ಗುಜರಾತಿನ ಉನಾ ತಾಲ್ಲೂಕಿನಲ್ಲಿ ಬೇಟೆಯ ಹುಡುಕಾಟದಲ್ಲಿದ್ದ ಸಿಂಹವೊಂದು ಆಕಸ್ಮಿಕವಾಗಿ ತೆರೆದ ಕೃಷಿ ಬಾವಿಗೆ ಬಿದ್ದಿದ್ದು, ಅರಣ್ಯ ಇಲಾಖೆಯ ಸಕಾಲಿಕ ಕ್ರಮದಿಂದಾಗಿ ಅದು ಅಪಾಯದಿಂದ ಪಾರಾಗಿದೆ.
ನವಾಬಂದರ್ ಅರಣ್ಯ ಪ್ರದೇಶದ ಸಮೀಪವಿರುವ ಕೃಷಿ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ನೀರು ತುಂಬಿದ್ದ ತೆರೆದ ಬಾವಿಗೆ ಸಿಂಹವು ಆಕಸ್ಮಿಕವಾಗಿ ಬಿದ್ದಿತ್ತು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಜೀವದ ಹಂಗು ತೊರೆದು ಸುಮಾರು ಒಂದು ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿದರು.
ಈ ಸಾಹಸಮಯ ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ಗುಜರಾತ್ ಉಪ ಮುಖ್ಯಮಂತ್ರಿ ಹರ್ಷ ಸಂಘವಿ ಅವರು ತಮ್ಮ ‘X’ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಿಂಹದ ಜೀವ ಉಳಿಸಲು ಅಧಿಕಾರಿಗಳು ಅತ್ಯಂತ ವೇಗವಾಗಿ ಮತ್ತು ಸಂಘಟಿತವಾಗಿ ಕೆಲಸ ಮಾಡಿದರು. ಬಾವಿಯಲ್ಲಿದ್ದ ಸಿಂಹಕ್ಕೆ ಹಗ್ಗವನ್ನು ಕಟ್ಟಿ, ಮೇಲಿದ್ದ ಜನರು ಎಳೆದು ಅದನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ. ಕಾರ್ಯಾಚರಣೆಯ ವೇಳೆ ಸಿಂಹಕ್ಕೆ ಯಾವುದೇ ಗಾಯವಾಗದಂತೆ ಮತ್ತು ಸುತ್ತಮುತ್ತಲಿನ ಜನರಿಗೆ ಅಪಾಯವಾಗದಂತೆ ಎಚ್ಚರಿಕೆ ವಹಿಸಲಾಗಿತ್ತು.
ಬಾವಿಯಿಂದ ಮೇಲೆತ್ತಿದ ತಕ್ಷಣ, ಮುನ್ನೆಚ್ಚರಿಕಾ ಕ್ರಮವಾಗಿ ಸಿಂಹವನ್ನು ಪಂಜರದೊಳಗೆ ಇರಿಸಲಾಯಿತು. ಜನವಸತಿ ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಬಾರದು ಎಂಬ ಉದ್ದೇಶದಿಂದ ತಕ್ಷಣವೇ ಅದನ್ನು ಸ್ಥಳಾಂತರಿಸಲಾಯಿತು. ಸದ್ಯ ಸಿಂಹವು ಆರೋಗ್ಯವಾಗಿದ್ದು, ಅದನ್ನು ಹೆಚ್ಚಿನ ನಿಗಾ ಮತ್ತು ತಪಾಸಣೆಗಾಗಿ ಜಸಂಧರ್ ಪ್ರಾಣಿ ಸಂರಕ್ಷಣಾ ಕೇಂದ್ರಕ್ಕೆ (Jasandhar Animal Care Centre) ಕಳುಹಿಸಿಕೊಡಲಾಗಿದೆ. ಅರಣ್ಯ ಇಲಾಖೆಯ ಈ ಕೆಚ್ಚೆದೆಯ ಕಾರ್ಯಕ್ಕೆ ಮತ್ತು ಸಾರ್ವಜನಿಕರ ಸಹಕಾರಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ