ಇದೆಂಥ ತರಬೇತಿ..? ತರಬೇತಿ ಹೆಸರಲ್ಲಿ ವಿದ್ಯಾರ್ಥಿಗಳನ್ನು ದೊಣ್ಣೆಯಿಂದ ಅಮಾನುಷವಾಗಿ ಥಳಿಸಿದ ಸೀನಿಯರ್‌ ಎನ್‌ಸಿಸಿ ಕೆಡೆಟ್ : ವೀಡಿಯೊ ವೈರಲ್‌

ಮುಂಬೈ: ಶಾಲಾ-ಕಾಲೇಜುಗಳಲ್ಲಿ ಪಠ್ಯೇತರ ಚಟುವಟಿಕೆಯ ಭಾಗವಾಗಿರುವ ನ್ಯಾಷನಲ್ ಕೆಡೆಟ್ ಕಾರ್ಪ್ಸ್‌(ಎನ್‌ಸಿಸಿ)ನ ಸೀನಿಯರ್ ವಿದ್ಯಾರ್ಥಿಯೊಬ್ಬ ಜೂನಿಯರ್‌ಗಳಿಗೆ ಮನಬಂದಂತೆ ಬಡಿಗೆಯಿಂದ ಥಳಿಸಿದ ಘಟನೆಯ ವೀಡಿಯೊ ವೈರಲ್ ಆಗಿದೆ.
ಮುಂಬೈ ಸಮೀಪದ ಥಾಣೆಯ ಬಂದೋಡ್ಕರ ಕಾಲೇಜಿನಲ್ಲಿನ ಎನ್‌ಸಿಸಿ ತರಬೇತಿಯ ವೇಳೆ ಈ ಬೆಳವಣಿಗೆ ನಡೆದಿದೆ ಎಂದು ಹೇಳಲಾಗಿದ್ದು, ಘಟನೆಯನ್ನು ದೂರದಿಂದ ನೋಡುತ್ತಿದ್ದ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ವೈರಲ್​ ಆಗಿರುವ ವಿಡಿಯೋದಲ್ಲಿ ಮಳೆ ಬರುತ್ತಿದ್ದರೂಸೀನಿಯರ್ ಎನ್​ಸಿಸಿ ಕೆಡೆಟ್​ ಒಬ್ಬ ತನ್ನ 8 ಮಂದಿ ಜ್ಯೂನಿಯರ್​ಗಳನ್ನು ಮಳೆ ನೀರಿನ ನಡುವೆ ಪುಷ್​ಅಪ್​ ಭಂಗಿಯಲ್ಲಿ ಇರುವಂತೆ ಹೇಳುತ್ತಾನೆ. ಬಳಿಕ ಅವರ ಮೇಲೆ ದೊಡ್ಡ ಕೋಲೊಂದರಿಂದ ಅಮಾನುಷವಾಗಿ ಹೊಡೆಯಲು ಶುರು ಮಾಡುತ್ತಾನೆ. ಒಬ್ಬ ವಿದ್ಯಾರ್ಥಿ ನಿರಂತರ ಹೊಡೆತದ ನೋವು ಸಹಿಸಲಾರದೆ, ಕೈ ಅಡ್ಡ ಇಟ್ಟು ಹೊಡೆಯದಂತೆ ತಡೆಯುತ್ತಿರುವ ದೃಶ್ಯವೂ ಸೆರೆಯಾಗಿದೆ. ಕೆಲವರು ನೋವನ್ನು ತಾಳಲಾರದೆ ಜೋರಾಗಿ ಅಳುತ್ತಿದ್ದರು ಸಹ ಆತ ಹೊಡೆಯುವುದನ್ನು ನಿಲ್ಲಿಸುವುದಿಲ್ಲ.

ವೀಡಿಯೊದಲ್ಲಿ ಕೋಲು ಹಿಡಿದು ಥಳಿಸಿರುವ ವ್ಯಕ್ತಿಯನ್ನು ಹಿರಿಯ ಎನ್‌ಸಿಸಿ ಕೆಡೆಟ್ ಎಂದು ಗುರುತಿಸಲಾಗಿದೆ. ಡ್ರಿಲ್ ನಡೆಸಲು ವಿಫಲರಾದ ಹಿನ್ನೆಲೆಯಲ್ಲಿ ಈ ರೀತಿ ಶಿಕ್ಷೆ ನೀಡಿದ್ದಾನೆ ಎಂದು ವರದಿಯಾಗಿದೆ.
ವೀಡಿಯೊ ವೈರಲ್ ಆದ ಬಳಿಕ ಪ್ರತಿಕ್ರಿಯೆ ನೀಡಿರುವ ಕಾಲೇಜಿನ ಪ್ರಾಂಶುಪಾಲೆ ಸುಚಿತ್ರಾ ನಾಯ್ಕ್, ‘ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ತಪ್ಪಿತಸ್ಥ ಹಿರಿಯ ವಿದ್ಯಾರ್ಥಿಯ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದ್ದಾರೆ. ಸುಮಾರು 40 ವರ್ಷಗಳಿಂದ ನಮ್ಮ ಕಾಲೇಜಿನಲ್ಲಿ ಎನ್ ಸಿಸಿ ತರಬೇತಿ ನಡೆಯುತ್ತಿದೆ. ಎನ್‌ಸಿಸಿಯ ಜವಾಬ್ದಾರಿ ಇರುವ ಶಿಕ್ಷಕರ ಅನುಪಸ್ಥಿತಿಯ ವೇಳೆ ಈ ಘಟನೆ ನಡೆದಿದೆ. ವಿದ್ಯಾರ್ಥಿ ಮಾಡಿರುವ ಕೃತ್ಯ ಕೇವಲ ಮಾನಸಿಕ ಅಸ್ವಸ್ಥರು ಮಾತ್ರ ಮಾಡಲು ಸಾಧ್ಯ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ 41 ಔಷಧಗಳ ಬೆಲೆ ಕಡಿಮೆ ಮಾಡಿದ ಸರ್ಕಾರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement