ಮೊಬೈಲ್‌, ಚಿನ್ನದ ಸರ ಖರೀದಿಸಲು 1 ತಿಂಗಳ ಮಗುವನ್ನೇ ಮಾರಿದ ದಂಪತಿ; ಪೊಲೀಸರು ಪತ್ತೆ ಮಾಡುವ ಮೊದಲು ನಾಲ್ವರಿಗೆ ಮಾರಾಟ !

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ದುಬಾರಿ ಮೊಬೈಲ್‌ ಫೋನ್‌ಗಳು ಮತ್ತು ಚಿನ್ನದ ಸರ ಖರೀದಿಸಿ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ದಂಪತಿ ತಮ್ಮ ಕೇವಲ ಒಂದು ತಿಂಗಳ ಗಂಡು ಮಗುವನ್ನು ₹1.20 ಲಕ್ಷಕ್ಕೆ ಮಾರಾಟ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದ್ದು, ಮಗುವನ್ನು 550 ಕಿಲೋಮೀಟರ್‌ ದೂರದ ಹೈದರಾಬಾದ್‌ನಲ್ಲಿ ರಕ್ಷಿಸಲಾಗಿದೆ.
ಸೆಪ್ಟೆಂಬರ್‌ 20ರಂದು ಮಗುವಿನ ತಾಯಿ ತಾನು ಹಲ್ಲೆಗೊಳಗಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ವೇಳೆ ದಂಪತಿ ತಮ್ಮ ಮಗುವನ್ನು ಮಾರಾಟ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಅಧಿಕಾರಿಗಳ ಪ್ರಕಾರ, ಮಗುವನ್ನು ಮಾರಾಟ ಮಾಡಲು ಯಾವುದೇ ಆರ್ಥಿಕ ಸಂಕಷ್ಟ ಕಾರಣವಾಗಿರಲಿಲ್ಲ. ಬದಲಾಗಿ ತಮ್ಮ ವೈಯಕ್ತಿಕ ಆಸೆಗಳನ್ನು ಈಡೇರಿಸಿಕೊಳ್ಳಲು ಅವರು ಈ ಕೃತ್ಯ ಎಸಗಿದ್ದರು.

ವಿವಾಹವಾಗದೆ ಸಹಜೀವನ ( live-in relationship) ನಡೆಸುತ್ತಿದ್ದ ದಂಪತಿ ಛತ್ರಪತಿ ಸಂಭಾಜಿನಗರದ ಮುಕುಂದವಾಡಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಅವರು ಮಗುವನ್ನು ಮೊದಲು ಸೀಮಾ ರೇಶ್ವಾಲ್‌ ಎಂಬ ಮಧ್ಯವರ್ತಿಗೆ ₹1.20 ಲಕ್ಷಕ್ಕೆ ಮಾರಾಟ ಮಾಡಿದ್ದರು. ಬಳಿಕ ಸೀಮಾ ರೇಶ್ವಾಲ್‌ ಮಗುವನ್ನು ಪಡೇಗಾಂವ್‌ನ ಸಂಗೀತಾ ಅವ್ಹಾದ್‌ ಎಂಬಾಕೆಗೆ ₹2.70 ಲಕ್ಷಕ್ಕೆ ಮಾರಾಟ ಮಾಡಿದ್ದಾಳೆ. ನಂತರ ಸಂಗೀತಾ ಅವ್ಹಾದ್‌ ಮಗುವನ್ನು ಸುರೇಶ ಗುಂಟುಕಾ ಎಂಬ ನಕಲಿ ವೈದ್ಯನಿಗೆ ₹3.50 ಲಕ್ಷಕ್ಕೆ ಮಾರಾಟ ಮಾಡಿದ್ದಾಳೆ. ಆ ಬಳಿಕ ಸುರೇಶ ಗುಂಟುಕಾ ಮಗುವನ್ನು ಹೈದರಾಬಾದ್‌ನಲ್ಲಿ ವಾಸಿಸುತ್ತಿರುವ ತನ್ನ ಸಂಬಂಧಿ ಉಮಾ ಖಟ್ಕಂಗೆ ಹಸ್ತಾಂತರಿಸಿದ್ದಾನೆ.
ಹೀಗೆ ಮಗುವು ನಾಲ್ಕು ಬಾರಿ ಒಬ್ಬರಿಂದ ಮತ್ತೊಬ್ಬರಿಗೆ ಮಾರಾಟ ಮಾಡಲ್ಪಟ್ಟಿದೆ. ಕೊನೆಗೆ ಹೈದರಾಬಾದ್‌ನಲ್ಲಿ ಪತ್ತೆಯಾಗಿದೆ. ಮಾಹಿತಿ ಪಡೆದ ಪೊಲೀಸರು ಹೈದರಾಬಾದ್‌ಗೆ ತೆರಳಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದು, ಮಹಾರಾಷ್ಟ್ರಕ್ಕೆ ಕರೆತರುವ ಕ್ರಮ ಕೈಗೊಂಡಿದ್ದಾರೆ.

ಪ್ರಮುಖ ಸುದ್ದಿ :-   ಪಹಲ್ಗಾಮ್ ದಾಳಿ ಪ್ರಕರಣದ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ ಹಾಶಿಮ್ ಮೂಸಾನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಪುಂಡಲೀಕನಗರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ವಿವೇಕ್‌ ಸೋನಾವನೆ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಗುವಿನ ಪೋಷಕರು, ಮಧ್ಯವರ್ತಿಗಳಾದ ಸೀಮಾ ರೇಶ್ವಾಲ್‌ ಮತ್ತು ಸಂಗೀತಾ ಅವ್ಹಾದ್‌, ನಕಲಿ ವೈದ್ಯ ಸುರೇಶ ಗುಂಟುಕಾ ಸೇರಿದಂತೆ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿದೆ.
ಮಗುವಿನ ಮಾರಾಟದಿಂದ ಬಂದ ಹಣದಲ್ಲಿ ಖರೀದಿಸಿದ್ದ ಎರಡು ದುಬಾರಿ ಮೊಬೈಲ್‌ ಫೋನ್‌ಗಳು ಮತ್ತು ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಜಾಲದ ಸದಸ್ಯರು ಈ ಹಿಂದೆ ಇತರ ಮಕ್ಕಳ ಮಾರಾಟದಲ್ಲೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement