
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಯಲ್ಲಿ ಶುಕ್ರವಾರ(ಜುಲೈ 25)ಕ್ಕೆ ನಿರಂತರವಾಗಿ 4,078 ದಿನಗಳನ್ನು ಪೂರೈಸುವ ಮೂಲಕ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಸತತ 4,077 ದಿನಗಳ ಕಾಲ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.
ದಿವಂಗತ ಇಂದಿರಾ ಗಾಂಧಿ ಅವರು ಜನವರಿ 24, 1966 ರಿಂದ ಮಾರ್ಚ್ 24, 1977 ರವರೆಗೆ ಸತತ 4,077 ದಿನಗಳ ಕಾಲ ಪ್ರಧಾನಿಯಾಗಿದ್ದರು.
ಈ ಮೈಲಿಗಲ್ಲಿನೊಂದಿಗೆ, ಪ್ರಧಾನಿ ಮೋದಿ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ ನೆಹರು ಅವರ ನಂತರಅತಿ ಹೆಚ್ಚು ಕಾಲ ಸತತವಾಗಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ದೇಶದ ಎರಡನೇ ಪ್ರಧಾನ ಮಂತ್ರಿಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಜುಲೈ 25, 2025 ರಂದು ಸತತ 4,078 ದಿನಗಳನ್ನು ಅಧಿಕಾರದಲ್ಲಿ ಪೂರೈಸುತ್ತಿದ್ದಂತೆ, ಹಲವಾರು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.

ಪ್ರಧಾನಿ ಮೋದಿ ಸ್ವಾತಂತ್ರ್ಯದ ನಂತರ ಜನಿಸಿದ ಅತಿ ಹೆಚ್ಚು ಕಾಲ ಕಾರ್ಯನಿರ್ವಹಿಸಿದ ಮೊದಲ ಪ್ರಧಾನಿ ಮತ್ತು ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಕಾಂಗ್ರೆಸ್ಸೇತರ ಪ್ರಧಾನಿ ಮತ್ತು ಹಿಂದಿ ಮಾತನಾಡದ ರಾಜ್ಯದಿಂದ ಬಂದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿಯಾಗಿದ್ದಾರೆ.
ಎರಡು ಪೂರ್ಣ ಅವಧಿಗಳನ್ನು ಪೂರ್ಣಗೊಳಿಸಿದ ಮತ್ತು ಬಹುಮತದೊಂದಿಗೆ ಎರಡು ಬಾರಿ ಮರು ಆಯ್ಕೆಯಾದ ಮೊದಲ ಮತ್ತು ಏಕೈಕ ಕಾಂಗ್ರೆಸ್ಸೇತರ ನಾಯಕ ಅವರಾಗಿದ್ದಾರೆ. ಲೋಕಸಭೆಯಲ್ಲಿ ಸ್ವಂತವಾಗಿ ಬಹುಮತ ಪಡೆದ ಏಕೈಕ ಕಾಂಗ್ರೆಸ್ಸೇತರ ಪ್ರಧಾನಿಯಾಗಿದ್ದಾರೆ. 1971 ರಲ್ಲಿ ಇಂದಿರಾ ಗಾಂಧಿಯವರ ನಂತರ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದ ಪ್ರಧಾನಿ ಆಗಿದ್ದಾರೆ.
ದಿವಂಗತ ಜವಾಹರಲಾಲ ನೆಹರು ಹೊರತುಪಡಿಸಿ, ಭಾರತದಲ್ಲಿ ರಾಜಕೀಯ ಪಕ್ಷದ ನಾಯಕರಾಗಿ ಸತತ ಮೂರು ಚುನಾವಣೆಗಳನ್ನು ಗೆದ್ದ ಏಕೈಕ ಪ್ರಧಾನಿ ಪ್ರಧಾನಿ ಮೋದಿ.
ಗುಜರಾತ್ (2002, 2007, 2012), ಲೋಕಸಭಾ ಚುನಾವಣೆ (2014, 2019, 2024) ಗಳ ಮೂಲಕ ಪಕ್ಷದ ನಾಯಕರಾಗಿ ಸತತ ಆರು ಚುನಾವಣೆಗಳನ್ನು ಗೆದ್ದ ಭಾರತದ ಎಲ್ಲಾ ಪ್ರಧಾನ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳಲ್ಲಿ ಅವರು ಏಕೈಕ ನಾಯಕರಾಗಿದ್ದಾರೆ.
ಗುಜರಾತ್‌ನ ವಡ್ನಗರದಲ್ಲಿ ಸಾಧಾರಣ ಕುಟುಂಬದಲ್ಲಿ ಜನಿಸಿದ ನರೇಂದ್ರ ಮೋದಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ)ದಲ್ಲಿ ಮೇಲಕ್ಕೆ ಏರುವ ಮೊದಲು ತಮ್ಮ ತಂದೆಗೆ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರಾಟ ಮಾಡಲು ಸಹಾಯ ಮಾಡುತ್ತಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ