ಅಹಮದಾಬಾದ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ INSAT-3DR ಹವಾಮಾನ ಉಪಗ್ರಹದ ಇತ್ತೀಚಿನ ಅವಲೋಕನಗಳು ಅರಬ್ಬಿ ಸಮುದ್ರದ ಮೇಲೆ ಭಾರಿ ಪ್ರಮಾಣದ ವಾಯು ಸುಳಿ (Atmospheric Vortex) ಸಕ್ರಿಯವಾಗಿರುವುದನ್ನು ಬಹಿರಂಗಪಡಿಸಿವೆ. ಅರಬ್ಬಿ ಸಮುದ್ರದ ಮೇಲೆ ಸಕ್ರಿಯವಾಗಿರುವ ಈ ವಾಯು ಸುಳಿಯು (ವೋರ್ಟೆಕ್ಸ್) ದಿಢೀರ್ ಭಾರೀ ಮಳೆಯ ಹಿಂದೆ ಪ್ರಮುಖ ಪಾತ್ರವಹಿಸುತ್ತಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಇದೇ ವಾಯು ಸುಳಿಯ ಪರಿಣಾಮವಾಗಿ ಪಶ್ಚಿಮ ಕರಾವಳಿಯ ಕೊಂಕಣ ಪ್ರದೇಶ ಹಾಗೂ ಗುಜರಾತ್ನ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು,ಅದರಲ್ಲಿಯೂ ಗುಜರಾತಿನಲ್ಲಿ ನಂಬಲಸಾಧ್ಯವಾದ ಮಳೆಗೆ ಕಾರಣವಾಗಿದೆ.
ಉಪಗ್ರಹದಿಂದ ಪಡೆದ ಉಷ್ಣ ಅತಿಗೆಂಪು (Thermal Infrared) ಚಿತ್ರಗಳಲ್ಲಿ ಈ ವಿಶಾಲ ಚಂಡಮಾರುತ ಮಾದರಿಯ ಪರಿಚಲನೆ (Cyclonic Circulation) ಈಶಾನ್ಯ ಅರಬ್ಬಿ ಸಮುದ್ರದಿಂದ ಗುಜರಾತ್ ವರೆಗೆ ವ್ಯಾಪಿಸಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಬಿಗಿಯಾಗಿ ಸುತ್ತಿಕೊಂಡಿರುವ ಮೋಡಗಳ ರಚನೆಯು ನಿರಂತರವಾಗಿ ಸಮುದ್ರದ ತೇವಾಂಶವನ್ನು ಭೂಭಾಗದೊಳಗೆ ಸಾಗಿಸುತ್ತಿರುವುದು ಕಂಡುಬಂದಿದೆ.
ಹೀಗಾಗಿ ಅರಬ್ಬಿ ಸಮುದ್ರವು ತೇವಾಂಶವನ್ನು ಸಾಗಿಸುವ ಒಂದು “ಮಾಯಿಶ್ಚರ್ ಕನ್ವೇಯರ್ ಬೆಲ್ಟ್” (virtual conveyor belt of moisture) ಆಗಿ ಕಾರ್ಯನಿರ್ವಹಿಸುತ್ತಿದ್ದು, ಅದರ ಪರಿಣಾಮವಾಗಿ ಭಾರತದ ಪಶ್ಚಿಮ ಕರಾವಳಿ ಹಾಗೂಸುತ್ತಮುತ್ತ, ಅದರಲ್ಲಿಯೂ ಗುಜರಾತಿನಾದ್ಯಂತ ನಿರಂತರ ಗುಡುಗು-ಮಿಂಚಿನೊಂದಿಗೆ ಧಾರಾಕಾರ ಮಳೆ ಸುರಿಯುತ್ತಿದೆ. ಈ ಅತಿವೃಷ್ಟಿಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಆಡಳಿತ ವ್ಯವಸ್ಥೆಗೂ ದೊಡ್ಡ ಸವಾಲು ಎದುರಾಗಿದೆ.
ಅಹಮದಾಬಾದ್ನಲ್ಲಿ ಶುಕ್ರವಾರ ಬೆಳಿಗ್ಗೆ 8:30ಕ್ಕೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ 294.6 ಮಿಲಿಮೀಟರ್ ಮಳೆ ದಾಖಲಾಗಿದೆ. ಇದು ಈ ಶತಮಾನದಲ್ಲಿ ಜುಲೈ ತಿಂಗಳಲ್ಲಿ ದಾಖಲಾಗಿರುವ ಅತಿ ಹೆಚ್ಚು ದೈನಂದಿನ ಮಳೆಯಾಗಿದ್ದು, ನಗರದ ಇತಿಹಾಸದಲ್ಲಿಯೇ ನಾಲ್ಕನೇ ಅತಿ ಹೆಚ್ಚು ದೈನಂದಿನ ಮಳೆಯಾಗಿದೆ.
ಅರಬ್ಬಿ ಸಮುದ್ರದ ವಾಯು ಸುಳಿ ((Atmospheric Vortex) ಹೇಗೆ ಕೆಲಸ ಮಾಡುತ್ತಿದೆ?
ಹವಾಮಾನ ತಜ್ಞರ ಪ್ರಕಾರ, ಈ ವಾಯು ಸುಳಿಯು ಒಂದು ಬೃಹತ್ ವಾತಾವರಣದ ಪಂಪ್ನಂತೆ ಕಾರ್ಯನಿರ್ವಹಿಸುತ್ತಿದೆ. ಇದು ಎಡವರ್ತುಲ (Counter-clockwise) ದಿಕ್ಕಿನಲ್ಲಿ ಗಾಳಿಯನ್ನು ಸೃಷ್ಟಿಸಿ, ಅರಬ್ಬಿ ಸಮುದ್ರದಿಂದ ಅಪಾರ ಪ್ರಮಾಣದ ಬೆಚ್ಚಗಿನ ಹಾಗೂ ತೇವಾಂಶಭರಿತ ಗಾಳಿಯನ್ನು ಎಳೆಯುತ್ತಿದೆ. ಇದರ ಜೊತೆಗೆ, ಈ ವಾಯು ಸುಳಿಯು ಪಶ್ಚಿಮ ದಿಕ್ಕಿನಿಂದ ಬೀಸುವ ಗಾಳಿಯ ವೇಗವನ್ನು ಹೆಚ್ಚಿಸಿ, ತೇವಾಂಶಭರಿತ ಗಾಳಿಯನ್ನು ಪಶ್ಚಿಮ ಭಾರತದ ಕರಾವಳಿ ಭಾಗದತ್ತ ವೇಗವಾಗಿ ತಳ್ಳುತ್ತಿದೆ.
ನಂತರ ಈ ತೇವಾಂಶಯುಕ್ತ ಗಾಳಿಯು ಎತ್ತರದ ಪಶ್ಚಿಮ ಘಟ್ಟಗಳನ್ನು ತಲುಪಿದಾಗ, ಪರ್ವತಗಳು ಅದನ್ನು ತಡೆದ ನಂತರ (ಒರೋಗ್ರಾಫಿಕ್ ಪರಿಣಾಮ) ಅದು ಮೇಲಕ್ಕೆ ಏರುತ್ತದೆ. ಹೀಗೆ ಮೇಲಕ್ಕೆ ಏರಿದ ಗಾಳಿಯು ವೇಗವಾಗಿ ತಂಪಾಗುವುದರಿಂದ ಅದರಲ್ಲಿರುವ ನೀರಿನ ಅಂಶವು ದಟ್ಟ ಮಳೆಮೋಡಗಳಾಗಿ ಪರಿವರ್ತನೆಯಾಗುತ್ತದೆ. ಇದರ ಪರಿಣಾಮವಾಗಿ ಗುಡುಗು-ಮಿಂಚಿನೊಂದಿಗೆ ಧಾರಾಕಾರ ಮಳೆಯಾಗುತ್ತದೆ ಎಂದು ಹವಾಮಾನ ತಜ್ಞರು ವಿವರಿಸಿದ್ದಾರೆ.
ಉಪಗ್ರಹದ ಇನ್ಫ್ರಾರೆಡ್ ಚಿತ್ರಗಳಲ್ಲಿ ಉತ್ತರ ಮತ್ತು ಮಧ್ಯ ಗುಜರಾತ್ ಭಾಗದಲ್ಲಿ ಅತ್ಯಂತ ತಂಪಾದ ಮೋಡಗಳ ತುದಿಗಳು (Extremely Cold Cloud Tops) ಗೋಚರಿಸಿವೆ. ಇದು ವಾತಾವರಣದ ಮೇಲಿನ ಪದರಗಳವರೆಗೆ ವಿಸ್ತರಿಸಿರುವುದನ್ನು ಸೂಚಿಸುತ್ತದೆ. ಇಂತಹ ಮೋಡಗಳು ಸಾಮಾನ್ಯವಾಗಿ ತೀವ್ರ ಗುಡುಗು-ಮಿಂಚು ಹಾಗೂ ಧಾರಾಕಾರ ಮಳೆಗೆ ಕಾರಣವಾಗುತ್ತವೆ. ಇದೇ ಕಾರಣಕ್ಕೆ ಗುಜರಾತ್, ಮಹಾರಾಷ್ಟ್ರ ಹಾಗೂ ಕರ್ನಾಟಕದ ಕರಾವಳಿ ಹಾಗೂ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಈ ವಾಯು ಸುಳಿಯು (Atmospheric Vortex) ವಿಶೇಷವಾಗಿ ಗುಜರಾತ್ ರಾಜ್ಯದಲ್ಲಿ ಹೆಚ್ಚು ಕೇಂದ್ರಿತವಾಗಿರುವುದರಿಂದ ಅಲ್ಲಿ ವಿಪರೀತ ಮಳೆಗೆ ಕಾರಣವಾಗಿ ಜನಜೀವನವನ್ನೇ ತಲ್ಲಣಗೊಳಿಸಿದೆ.
‘ಟ್ರೈನಿಂಗ್’ ಗುಡುಗು ಮಳೆಯ ಪರಿಣಾಮ
ಈ ಹವಾಮಾನ ವ್ಯವಸ್ಥೆಯ ಮತ್ತೊಂದು ವಿಶೇಷ ಲಕ್ಷಣವೆಂದರೆ ಇದು ನಿಧಾನವಾಗಿ ಚಲಿಸುತ್ತಿದೆ. ಇದರಿಂದ ಮಳೆಯ ಮೋಡಗಳ ಪಟ್ಟಿಗಳು (Rain Bands) ಒಂದೇ ಪ್ರದೇಶದ ಮೇಲೆ ಮತ್ತೆ ಮತ್ತೆ ಸಾಗುತ್ತಿವೆ. ಹವಾಮಾನ ವಿಜ್ಞಾನದಲ್ಲಿ ಇದನ್ನು “ಟ್ರೈನಿಂಗ್ ಥಂಡರ್ಸ್ಟಾರ್ಮ್ಸ್” (“training thunderstorms”) ಎಂದು ಕರೆಯಲಾಗುತ್ತದೆ.
ಈ ವಿದ್ಯಮಾನದಿಂದ ಒಂದೇ ಪ್ರದೇಶದಲ್ಲಿ ಅಲ್ಪಾವಧಿಯಲ್ಲೇ ಅತಿಹೆಚ್ಚು ಮಳೆ ಸುರಿಯುವ ಸಾಧ್ಯತೆ ಹೆಚ್ಚಿದ್ದು, ದಿಢೀರ್ ಪ್ರವಾಹ (Flash Flood) ಉಂಟಾಗುತ್ತದೆ, ನಗರ ಪ್ರದೇಶಗಳು ಜಲಾವೃತವಾಗುತ್ತವೆ. ಮುಂದಿನ ಕೆಲ ದಿನಗಳ ವರೆಗೆ ಇದರ ತೀವ್ರತೆ ಇದ್ದರೂ ಇದು ಕ್ರಮೇಣ ಕಡಿಮೆಯಾಗುವ ನಿರೀಕ್ಷೆಯಿದೆ. ಸದ್ಯ ಪರಿಸ್ಥಿತಿಯ ಮೇಲೆ ಅಧಿಕಾರಿಗಳು ನಿರಂತರ ನಿಗಾ ವಹಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ