ಚಂಬಾ: ಹಿಮಾಚಲ ಪ್ರದೇಶದ ಚಂಬಾದಲ್ಲಿ ಭಾರಿ ಮಳೆಯಿಂದ ಏಕಾಏಕಿ ಉಂಟಾದ ಪ್ರವಾಹದ ರಭಸಕ್ಕೆ ಸಿಲುಕಿದ್ದ ಬೈಕ್ ಸವಾರನನ್ನು ಸ್ಥಳೀಯ ಕುಟುಂಬವೊಂದು ತಮ್ಮ ಪ್ರಾಣದ ಹಂಗು ತೊರೆದು ಸಾಹಸದಿಂದ ರಕ್ಷಿಸಿದೆ. ಕುಟುಂಬದ ಇಬ್ಬರು ಮಹಿಳೆಯರು, ಅವರಲ್ಲಿ ಓರ್ವ ನವವಿವಾಹಿತೆ, ತಮ್ಮ ದುಪಟ್ಟಾವನ್ನೇ ತಾತ್ಕಾಲಿಕ ಹಗ್ಗವನ್ನಾಗಿ ಬಳಸಿ ಬೈಕ್ ಸವಾರನನ್ನು ಸುರಕ್ಷಿತ ಸ್ಥಳಕ್ಕೆ ಎಳೆದು ತಂದಿದ್ದಾರೆ. ಈ ರಕ್ಷಣಾ ಕಾರ್ಯದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕುಟುಂಬದ ಧೈರ್ಯ ಮತ್ತು ಮಾನವೀಯತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಭಾರಿ ಮಳೆಯ ಬಳಿಕ ಸಂಜೆ ವೇಳೆ ಭರ್ಮಾಲಾ ಪ್ರದೇಶದ ಭಾಟಿಯತ್ನ ಕಾಕಿಯಾರಾ–ತುನೂಹಟ್ಟಿ ರಸ್ತೆಯಲ್ಲಿ ಏಕಾಏಕಿ ನೀರು ನುಗ್ಗಿತ್ತು. ಕೆಲವೇ ಕ್ಷಣಗಳಲ್ಲಿ ರಸ್ತೆಯ ಮೇಲೆ ನೀರಿನ ಹರಿವು ತೀವ್ರಗೊಂಡು, ಇಡೀ ರಸ್ತೆ ರಭಸದಿಂದ ಹರಿಯುವ ಹೊಳೆಯಂತಾಗಿತ್ತು. ನೀರಿನ ವೇಗ ಹೆಚ್ಚಾಗುತ್ತಿದ್ದಂತೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಘಟಾಶ್ನಿಯ ಮಾಮ್ಲಾ ಗ್ರಾಮದ ಬೈಕ್ ಸವಾರ ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡರು.
ನೀರಿನ ಸೆಳೆತ ಎಷ್ಟು ಪ್ರಬಲವಾಗಿತ್ತೆಂದರೆ, ಬೈಕ್ ಸವಾರನಿಗೆ ಸಮತೋಲನ ಕಾಯ್ದುಕೊಳ್ಳುವುದೇ ಕಷ್ಟವಾಗಿತ್ತು. ಯಾವುದೇ ಕ್ಷಣದಲ್ಲಿ ನೀರಿನ ರಭಸಕ್ಕೆ ಕೊಚ್ಚಿಹೋಗುವ ಅಪಾಯ ಎದುರಾಗಿತ್ತು. ಈ ವೇಳೆ ಸಮೀಪದಲ್ಲಿದ್ದ ಕುಟುಂಬವೊಂದು ತಕ್ಷಣ ನೆರವಿಗೆ ಧಾವಿಸಿದೆ.
ಕುಟುಂಬದ ಇಬ್ಬರು ಮಹಿಳೆಯರು, ಅವರಲ್ಲಿ ಓರ್ವ ನವವಿವಾಹಿತೆ, ತಮ್ಮ ದುಪಟ್ಟಾವನ್ನು ಹಗ್ಗದಂತೆ ಬಳಸಿ ಪ್ರವಾಹದಲ್ಲಿ ಸಿಲುಕಿದ್ದ ಬೈಕ್ ಸವಾರನತ್ತ ಚಾಚಿದ್ದಾರೆ.ಓರ್ವ ಪುರುಷ ಮಹಿಳೆಯರು ಚಾಚಿದ ದುಪಟ್ಟಾವನ್ನು ಸವಾರನತ್ತ ಎಸೆದಿದ್ದಾರೆ. ಸವಾರ ಹಿಡಿದುಕೊಂಡಿದ್ದಾರೆ. ಬಳಿಕ ಕುಟುಂಬದ ಸದಸ್ಯರು ಆತನನ್ನು ನಿಧಾನವಾಗಿ ತಮ್ಮತ್ತ ಎಳೆದು ಅಪಾಯಕಾರಿ ನೀರಿನ ಹರಿವಿನಿಂದ ಹೊರಗೆ ಕರೆತಂದಿದ್ದಾರೆ. ಈ ವೇಳೆ ಮತ್ತೊಬ್ಬ ವ್ಯಕ್ತಿಯೂ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿ, ಮಹಿಳೆಯರಿಗೆ ನೆರವಾಗಿರುವುದು ವಿಡಿಯೊದಲ್ಲಿ ಕಂಡುಬಂದಿದೆ.
ಪ್ರವಾಹದ ನೀರು ವೇಗವಾಗಿ ಹರಿಯುತ್ತಿದ್ದುದರಿಂದ ಈ ರಕ್ಷಣಾ ಕಾರ್ಯವೂ ಅತ್ಯಂತ ಅಪಾಯಕಾರಿಯಾಗಿತ್ತು. ಆದರೂ ಕುಟುಂಬದ ಸದಸ್ಯರು ತಮ್ಮ ಸುರಕ್ಷತೆಯನ್ನೂ ಲೆಕ್ಕಿಸದೆ ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಿ ಬೈಕ್ ಸವಾರನ ಜೀವ ಉಳಿಸಿದ್ದಾರೆ.
ರಕ್ಷಣಾ ಕಾರ್ಯದ ವಿಡಿಯೊದಲ್ಲಿ ಪ್ರವಾಹದಿಂದ ಮುಳುಗಿದ್ದ ರಸ್ತೆಯ ಬದಿಯಲ್ಲಿ ದುಪಟ್ಟಾವನ್ನು ಬೈಕ್ ಸವಾರನತ್ತ ಚಾಚುತ್ತಿರುವುದು ಹಾಗೂ ಆತನನ್ನು ಸುರಕ್ಷಿತ ಸ್ಥಳಕ್ಕೆ ಎಳೆದುಕೊಂಡು ಬರುತ್ತಿರುವ ದೃಶ್ಯಗಳು ಕಂಡುಬರುತ್ತವೆ.
ಕುಟುಂಬದ ಕ್ಷಿಪ್ರ ನಿರ್ಧಾರ ಮತ್ತು ಧೈರ್ಯದಿಂದ ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿದೆ. ಅಪಾಯದಲ್ಲಿದ್ದ ವ್ಯಕ್ತಿಯ ನೆರವಿಗೆ ತಮ್ಮ ಜೀವದ ಹಂಗನ್ನೂ ತೊರೆದು ಧಾವಿಸಿದ ಕುಟುಂಬದ ಮಾನವೀಯ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ವಿಡಿಯೊಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು, “ದೇವರು ಅವರನ್ನು ಆಶೀರ್ವದಿಸಲಿ. ಈ ಜಗತ್ತಿನಲ್ಲಿ ಸಂತೋಷವಾಗಿರಲು ನಮಗೆ ಬೇಕಾಗಿರುವುದು ಸಹಾನುಭೂತಿ ಮತ್ತು ಮಾನವೀಯತೆ” ಎಂದು ಬರೆದಿದ್ದಾರೆ.
ಮತ್ತೊಬ್ಬರು, “ಈ ನವವಿವಾಹಿತ ದಂಪತಿ ಒಂದು ಕ್ಷಣವೂ ತಡ ಮಾಡದೆ, ಜೀವ ಉಳಿಸಲು ವಧುವಿನ ದುಪಟ್ಟಾವನ್ನೇ ರಕ್ಷಣಾ ಸಾಧನವಾಗಿ ಬಳಸಿದ್ದಾರೆ” ಎಂದು ಶ್ಲಾಘಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ