ರೀಯ ಖಜಾಂಚಿಯಾಗಿದ್ದ ಇವರು, 2020ರಲ್ಲಿ ರಾಜೇಂದ್ರ ನಗರದ ಶಾಸಕರಾಗಿ ಮತ್ತು 2022ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.
ಬದಲಾವಣೆಗೆ ಕಾರಣವೇನು?
ರಾಘವ ಚಡ್ಡಾ ಅವರನ್ನು ಈ ಸ್ಥಾನದಿಂದ ಕೆಳಗಿಳಿಸಿರುವುದಕ್ಕೆ ಆಪ್ ಅಧಿಕೃತ ಕಾರಣ ನೀಡಿಲ್ಲ. ಆದರೆ, ಕಳೆದ ಕೆಲವು ತಿಂಗಳುಗಳಿಂದ ಪಕ್ಷದ ಆಂತರಿಕ ವಲಯದಲ್ಲಿ ಇವರ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿದ್ದವು ಎನ್ನಲಾಗಿದೆ. ಮನೀಶ್ ಸಿಸೋಡಿಯಾ ಮತ್ತು ಕೇಜ್ರಿವಾಲ್ ಅವರಿಗೆ ಕ್ಲೀನ್ ಚಿಟ್ ಸಿಕ್ಕಾಗ ಚಡ್ಡಾ ತೋರಿದ ಮೌನ ಹಾಗೂ ಪಕ್ಷದ ಪ್ರಮುಖ ಚಟುವಟಿಕೆಗಳಿಂದ ದೂರ ಉಳಿದಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.
ಈ ಬೆಳವಣಿಗೆಗಳ ನಡುವೆಯೂ ಚಡ್ಡಾ ಅವರು ರಾಜ್ಯಸಭೆಯಲ್ಲಿ ವಿಮಾನ ನಿಲ್ದಾಣಗಳಲ್ಲಿನ ಆಹಾರದ ಬೆಲೆ ಏರಿಕೆ, ಗಿಗ್ ವರ್ಕರ್ಸ್‌ಗಳ ಹಕ್ಕುಗಳು ಮತ್ತು ಸಂಚಾರ ದಟ್ಟಣೆಯಂತಹ ವಿಷಯಗಳ ಬಗ್ಗೆ ಧ್ವನಿ ಎತ್ತುತ್ತಿದ್ದರು.
ಹೊಸ ಜವಾಬ್ದಾರಿ ವಹಿಸಿಕೊಂಡ ಅಶೋಕ ಮಿತ್ತಲ್, “ನಮ್ಮದು ಪ್ರಜಾಪ್ರಭುತ್ವದ ಪಕ್ಷ. ಇಲ್ಲಿ ಪ್ರತಿಯೊಬ್ಬ ನಾಯಕನಿಗೂ ಕಲಿಯಲು ಅವಕಾಶ ನೀಡಲಾಗುತ್ತದೆ. ಮೊದಲು ಎನ್.ಡಿ. ಗುಪ್ತಾ, ನಂತರ ಚಡ್ಡಾ ಅವರು ಈ ಸ್ಥಾನದಲ್ಲಿದ್ದರು, ಈಗ ನನಗೆ ಅವಕಾಶ ಸಿಕ್ಕಿದೆ,” ಎಂದು ಹೇಳಿರುವ ಅವರು ಕೇಜ್ರಿವಾಲ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಒಟ್ಟಾರೆಯಾಗಿ, ಪಕ್ಷದ ಉನ್ನತ ನಾಯಕ ಎಂದು ಗುರುತಿಸಿಕೊಂಡಿದ್ದ ಚಡ್ಡಾ ಅವರ ಈ ‘ಹಿಂಬಡ್ತಿ’ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement