ಪುಣೆ: ಐತಿಹಾಸಿಕ ರಾಜಗಢ ಕೋಟೆಯಲ್ಲಿ ಚಾರಣಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಮನಕಲಕುವ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಚಾರಣದ ವೇಳೆ ಮೃತಪಟ್ಟ ತಮ್ಮ ಮಾಲೀಕನ ಮೃತದೇಹದ ಪಕ್ಕದಲ್ಲೇ ಇದ್ದ ಆತನ ಸಾಕು ನಾಯಿಯೊಂದು ಶವವನ್ನು ಕೆಳಕ್ಕೆ ಸಾಗಿಸುವಾಗಲೂ ಆತನ ಸಾಕು ನಾಯಿ ದೂರ ಸರಿಯದೆ, ಸ್ಟ್ರೆಚರ್ ಪಕ್ಕದಲ್ಲೇ ಕೊನೆಯವರೆಗೂ ಹೆಜ್ಜೆ ಹಾಕಿದೆ. ಮಾಲೀಕನನ್ನು ಕಳೆದುಕೊಂಡ ನೋವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗದಿದ್ದರೂ, ಆತನನ್ನು ಬಿಟ್ಟು ಹೋಗಲು ನಿರಾಕರಿಸಿದ ಶ್ವಾನದ ನಿಷ್ಠೆ ಅಲ್ಲಿದ್ದ ಪ್ರವಾಸಿಗರು ಮತ್ತು ಸ್ಥಳೀಯರ ಕಣ್ಣಾಲಿಗಳನ್ನು ತೇವಗೊಳಿಸಿದೆ.
ಶನಿವಾರ ಜಿಗ್ನೇಶ ಸದಾಶಿವ ಖಂಡಾಲ್ಕರ ಎಂಬವರು ಐತಿಹಾಸಿಕ ರಾಜಗಢ ಕೋಟೆಗೆ ಚಾರಣಕ್ಕೆ ತೆರಳಿದ್ದರು. ತಮ್ಮೊಂದಿಗೆ ಸಾಕು ನಾಯಿಯನ್ನೂ ಕರೆದೊಯ್ದಿದ್ದರು. ಕೋಟೆಯ ಹಾದಿಯಲ್ಲಿ ಮೇಲಕ್ಕೆ ಸಾಗುತ್ತಿದ್ದಾಗ ಜಿಗ್ನೇಶ ಅವರಿಗೆ ತೀವ್ರ ಆಯಾಸ ಕಾಣಿಸಿಕೊಂಡಿದೆ. ಹೀಗಾಗಿ, ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲು ನಿಂತಿದ್ದಾರೆ. ಆದರೆ, ಸಮಯ ಕಳೆದಂತೆ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಕೊನೆಗೆ ಮಾರಣಾಂತಿಕ ಹೃದಯಾಘಾತ ಸಂಭವಿಸಿದೆ.
ವಿಷಯ ತಿಳಿದು ಸ್ಥಳೀಯರು ಹಾಗೂ ರಕ್ಷಣಾ ತಂಡದ ಸದಸ್ಯರು ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಜಿಗ್ನೇಶ ಅವರನ್ನು ಕೋಟೆಯಿಂದ ಕೆಳಕ್ಕೆ ಸಾಗಿಸಲು ಆರಂಭಿಸಿದ್ದಾರೆ. ಈ ವೇಳೆ ಅವರ ಸಾಕು ನಾಯಿ ಮಾತ್ರ ಮಾಲೀಕನನ್ನು ಬಿಟ್ಟು ಕದಲಲು ಸಿದ್ಧವಿರಲಿಲ್ಲ. ಮೃತದೇಹವನ್ನು ಸ್ಟ್ರೆಚರ್ನಲ್ಲಿ ಹೊತ್ತು ಕೆಳಕ್ಕೆ ಸಾಗಿಸುತ್ತಿದ್ದಾಗಲೂ ನಾಯಿ ಅದರ ಪಕ್ಕದಲ್ಲೇ ನಡೆದುಕೊಂಡು ಬಂದಿದೆ. ದುರಂತದ ಗಂಭೀರತೆ ಏನೆಂಬುದನ್ನು ಅರಿಯದಿದ್ದರೂ, ತನ್ನ ಮಾಲೀಕನ ಜತೆಯನ್ನೇ ಕೊನೆಯವರೆಗೂ ಬಿಡದ ಶ್ವಾನದ ನಡವಳಿಕೆ ಅಲ್ಲಿದ್ದವರ ಮನಸ್ಸನ್ನು ಮುಟ್ಟಿದೆ.
ಈ ದೃಶ್ಯವನ್ನು ಕಂಡ ಕೋಟೆಯಲ್ಲಿದ್ದ ಪ್ರವಾಸಿಗರು ಮತ್ತು ಸ್ಥಳೀಯರು ಭಾವುಕರಾಗಿದ್ದಾರೆ. ಮನುಷ್ಯನೊಂದಿಗೆ ಪ್ರೀತಿ ಮತ್ತು ನಿಷ್ಠೆಯ ಬಂಧ ಬೆಳೆಸಿಕೊಂಡ ಪ್ರಾಣಿಗಳು, ಆ ಸಂಬಂಧವನ್ನು ಕೊನೆಯ ಕ್ಷಣದವರೆಗೂ ಹೇಗೆ ಉಳಿಸಿಕೊಳ್ಳುತ್ತವೆ ಎಂಬುದಕ್ಕೆ ಈ ಘಟನೆ ಮನಕಲಕುವ ಉದಾಹರಣೆಯಾಗಿದೆ.
ಗಾಯಗೊಂಡ ಮಾಲೀಕನನ್ನು ಹುಡುಕಲು ಪೊಲೀಸರಿಗೆ ದಾರಿ ತೋರಿದ ನಾಯಿ!
ಮತ್ತೊಂದು ಘಟನೆಯಲ್ಲಿ ಅಮೆರಿಕದ ಕಾನ್ಸಾಸ್ನಲ್ಲಿ ನಾಯಿಯೊಂದು ತನ್ನ ಮಾಲೀಕನ ಪ್ರಾಣ ರಕ್ಷಣೆಗೆ ನೆರವಾಗುವ ಮೂಲಕ ನಿಷ್ಠೆ ಮೆರೆದಿದೆ. ಮನೆಯಲ್ಲಿ ಬಿದ್ದು ಎದ್ದು ನಿಲ್ಲಲಾಗದೆ ಒದ್ದಾಡುತ್ತಿದ್ದ ಮಾಲೀಕನನ್ನು ಪತ್ತೆಹಚ್ಚಲು ಈ ನಾಯಿ ಪೊಲೀಸರಿಗೆ ದಾರಿ ತೋರಿಸಿದೆ ಎಂದು ಪೀಪಲ್ (People) ವರದಿ ಮಾಡಿದೆ.
ಅಮೆರಿಕದ ಲೀವಾಡ್ ಪೊಲೀಸ್ ಇಲಾಖೆ ಈ ಘಟನೆಯ ಬಾಡಿ ಕ್ಯಾಮೆರಾ ದೃಶ್ಯಾವಳಿಗಳನ್ನು ಹಂಚಿಕೊಂಡಿದೆ. ಸೆಪ್ಟೆಂಬರ್ 17ರಂದು ಈ ಘಟನೆ ನಡೆದಿದ್ದು, ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ಕೈಯಲ್ಲಿ ಲೀಶ್ (ನಾಯಿಯನ್ನು ನಿಯಂತ್ರಿಸಲು ಬಳಸುವ ಪಟ್ಟಿ) ಹೊಂದಿದ್ದ ನಾಯಿ ಕಾಣಿಸಿಕೊಂಡಿದೆ. ಆದರೆ, ಅದರ ಮಾಲೀಕರು ಸಮೀಪದಲ್ಲಿ ಎಲ್ಲಿಯೂ ಕಾಣಿಸಿರಲಿಲ್ಲ. ಅದರ ವರ್ತನೆಯಿಂದ ಅನುಮಾನಗೊಂಡ ಅಧಿಕಾರಿ ನಾಯಿಯನ್ನು ಹಿಂಬಾಲಿಸಿದ್ದಾರೆ. ಆಗ ಮನೆಯ ಗ್ಯಾರೇಜ್ ಬಳಿ ಅದು ಅವರನ್ನು ಕರೆದೊಯ್ದಿದೆ. ಅಲ್ಲಿ ಗ್ಯಾರೇಜ್ ಬಾಗಿಲು ತೆರೆದಿರುವುದು ಅವರ ಗಮನಕ್ಕೆ ಬಂದಿದೆ.
ಒಳಗೆ ಪರಿಶೀಲಿಸಿದಾಗ ಮನೆಯ ಮಾಲೀಕರು ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ. ಅವರು ಬಿದ್ದ ಸ್ಥಳದಿಂದ ಎದ್ದು ನಿಲ್ಲಲು ಸಾಧ್ಯವಾಗದೆ ಅಸಹಾಯಕ ಸ್ಥಿತಿಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಮನೆಯ ನಿವಾಸಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ನೆಲದ ಮೇಲೆಯೇ ಬಿದ್ದಿದ್ದರು. ಈ ಸಂದರ್ಭದಲ್ಲಿ ನಾಯಿ ಅಧಿಕಾರಿಯನ್ನು ತನ್ನ ಮನೆಯತ್ತ ಕರೆದೊಯ್ದಿದ್ದರಿಂದ ಮಾಲೀಕರು ಇರುವ ಸ್ಥಳ ಪತ್ತೆಹಚ್ಚಲು ಸಾಧ್ಯವಾಯಿತು.
ಒಂದು ಘಟನೆಯಲ್ಲಿ ಮೃತಪಟ್ಟ ಮಾಲೀಕನ ಮೃತದೇಹವನ್ನು ಬಿಟ್ಟು ದೂರ ಸರಿಯದೆ ಶ್ವಾನ ನಿಷ್ಠೆ ಮೆರೆದಿದ್ದರೆ, ಮತ್ತೊಂದು ಘಟನೆಯಲ್ಲಿ ಸಂಕಷ್ಟದಲ್ಲಿದ್ದ ಮಾಲೀಕನನ್ನು ಪತ್ತೆಹಚ್ಚಲು ನಾಯಿ ನೆರವಾಗಿದೆ. ದೇಶಗಳು ಬೇರೆ, ಸನ್ನಿವೇಶಗಳು ಬೇರೆ; ಆದರೆ, ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಆತ್ಮೀಯ ಬಂಧ ಹಾಗೂ ನಿಷ್ಠೆಯನ್ನು ಈ ಎರಡೂ ಘಟನೆಗಳು ಮನಮುಟ್ಟುವಂತೆ ಬಿಂಬಿಸಿವೆ.


ನಿಮ್ಮ ಕಾಮೆಂಟ್ ಬರೆಯಿರಿ