ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಅತ್ಯಂತ ಕಠಿಣ ಎಚ್ಚರಿಕೆ ನೀಡಿದ್ದು, “ಇಂದು ರಾತ್ರಿ ಇಡೀ ನಾಗರಿಕತೆಯೇ ನಾಶವಾಗಲಿದೆ” ಎಂದು ಹೇಳಿದ್ದಾರೆ. ತಮ್ಮ ‘ಟ್ರುತ್ ಸೋಶಿಯಲ್’ (Truth Social) ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, “ಒಂದು ಇಡೀ ನಾಗರಿಕತೆ ಇಂದು ರಾತ್ರಿ ಅಂತ್ಯವಾಗಲಿದೆ, ಅದು ಮತ್ತೆ ಎಂದಿಗೂ ಮರಳಿ ಬರುವುದಿಲ್ಲ. ಇದು ಸಂಭವಿಸುವುದು ನನಗೆ ಇಷ್ಟವಿಲ್ಲ, ಆದರೆ ಬಹುಶಃ ಇದು ನಡೆದೇ ನಡೆಯುತ್ತದೆ,” ಎಂದು ಆತಂಕಕಾರಿ ಹೇಳಿಕೆ ನೀಡಿದ್ದಾರೆ.
ಕಳೆದ 47 ವರ್ಷಗಳ ಭ್ರಷ್ಟಾಚಾರ ಮತ್ತು ಸುಲಿಗೆ ಇಂದು ರಾತ್ರಿ ಕೊನೆಗೊಳ್ಳಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಆದಾಗ್ಯೂ, “ಅದ್ಭುತವಾದ ಕ್ರಾಂತಿಕಾರಿ ಬದಲಾವಣೆ” ಸಂಭವಿಸುವ ಸಣ್ಣ ಅವಕಾಶವನ್ನೂ ತಾವು ಮುಕ್ತವಾಗಿಟ್ಟಿರುವುದಾಗಿ ಹೇಳಿದ್ದಾರೆ.
ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮಾತನಾಡಿ, “ಅಮೆರಿಕ ಇರಾನ್‌ನಲ್ಲಿ ತನ್ನ ಯುದ್ಧದ ಉದ್ದೇಶಗಳನ್ನು ಸಾಧಿಸಿದೆ, ಈಗ ಮುಂದಿನ ನಿರ್ಧಾರ ಇರಾನಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
ಕದನ ವಿರಾಮದ ಪ್ರಯತ್ನ
ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, 45 ದಿನಗಳ ಕದನ ವಿರಾಮಕ್ಕಾಗಿ ಮಧ್ಯಸ್ಥಿಕೆದಾರರು ಪ್ರಯತ್ನಿಸುತ್ತಿದ್ದರೂ, ಅದರಲ್ಲಿ ಹೆಚ್ಚಿನ ಪ್ರಗತಿ ಕಂಡುಬಂದಿಲ್ಲ.
ಟ್ರಂಪ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಇರಾನ್, “ನೀವು ಮತ್ತು ನಿಮ್ಮ ಮಿತ್ರರಾಷ್ಟ್ರಗಳು ಇರಾನ್‌ನ ಪುರಾತನ ನಾಗರಿಕತೆಯಿಂದ ಮರೆಯಲಾಗದ ಹೊಡೆತವನ್ನು ಅನುಭವಿಸುವಿ ಎಂದು ಎಚ್ಚರಿಸಿದೆ.
ತುರ್ಕಿಯಲ್ಲಿರುವ ಇರಾನ್ ರಾಯಭಾರ ಕಚೇರಿಯು ಎಕ್ಸ್ (X) ನಲ್ಲಿ ಪ್ರತಿಕ್ರಿಯಿಸಿ, “ಅಲೆಕ್ಸಾಂಡರ್ ಅದನ್ನು ಸುಟ್ಟನು, ಮಂಗೋಲರು ಧ್ವಂಸಗೊಳಿಸಿದರು, ಇತಿಹಾಸವು ಅದನ್ನು ಪರೀಕ್ಷಿಸಿತು. ಆದರೆ ಇರಾನ್ ಇಂದಿಗೂ ಇದೆ. ಒಬ್ಬ ‘ಮನೋರೋಗಿ’ಯ (Psychopath) ಬೆದರಿಕೆಯಿಂದ ಕಾಲವೇ ಅಳಿಸಲು ಸಾಧ್ಯವಾಗದ ದೇಶವನ್ನು ಅಂತ್ಯಗೊಳಿಸಲು ಸಾಧ್ಯವಿಲ್ಲ ಎಂದು ಕುಟುಕಿದೆ.
ಖಾರ್ಗ್ ದ್ವೀಪದ ಮೇಲೆ ದಾಳಿ:
ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪದಲ್ಲಿ ಮಂಗಳವಾರ ಸ್ಫೋಟಗಳು ಸಂಭವಿಸಿವೆ ಎಂದು ಮೆಹರ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇರಾನ್‌ನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಸೇನೆಯು ದಾಳಿ ನಡೆಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಇರಾನ್‌ನ ಮೂಲಸೌಕರ್ಯಗಳನ್ನು ನಾಶಪಡಿಸುವುದಾಗಿ ಬೆದರಿಕೆ ಹಾಕಿರುವ ಟ್ರಂಪ್, ತಮಗೆ ಯುದ್ಧಾಪರಾಧಗಳ ಬಗ್ಗೆ ಭಯವಿಲ್ಲ ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆ ಎಚ್ಚರಿಕೆ
ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ರಾತ್ರಿ 8 ಗಂಟೆಯೊಳಗೆ (EST) ಇರಾನ್ ‘ಹಾರ್ಮುಜ್ ಜಲಸಂಧಿ’ಯನ್ನು ಪುನಃ ತೆರೆಯದಿದ್ದರೆ ಇರಾನ್‌ನ ಪ್ರತಿಯೊಂದು ವಿದ್ಯುತ್ ಕೇಂದ್ರ ಮತ್ತು ಸೇತುವೆಗಳ ಮೇಲೆ ಬೃಹತ್ ಬಾಂಬ್ ದಾಳಿ ನಡೆಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ