ವೀಡಿಯೊಗಳು…| ಬೆಂಗಳೂರು : ಬನ್ನೇರುಘಟ್ಟದಲ್ಲಿ ಸಫಾರಿ ಬಸ್ಸಿನ ಕಿಟಕಿ ಮೇಲೆ ಹಾರಿ ಪರಚಿದ ಚಿರತೆ ; ಮಹಿಳೆಗೆ ಗಾಯ

ಬೆಂಗಳೂರು : ಬೆಂಗಳೂರು ನಗರದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ (Bannerghatta National Park) ಚಿರತೆ ಸಫಾರಿ ವೇಳೆ ಚಿರತೆಯೊಂದು ಸಫಾರಿ ಬಸ್ಸಿನ ಕಿಟಕಿಯ ಜಾಲರಿಯ ಮೂಲಕ ದಾಳಿ ಮಾಡಲು ಪ್ರಯತ್ನಿಸಿದ್ದು, ಘಟನೆಯಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸುಮಾರು 50 ವರ್ಷದ ಮಹಿಳೆ ವಹೀದಾ ಬಾನು ಎಂಬವರಿಗೆ ಗಾಯಗಳಾಗಿದ್ದು, ತಕ್ಷಣ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯು ಇಂದು, ಗುರುವಾರ ಮಧ್ಯಾಹ್ನ ಚಿರತೆ ಸಫಾರಿ ಪ್ರವಾಸದ ಸಂದರ್ಭದಲ್ಲಿ ನಡೆದಿದೆ.
ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದು, ಚಿರತೆಯು ಸಫಾರಿ ಬಸ್ಸಿನ ಮೇಲೆ ಹತ್ತಿ, ಕಿಟಕಿಯ ಮೂಲಕ ಕೈ ಹಾಕಿ ಮಹಿಳೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸುವುದು ವೀಡಿಯೊದಲ್ಲಿ ಕಂಡುಬಂದಿದೆ.

ಅಧಿಕಾರಿಗಳ ಪ್ರಕಾರ, ಉದ್ಯಾನವನದ ಸಫಾರಿ ಬಸ್‌ಗಳ ಕಿಟಕಿಗಳಿಗೆ ಮತ್ತು ತೆರೆದ ಭಾಗಗಳಿಗೆ ಪ್ರಾಣಿಗಳೊಂದಿಗೆ ಸಂದರ್ಶಕರು ನೇರ ಸಂಪರ್ಕಕ್ಕೆ ಬರುವುದನ್ನು ತಡೆಯಲು ಲೋಹದ ತಂತಿಯ ಜಾಲರಿ (ಮೆಶ್) ಅಳವಡಿಸಲಾಗಿದೆ. ಆದರೆ ಚೆನ್ನೈ ಮೂಲದ ಭಾನು ತನ್ನ ಪತಿ ಮತ್ತು ಮಗನೊಂದಿಗೆ ಸಫಾರಿ ವಾಹನದಲ್ಲಿ ತೆರೆದ ಸಣ್ಣ ಕಿಟಕಿಯಿಂದ ಹೊರಗೆ ನೋಡುತ್ತಿದ್ದಾಗ ಸಫಾರಿ ವಾಹನದ ಮೇಲೆ ಚಿರತೆ ಹಾರಿ, ತನ್ನ ಪಂಜವನ್ನು ತೂರಿ ಆಕೆಯ ಕೈಗೆ ದಾಳಿ ಮಾಡಿದೆ ಎನ್ನಲಾಗಿದೆ.

ಚಿರತೆ ಇದ್ದಕ್ಕಿದ್ದಂತೆ ಬಸ್‌ಗೆ ಹಾರಿತು, ಇದು ಪ್ರವಾಸಿಗರಲ್ಲಿ ಭಯವನ್ನುಂಟುಮಾಡಿತು. ಚಿರತೆ ಕಿಟಕಿಯ ಮೂಲಕ ವಾಹನವನ್ನು ಪ್ರವೇಶಿಸಲು ಪ್ರಯತ್ನಿಸಿತು, ಆದರೆ ಅದೃಷ್ಟವಶಾತ್, ಜಾಲರಿಯ ಕಿಟಕಿಗಳಿಂದಾಗಿ ಪ್ರವಾಸಿಗರು ಸುರಕ್ಷಿತವಾಗಿದ್ದರು. ಮಹಿಳೆಗೆ ಗೀರು ಗಾಯಗಳಾಗಿವೆ, ತಕ್ಷಣ ಪ್ರಥಮ ಚಿಕಿತ್ಸೆ ನೀಡಲಾಯಿತು. ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ (doing fine) ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ನಿಂದ ನಾಲ್ವರಿಗೆ ಟಿಕೆಟ್‌ ಘೋಷಣೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement