ಪ್ರತಿಭಟನಾ ನಿರತ ರೈತರ ಬೇಡಿಕೆ ಈಡೇರಿಸದಿದ್ರೆ 16 ರಾಜ್ಯಗಳಲ್ಲಿ ವಿದ್ಯುತ್‌ ಕಡಿತ: ಟಿಕಾಯತ್‌ ಎಚ್ಚರಿಕೆ

ನವ ದೆಹಲಿ: ಪ್ರತಿಭಟನಾ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ 16 ರಾಜ್ಯಗಳಲ್ಲಿ ವಿದ್ಯುತ್‌ ಕಡಿತಗೊಳಿಸುವುದಾಗಿ ಸಂಯುಕ್ತ ರೈತ ಒಕ್ಕೂಟದ ನಾಯಕ ರಾಕೇಶ ಟಿಕಾಯತ್‌ ಎಚ್ಚರಿಸಿದ್ದಾರೆ.
ರಾಜಸ್ಥಾನದ ಭಾರತ್ಪುರದಲ್ಲಿ ಮಾಧ್ಯಮ ಸಂವಾದಲ್ಲಿ ಅವರು ಈ ಎಚ್ಚರಿಕೆ ನೀಡಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಮಾಧ್ಯಮ ಸಂವಾದವೊಂದರಲ್ಲಿ ಮಾತನಾಡಿದ ಅವರು,ಕಾರ್ಪೋರೇಟ್‌ ಸಂಸ್ಥೆಗಳೇ ದೇಶವನ್ನು ಆಳುತ್ತಿವೆ. ಕೇಂದ್ರದಲ್ಲಿ ಯಾವುದೇ ಸರ್ಕಾರವಿಲ್ಲ. ಅವರು ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡಿದ್ದಾರೆ ಮತ್ತು ದೇಶದ ಜನರು ಅವರನ್ನು ಸರ್ಕಾರದಿಂದ ಹೊರಹಾಕುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಆಡಳಿತ ಪಕ್ಷವು ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿದ ಅವರು, “ಸಾರ್ವಜನಿಕರು ನಿರುದ್ಯೋಗ ಮತ್ತು ಹಸಿವನ್ನು ಎದುರಿಸುತ್ತಿರುವಾಗ ಹೊಸ ಕೃಷಿ ಕಾನೂನಗಳ ಮೂಲಕ ರೈತರ ಭೂಮಿಯನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಟಿಕಾಯತ್‌ ಅವರು ಪ್ರತಿಪಕ್ಷಗಳ ವಿರುದ್ಧ ಕೂಡ ವಾಗ್ದಾಳಿ ನಡೆಸಿದರು, ಯಾವುದೇ ವಿರೋಧವಿಲ್ಲದಿರುವುದು ಪ್ರಜಾಪ್ರಭುತ್ವಕ್ಕೆ ದುರದೃಷ್ಟಕರ. ಪ್ರತಿಪಕ್ಷಗಳು ಜೀವಂತವಾಗಿದ್ದಿದ್ದರೆ ನೂತನ ಕೃಷಿ ಕಾನೂನಗಳ ಬಗ್ಗೆ ಸಂಸತ್ತಿನಲ್ಲಿ ಹೋರಾಡುತ್ತಿತ್ತು.ಅವರು ಹೋರಾಡಬೇಕಿರುವುದು ಸಂಸತ್ತಿನಲ್ಲಿ ಎಂದು ಹೇಳಿದರು.
ಪ್ರತಿಭಟನೆಯ ಮಾರ್ಗಸೂಚಿ ಹಂಚಿಕೊಂಡ ರಾಕೇಶ್ ಟಿಕಾಯತ್‌, “ಮುಂದೆ, ನಾವು ಗುಜರಾತ್ ರಾಜ್ಯವನ್ನು ಈ ಸರ್ಕಾರದ ಹಿಡಿತದಿಂದ ಮುಕ್ತಗೊಳಿಸಬೇಕು” ಎಂದು ಘೋಷಿಸಿದರು.
ಏತನ್ಮಧ್ಯೆ, ರೆಸ್ಟೋರೆಂಟ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಕೊವಿಡ್‌-19ರ ಮಾಸ್ಕ್‌ ಧರಿಸುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಎಂಟು ರೈತ ಒಕ್ಕೂಟಗಳ ನಾಯಕರನ್ನು ಅಹಮದಾಬಾದ್‌ನಲ್ಲಿ ಶುಕ್ರವಾರ ಬಂಧಿಸಲಾಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಚಂದಖೇಡಾ ಪೊಲೀಸರು ವಶಪಡಿಸಿಕೊಂಡವರಲ್ಲಿ ಭಾರತೀಯ ಕಿಸಾನ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಯುಧ್ವೀರ್ ಸಿಂಗ್ ಕೂಡ ಇದ್ದರು. ಈ ಮಾಹಿತಿಯನ್ನು ರಾಕೇಶ್ ಟಿಕಾಯತ್‌ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ: ತಾಪಮಾನ ಹೆಚ್ಚಳದಿಂದ ವಿದ್ಯಾರ್ಥಿಗಳು ಪಾರಾಗಲು ಕ್ಲಾಸ್‌ ರೂಮ್‌ ಅನ್ನೇ ಈಜುಕೊಳವಾಗಿ ಪರಿವರ್ತಿಸಿದ ಶಾಲೆ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement