ಅಹಮದಾಬಾದ್ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ತಮ್ಮ ಪಕ್ಷದ ನಾಯಕರ ವಿರುದ್ಧವೇ ಸ್ಫೋಟಕ ಹೇಳಿಕೆ ನೀಡಿದ್ದು ಪಕ್ಷದ ಕೆಲ ನಾಯಕರು ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಗತ್ಯಬಿದ್ದರೆ ಅಂತಹ 30-40 ಕಾಂಗ್ರೆಸ್ ನಾಯಕರನ್ನು ವಜಾ ಮಾಡಬಹುದು ಎಂದು ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ ಗುಜರಾತ್ ಪ್ರವಾಸದ ಎರಡನೇ ದಿನ ಈ ಹೇಳಿಕೆಗಳನ್ನು ನೀಡಿದ್ದಾರೆ. ಶನಿವಾರ ಅಹಮದಾಬಾದ್ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವ ಕಾರಣ ಕಾಂಗ್ರೆಸ್ ಚುನಾವಣೆಯಲ್ಲಿ ಸೋಲು ಕಾಣುತ್ತಿದೆ ಎಂದರು. ಕಾಂಗ್ರೆಸ್ನಲ್ಲಿ ಎರಡು ರೀತಿಯ ಕಾರ್ಯಕರ್ತರಿದ್ದು, ಜನರೊಂದಿಗೆ ಪ್ರಾಮಾಣಿಕವಾಗಿ ಹೋರಾಡುವವರು, ಅವರನ್ನು ಗೌರವಿಸುವವರು ಮತ್ತು ಹೃದಯದಲ್ಲಿ ಕಾಂಗ್ರೆಸ್ ಸಿದ್ಧಾಂತವನ್ನು ಹೊಂದಿರುವ ಒಂದು ವರ್ಗವಿದೆ. ಪಕ್ಷದಲ್ಲಿರುವ ಕೆಲವರು ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಅಗತ್ಯಬಿದ್ದರೆ 30-40 ನಾಯಕರನ್ನು ವಜಾ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಬಿಜೆಪಿಗಾಗಿ ರಹಸ್ಯವಾಗಿ ಕೆಲಸ ಮಾಡುತ್ತಿರುವ ತಮ್ಮ ಪಕ್ಷದ ಗುಜರಾತ್ ಘಟಕದ ಕೆಲ ನಾಯಕರು ಮತ್ತು ಕಾರ್ಯಕರ್ತರನ್ನು ಪತ್ತೆ ಮಾಡುವ ಅವಶ್ಯಕತೆಯಿದೆ ಎಂದು ಹೇಳಿದ ಅವರು ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿದರು.
ಪ್ರತಿಸ್ಪರ್ಧಿ ರಾಜಕೀಯ ಪಕ್ಷಕ್ಕಾಗಿ ಕೆಲಸ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾವು ಗುಜರಾತ್ ಜನರೊಂದಿಗೆ ಸಂಪರ್ಕ ಸಾಧಿಸಬೇಕಾದರೆ, ನಾವು ಎರಡು ಕೆಲಸಗಳನ್ನು ಮಾಡಬೇಕಾಗಿದೆ. ಈ ಎರಡು ಗುಂಪುಗಳನ್ನು ಪ್ರತ್ಯೇಕಿಸುವುದು ಮೊದಲ ಕಾರ್ಯವಾಗಿದೆ. ನಾವು 10, 15, 20, 30, 40 ಜನರನ್ನು ತೆಗೆದುಹಾಕಬೇಕಾಗಿದ್ದರೂ ಅದನ್ನು ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಕಳೆದ 30 ವರ್ಷಗಳ ಗುಜರಾತಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಕುರಿತು ಮಾತನಾಡಿದ ಗಾಂಧಿ, “ನಾವು ಇಲ್ಲಿ ಅಧಿಕಾರಕ್ಕೆ ಬಂದು ಸುಮಾರು 30 ವರ್ಷಗಳು ಕಳೆದಿವೆ, ನಾನು ಇಲ್ಲಿಗೆ ಬಂದಾಗಲೆಲ್ಲ 2007, 2012, 2017, 2022, 2027ರ ವಿಧಾನಸಭಾ ಚುನಾವಣೆಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ. ಆದರೆ ಚುನಾವಣೆಯ ಬಗ್ಗೆ ನಾವು ಪ್ರಶ್ನೆ ಮಾಡಬಾರದು. ನಾವು ನಮ್ಮ ಜವಾಬ್ದಾರಿಯನ್ನು ಪೂರೈಸುವವರೆಗೆ ನಮ್ಮನ್ನು ಅಧಿಕಾರಕ್ಕೆ ತರುವಂತೆ ನಾವು ಗುಜರಾತಿನ ಜನರನ್ನು ಕೇಳಬಾರದು. ನಾವು ಇದನ್ನು ಮಾಡಿದ ದಿನ, ಗುಜರಾತ್ನ ಜನರು ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಬೆಂಬಲವನ್ನು ನೀಡುತ್ತಾರೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಅವರು ಹೇಳಿದರು.
ತಮ್ಮ ಪಕ್ಷ ಮತ್ತು ಸ್ವತಃ ತಮ್ಮನ್ನೇ ಅವಲೋಕನ ಮಾಡಿಕೊಂಡ ರಾಹುಲ್ ಗಾಂಧಿ , “ಗುಜರಾತ್ ಜನ ಸಿಕ್ಕಿಹಾಕಿಕೊಂಡಿದ್ದಾಋೆ, ದಾರಿ ಕಾಣುತ್ತಿಲ್ಲ, ಗುಜರಾತ್ ಮುನ್ನಡೆಯಲು ಬಯಸಿದೆ, ನಾನು ಕಾಂಗ್ರೆಸ್ ಪಕ್ಷದವನಾಗಿದ್ದೇನೆ ಮತ್ತು ಗುಜರಾತಿನ ಕಾಂಗ್ರೆಸ್ ಪಕ್ಷಕ್ಕೆ ಅವರಿಗೆ ದಾರಿ ತೋರಿಸಲು ಸಾಧ್ಯವಾಗುತ್ತಿಲ್ಲ ಎಂದು ನಾನು ಹೇಳುತ್ತಿದ್ದೇನೆ ಮತ್ತು ನಾನು ನಾಚಿಕೆಯಿಂದ ಮಾತನಾಡುತ್ತಿಲ್ಲ, ನಾನು ಭಯದಿಂದ ಮಾತನಾಡುತ್ತಿಲ್ಲ, ನಮ್ಮಿಂದ, ನನ್ನಿಂದ, ನಮ್ಮ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಿಂದ, ಕಳೆದ 30 ವರ್ಷಗಳಿಂದ ಗುಜರಾತ್ನ ನಿರೀಕ್ಷೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಕಾಂಗ್ರೆಸ್ಸಿನ ಎಲ್ಲ ನಾಯಕರು ಜನರ ಮಧ್ಯೆ ಹೋಗಿ ಅವರ ಅಭಿಪ್ರಾಯ, ನಿರೀಕ್ಷೆಗಳನ್ನು ಆಲಿಸಬೇಕು. ಪಕ್ಷವು ಶೇ.5ರಷ್ಟು ಮತಗಳಿಸಿದರೂ ರಾಜ್ಯದಲ್ಲಿ ಪಕ್ಷಕ್ಕೆ ಸಾಕಷ್ಟು ಮುನ್ನಡೆ ಪಡೆಯಬಹುದು ಎಂದು ಹೇಳಿದರು.
2022ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 182 ಸ್ಥಾನಗಳಲ್ಲಿ ಕೇವಲ 17 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆದರೆ, ಐವರು ಶಾಸಕರು ರಾಜೀನಾಮೆ ನೀಡಿದ ಬಳಿಕ ಸದನದಲ್ಲಿ ಪಕ್ಷದ ಬಲ 12ಕ್ಕೆ ಕುಸಿದಿದೆ. ಗುಜರಾತಿನಲ್ಲಿ 1995 ರಿಂದ ಬಿಜೆಪಿ ಆಡಳಿತ ನಡೆಸುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ