ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಅತ್ಯಂತ ವಿಚಿತ್ರ ಹಾಗೂ ಅಚ್ಚರಿಯ ಪ್ರಕರಣವೊಂದು ವರದಿಯಾಗಿದೆ. ಎರಡು-ಮೂರು ವರ್ಷಗಳಿಂದ ಪ್ರೀತಿಸಿ, ಸಂಭ್ರಮದಿಂದ ಮದುವೆಯಾಗಿದ್ದ ಜೋಡಿಯೊಂದು ಹಸೆಮಣೆ ಏರಿದ ಕೇವಲ 24 ಗಂಟೆಗಳಲ್ಲಿ ವಿಚ್ಛೇದನ ಪಡೆದು ಕಾನೂನುಬದ್ಧವಾಗಿ ಬೇರ್ಪಟ್ಟಿದ್ದಾರೆ….!
ವೃತ್ತಿಯಲ್ಲಿ ವೈದ್ಯೆಯಾಗಿರುವ ಯುವತಿ ಹಾಗೂ ಇಂಜಿನಿಯರ್ ಆಗಿರುವ ಯುವಕ ಕಳೆದ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಇತ್ತೀಚೆಗೆ ಮದುವೆಯಾಗಿದ್ದರು. ಆದರೆ, ಮದುವೆಯ ಮರುದಿನವೇ ಜೀವನದ ಪ್ರಮುಖ ವಿಚಾರವೊಂದರ ಬಗ್ಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ.
ವಕೀಲರು ನೀಡಿರುವ ಮಾಹಿತಿಯಂತೆ, ಪತಿ ತಾನು ಹಡಗಿನಲ್ಲಿ (Merchant Navy/Ship) ಕೆಲಸ ಮಾಡುವುದಾಗಿ ಮದುವೆಯ ನಂತರ ತಿಳಿಸಿದ್ದಾನೆ. ತನ್ನ ಕೆಲಸದ ಅವಧಿ ಮತ್ತು ಸ್ಥಳದ ಬಗ್ಗೆ ತನಗೇ ಖಚಿತತೆ ಇಲ್ಲ ಎಂಬ ವಿಷಯವನ್ನು ಆತ ಪತ್ನಿಯ ಮುಂದೆ ಹೇಳಿದ್ದಾನೆ.
ಪತ್ನಿ ವೈದ್ಯೆಯಾಗಿರುವುದರಿಂದ ಮತ್ತು ಪತಿಯ ಕೆಲಸದ ಅನಿಶ್ಚಿತತೆಯಿಂದಾಗಿ ಒಟ್ಟಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಇಬ್ಬರೂ ಬಂದಿದ್ದಾರೆ. ಎರಡು ವರ್ಷಗಳ ಕಾಲ ಪ್ರೀತಿಸಿದ್ದರೂ ಸಹ, ಈ ಮಹತ್ವದ ವಿಷಯದ ಬಗ್ಗೆ ಮದುವೆಗೆ ಮೊದಲು ಚರ್ಚಿಸದಿರುವುದು ಅಚ್ಚರಿ ಮೂಡಿಸಿದೆ.
ತ್ವರಿತ ವಿಚ್ಛೇದನ
ಸಾಮಾನ್ಯವಾಗಿ ಭಾರತದಲ್ಲಿ ವಿಚ್ಛೇದನ ಪ್ರಕರಣಗಳು ವರ್ಷಗಟ್ಟಲೆ ನಡೆಯುತ್ತವೆ. ಆದರೆ ಈ ಪ್ರಕರಣದಲ್ಲಿ ಯಾವುದೇ ರೀತಿಯ ಹಿಂಸೆ ಅಥವಾ ಕ್ರಿಮಿನಲ್ ಆರೋಪಗಳಿರಲಿಲ್ಲ. ಇಬ್ಬರೂ ಪರಸ್ಪರ ಒಪ್ಪಿಗೆಯಿಂದ (Mutual Consent) ಬೇರ್ಪಡಲು ನಿರ್ಧರಿಸಿದರು. ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನು ಅನುಸರಿಸಿ ನ್ಯಾಯಾಲಯವು ಈ ವಿಶೇಷ ಪ್ರಕರಣದಲ್ಲಿ ಶೀಘ್ರವಾಗಿ ತೀರ್ಪು ನೀಡಿದೆ.
“ವೈಚಾರಿಕ ಭಿನ್ನಾಭಿಪ್ರಾಯಗಳು ಅತಿ ಹೆಚ್ಚಾಗಿದ್ದರಿಂದ ಕಾಲಹರಣ ಮಾಡದೆ ಕಾನೂನುಬದ್ಧವಾಗಿ ಬೇರ್ಪಡಲು ದಂಪತಿ ನಿರ್ಧರಿಸಿದರು” ಎಂದು ವಕೀಲರು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ