ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಯಾರು..? ದಿ ರೆಸಿಸ್ಟೆನ್ಸ್ ಫ್ರಂಟ್ ಉಗ್ರ ಸಂಘಟನೆಯ ದಾಳಿಯನ್ನು ಯಾರು ಮುನ್ನಡೆಸಿದವರು…?

ನವದೆಹಲಿ : 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಇದಾಗಿದ್ದು, ಪಹಲ್ಗಾಮದ ಬೈಸರನ್ ಹುಲ್ಲುಗಾವಲಿನಲ್ಲಿ ಮಂಗಳವಾರ ಭಯೋತ್ಪಾದಕರ ಗುಂಪು ಪ್ರವಾಸಿಗರ ಮೇಲೆ ಗುಂಡು ಹಾರಿಸಿ ಕನಿಷ್ಠ 26 ಜನರನ್ನು ಸಾಯಿಸಿದೆ. ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್‌ಇಟಿ) ನ ಒಂದು ಭಾಗವಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಈ ಹತ್ಯಾಕಾಂಡದ ಹೊಣೆಯನ್ನು ಹೊತ್ತುಕೊಂಡಿದೆ. ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್-ಎ-ತೈಬಾ (ಎಲ್‌ಇಟಿ)ದ ಸೈಫುಲ್ಲಾ ಕಸೂರಿ ಆಗಿದ್ದರೆ, ಟಿಆರ್‌ಎಫ್ ಗುಂಪಿನ ನೇತೃತ್ವವನ್ನು ಆಸಿಫ್ ಫೌಜಿ ವಹಿಸಿದ್ದರು ಎಂದು ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370 ನೇ ವಿಧಿಯನ್ನು ಆಗಸ್ಟ್ 5, 2019 ರಂದು ರದ್ದುಪಡಿಸಲಾಯಿತು. ಕಾಶ್ಮೀರವನ್ನು ಭಾರತದ ಒಕ್ಕೂಟದೊಂದಿಗೆ ಸಂಪೂರ್ಣವಾಗಿ ಸಂಯೋಜಿಸಲು ಕೇಂದ್ರವು 370 ನೇ ವಿಧಿಯನ್ನು ರದ್ದುಗೊಳಿಸಿತು. ಅದರ ನಂತರ ಭಯೋತ್ಪಾದನಾ ಚಟುವಟಿಕೆ ಮತ್ತು ಕಲ್ಲು ತೂರಾಟದ ಘಟನೆಗಳು ಸಹ ಕಡಿಮೆಯಾದವು.

370 ನೇ ವಿಧಿಯನ್ನು ರದ್ದುಪಡಿಸಿದ ನಂತರ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ರಚನೆಯಾಯಿತು. ಪಾಕಿಸ್ತಾನದ ಬೆಂಬಲ ಮತ್ತು ಹಣಕಾಸು ನೆರವು ಪಡೆದ ಭಯೋತ್ಪಾದಕರು ದಶಕಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಕೃತ್ಯ ನಡೆಸುತ್ತಿದ್ದಾರೆ. ಎಲ್‌ಇಟಿ, ಜೈಶ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಗಳು ಮತ್ತು ಅದರ ಭಯೋತ್ಪಾದಕ ಮುಖ್ಯಸ್ಥರೆಲ್ಲರೂ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ.
ಕಾಶ್ಮೀರದಲ್ಲಿ ಕೊನೆಯ ದೊಡ್ಡ ಭಯೋತ್ಪಾದಕ ದಾಳಿ ಫೆಬ್ರವರಿ 2019 ರಲ್ಲಿ ನಡೆದಿದ್ದು, ಕೇಂದ್ರ ಅರೆಸೈನಿಕ ಪಡೆಗಳಾದ ಸಿಆರ್‌ಪಿಎಫ್‌ನ ಬೆಂಗಾವಲು ಪಡೆಯ ಮೇಲೆ ಆತ್ಮಾಹುತಿ ದಾಳಿ ನಡೆಸಲಾಯಿತು. ಇದರಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿ ಸಾವಿಗೀಡಾದರು. ಭಾರತವು ಪಾಕಿಸ್ತಾನದ ಬಾಲಕೋಟ್‌ ಭಯೋತ್ಪಾದಕ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿತು.
ಏಪ್ರಿಲ್ 22 ರಂದು ಮಂಗಳವಾರ ಹಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿಯನ್ನು ಪಾಕಿಸ್ತಾನಿ ಭಯೋತ್ಪಾದಕರು ಸೇರಿದಂತೆ ನಾಲ್ಕೈದು ಭಯೋತ್ಪಾದಕರು ನಡೆಸಿದ್ದಾರೆ ಎಂದು ವರದಿಯಾಗಿದೆ. ಪ್ರವಾಸಿಗರ ಮೇಲಿನ ದಾಳಿಗೆ ಕೆಲವೇ ದಿನಗಳ ಮೊದಲು ಅವರು ಕಣಿವೆಗೆ ನುಸುಳಿದ್ದಾರೆ ಎಂದು ಹೇಳಲಾಗುತ್ತದೆ.
ವರದಿಯಾದಂತೆ ಈ ದಾಳಿಯ ಮಾಸ್ಟರ್‌ಮೈಂಡ್ ಸೈಫುಲ್ಲಾ ಕಸೂರಿ, ದಾಳಿ ನಡೆಸಿದ ಭಯೋತ್ಪಾದಕ ಸಂಘಟನೆ ಟಿಆರ್‌ಎಫ್ ಮತ್ತು ಅದರ ತಂಡದ ನಾಯಕ ಆಸಿಫ್ ಫೌಜಿ ಎಂದು ಹೇಳಲಾಗಿದೆ.

ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್ ಸೈಫುಲ್ಲಾ ಕಸೂರಿ ಯಾರು?
ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ (ಎಲ್‌ಇಟಿ)ದ ಹಿರಿಯ ಕಮಾಂಡರ್ ಸೈಫುಲ್ಲಾ ಕಸೂರಿ ಅಲಿಯಾಸ್ ಖಾಲಿದ್, ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತದೆ. ಕಸೂರಿಯನ್ನು ಎಲ್‌ಇಟಿ ಸಂಸ್ಥಾಪಕ ಹಫೀಜ್ ಸಯೀದ್ ಆಪ್ತ ಸಹಾಯಕ ಎಂದೂ ಪರಿಗಣಿಸಲಾಗಿದೆ.
ಭಯೋತ್ಪಾದಕರು ಸಾಮೂಹಿಕ ಸಾವುನೋವುಗಳನ್ನು ಉಂಟುಮಾಡಲು ಸೂಕ್ತ ಕ್ಷಣಕ್ಕಾಗಿ ಕಾಯುತ್ತಿದ್ದರು ಎಂದು ಏಜೆನ್ಸಿಗಳು ಶಂಕಿಸಿವೆ.
ಸೈಫುಲ್ಲಾ ಕಸೂರಿ ಎಲ್‌ಇಟಿಯ ಪೇಶಾವರ ಪ್ರಧಾನ ಕಚೇರಿಯ ಮುಖ್ಯಸ್ಥ
ಸೈಫುಲ್ಲಾ ಕಸೂರಿ ಅಥವಾ ಖಾಲಿದ್ ನನ್ನು ಲಷ್ಕರ್-ಎ-ತೈಬಾ (ಎಲ್‌ಇಟಿ) ಮುಖ್ಯಸ್ಥ ಹಫೀಜ್ ಸಯೀದ್ ನ ಜಮಾತ್-ಉದ್-ದವಾ (ಜೆಯುಡಿ) ಯ ರಾಜಕೀಯ ಪಕ್ಷವಾದ ಮಿಲ್ಲಿ ಮುಸ್ಲಿಂ ಲೀಗ್ (ಎಂಎಂಎಲ್) ನ ಅಧ್ಯಕ್ಷರಾಗಿ ನಿಯುಕ್ತಿಗೊಳಿಸಲಾಯಿತು.
ಖಾಲಿದ್ ಪೇಶಾವರದ ಎಲ್‌ಇಟಿ ಪ್ರಧಾನ ಕಚೇರಿಯ ಮುಖ್ಯಸ್ಥನಾಗಿದ್ದು, ಜಮಾತ್-ಉದ್-ದವಾ (ಜೆಯುಡಿ) ಅಡಿಯಲ್ಲಿ ಮಧ್ಯ ಪಂಜಾಬ್ ಪ್ರಾಂತ್ಯದ ಸಮನ್ವಯ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದಾನೆ. ಏಪ್ರಿಲ್ 2016 ರಲ್ಲಿ ಕಾರ್ಯನಿರ್ವಾಹಕ ಆದೇಶ 13224 ರ ಅಡಿಯಲ್ಲಿ ಜೆಯುಡಿಯನ್ನು ಯುಎಸ್ ವಿದೇಶಾಂಗ ಇಲಾಖೆಯು ಎಲ್‌ಇಟಿಯ ಮತ್ತೊಂದು ಸಂಘಟನೆಯಾಗಿ ಗೊತ್ತುಪಡಿಸಿತು. ಅಲ್ಲದೆ, ಡಿಸೆಂಬರ್ 2008 ರಲ್ಲಿ, ಇದನ್ನು ವಿಶ್ವಸಂಸ್ಥೆಯ 1267/1988 ನಿರ್ಬಂಧಗಳ ಪಟ್ಟಿಗೆ ಎಲ್‌ಇಟಿಯ ಮತ್ತೊಂದು ಸಂಘಟನೆ ಎಂದು ಸೇರಿಸಲಾಯಿತು.

ಪ್ರಮುಖ ಸುದ್ದಿ :-   ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ವಿವಾದಾತ್ಮಕ ಹೇಳಿಕೆ : ಕ್ಷಮೆಯಾಚಿಸಿದ ಮಧ್ಯಪ್ರದೇಶದ ಸಚಿವ

ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಎಂದರೇನು?
ನಿಷೇಧಿತ ಎಲ್‌ಇಟಿಯ ಒಂದು ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಅನ್ನು, 2019 ರಲ್ಲಿ ಆರ್ಟಿಕಲ್ 370 ಅನ್ನು ರದ್ದುಪಡಿಸಿದ ನಂತರ ರಚಿಸಲಾಯಿತು. ಅಧಿಕಾರಿಗಳ ಪ್ರಕಾರ, ಇದು ಕಾಶ್ಮೀರದ ಭಯೋತ್ಪಾದನೆಗೆ ಹೆಚ್ಚು ಸ್ಥಳೀಯ ದೃಷ್ಟಿಕೋನ ನೀಡಲು ಈ ಹೆಸರನ್ನು ಆಯ್ಕೆ ಮಾಡಲಾಗಿದೆ. ಜಾಗತಿಕವಾಗಿ ಪ್ರತಿಧ್ವನಿಸುವ ರೀತಿಯಲ್ಲಿ ‘ರೆಸಿಸ್ಟೆನ್ಸ್’ ಅನ್ನು ಅದರ ಹೆಸರಿನಲ್ಲಿ ಸೇರಿಸಲಾಗಿದೆ ಎಂದು ಹೇಳಲಾಗುತ್ತದೆ.
ಕಣಿವೆ ಮೂಲದ ಪತ್ರಕರ್ತರಿಗೆ ಟಿಆರ್‌ಎಫ್ ಬೆದರಿಕೆಗಳನ್ನು ಹೊರಡಿಸಿತು, ಇದರ ನಂತರ ಗೃಹ ಸಚಿವಾಲಯ (ಎಂಎಚ್‌ಎ) ಟಿಆರ್‌ಎಫ್ ಅನ್ನು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ “ಭಯೋತ್ಪಾದಕ ಸಂಘಟನೆ” ಎಂದು ಘೋಷಿಸಿತು.
ಗೃಹ ಸಚಿವಾಲಯ (ಎಂಎಚ್‌ಎ) ಅಧಿಸೂಚನೆಯ ಪ್ರಕಾರ, ಟಿಆರ್‌ಎಫ್ ಆನ್‌ಲೈನ್ ವೇದಿಕೆಗಳ ಮೂಲಕ ಭಯೋತ್ಪಾದಕ ಚಟುವಟಿಕೆಗಳಿಗಾಗಿ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿತ್ತು, ಇದರಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಮತ್ತು ಪಾಕಿಸ್ತಾನದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳ ಕಳ್ಳಸಾಗಣೆ ಸೇರಿದಂತೆ ಹಲವು ರೀತಿಯಲ್ಲಿ ಇದು ಸಹಾಯ ಮಾಡಲಾಗುತ್ತಿತ್ತು.

2019 ರಲ್ಲಿ ಟಿಆರ್‌ಎಫ್ ಸ್ಥಾಪನೆಯಾದಾಗ, ಶೇಖ್ ಸಜ್ಜದ್ ಗುಲ್ ಭಯೋತ್ಪಾದಕ ಸಂಘಟನೆಯನ್ನು ಸರ್ವೋಚ್ಚ ಕಮಾಂಡರ್ ಆಗಿ ಮುನ್ನಡೆಸಿದ, ಆದರೆ ಬಸಿತ್ ಅಹ್ಮದ್ ದಾರ್ ಮುಖ್ಯ ಕಾರ್ಯಾಚರಣೆ ಕಮಾಂಡರ್ ಆಗಿ ನಿಯುಕ್ತಿಗೊಂಡ. ಟಿಆರ್‌ಎಫ್ ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಎಲ್‌ಇಟಿಯಂತಹ ಹಲವಾರು ಸಂಘಟನೆಗಳ ಭಯೋತ್ಪಾದಕರ ಸಂಯೋಜನೆಯಾಗಿತ್ತು.
ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರು ಮತ್ತು ಭದ್ರತಾ ಪಡೆಗಳ ಮೇಲೆ ದಿ ರೆಸಿಸ್ಟೆನ್ಸ್ ಫೋರ್ಸ್ (ಟಿಆರ್‌ಎಫ್) ಹೆಚ್ಚಿನ ದಾಳಿಗಳನ್ನು ನಡೆಸಿದೆ, ಇದರಲ್ಲಿ ಗ್ಯಾಂಡರ್‌ಬಾಲ್ ದಾಳಿಯೂ ಸೇರಿದೆ, ಇದರಲ್ಲಿ ಭಯೋತ್ಪಾದಕರು ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಂಗ ನಿರ್ಮಾಣ ಸ್ಥಳವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದಾಗ ಒಬ್ಬ ವೈದ್ಯ ಮತ್ತು ಆರು ಸ್ಥಳೀಯೇತರ ಕಾರ್ಮಿಕರು ಸಾವಿಗೀಡಾಗಿದ್ದರು.
ಜಮ್ಮು ಮತ್ತು ಕಾಶ್ಮೀರ ಪೊಲೀಸರ ಪ್ರಕಾರ, 2022 ರಲ್ಲಿ ಕಣಿವೆಯಲ್ಲಿ ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟ ಗರಿಷ್ಠ ಸಂಖ್ಯೆಯ ಉಗ್ರರು ಟಿಆರ್‌ಎಫ್‌ಗೆ ಸೇರಿದವರು, ಇದು ಟಿಆರ್‌ಎಫ್ ಭಯೋತ್ಪಾದನೆ ಸಂಘಟನೆಯು ಎಲ್‌ಇಟಿಯ ಅತ್ಯಂತ ಸಕ್ರಿಯ ಪ್ರಾಕ್ಸಿಗಳಲ್ಲಿ ಒಂದಾಗಿದೆ ಎಂದು ತೋರಿಸುತ್ತದೆ.

ರೆಸಿಸ್ಟೆನ್ಸ್ ಫ್ರಂಟ್‌ನ ಆಸಿಫ್ ಫೌಜಿ ಯಾರು?
ಮಂಗಳವಾರ ನಡೆದ ಹತ್ಯಾಕಾಂಡದ ಕೆಲವೇ ಗಂಟೆಗಳಲ್ಲಿ ಪಹಲ್ಗಾಮ್ ದಾಳಿಯ ಜವಾಬ್ದಾರಿಯನ್ನು ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ವಹಿಸಿಕೊಂಡಿದೆ.ಬುಧವಾರ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹತ್ಯಾಕಾಂಡದಲ್ಲಿ ಭಾಗಿಯಾಗಿರುವ ಮೂವರು ದಾಳಿಕೋರರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದರು. ಮೂವರು ಭಯೋತ್ಪಾದಕರನ್ನು ಆಸಿಫ್ ಫುಜಿ, ಸುಲೇಮಾನ್ ಶಾ ಮತ್ತು ಅಬು ತಲ್ಹಾ ಎಂದು ಗುರುತಿಸಲಾಗಿದೆ.
ಹಲವಾರು ವರದಿಗಳ ಪ್ರಕಾರ, ಆಸಿಫ್ ಫೌಜಿ ದಿ ರೆಸಿಸ್ಟೆನ್ಸ್ ಫ್ರಂಟ್ ಭಯೋತ್ಪಾದಕ ಗುಂಪಿನ ನಾಯಕನಾಗಿದ್ದ. ಕೆಲವು ವರದಿಗಳು ಅವನು ಸ್ಥಳೀಯ ಭಯೋತ್ಪಾದಕ ಎಂದು ಸೂಚಿಸಿದರೆ, ಇತರರು ಆತ ಪಾಕಿಸ್ತಾನ ಸೇನೆಯೊಂದಿಗೆ ಕೆಲಸ ಮಾಡಿದ್ದಾನೆ ಮತ್ತು ಆದ್ದರಿಂದ ಫೌಜಿ ಎಂದು ಹೆಸರಿಸಿಟ್ಟುಕೊಂಡಿದ್ದಾನೆ ಎಂದು ಹೇಳಿಕೊಂಡಿವೆ.
ಪಹಲ್ಗಾಮದ ಉಗ್ರರ ದಾಳಿಯ ವೇಳೆ ಇಬ್ಬರು ಭಯೋತ್ಪಾದಕರು ಪಾಷ್ತೋ ಭಾಷೆಯಲ್ಲಿ ಮಾತನಾಡಿದ್ದಾರೆ, ಇದು ಪಾಕಿಸ್ತಾನಿ ಮೂಲವನ್ನು ಸೂಚಿಸುತ್ತದೆ ಎಂದು ಹೇಳಿಕೊಂಡರೆ, ಅವರಲ್ಲಿ ಇಬ್ಬರು ಬಿಜ್‌ಬೆರಾ ಮತ್ತು ಟ್ರಾಲ್‌ ಸ್ಥಳೀಯರು ಎಂದು ವರದಿಯಾಗಿದೆ.
ಗುಪ್ತಚರ ಮೂಲಗಳ ಪ್ರಕಾರ, ದಾಳಿಕೋರರ ಡಿಜಿಟಲ್ ಹೆಜ್ಜೆಗುರುತುಗಳು ಪಾಕಿಸ್ತಾನದ ಮುಜಫರಾಬಾದ್ ಮತ್ತು ಕರಾಚಿಯಲ್ಲಿರುವ ಸುರಕ್ಷಿತ ಮನೆಗಳಲ್ಲಿ ಪತ್ತೆಯಾಗಿದ್ದು, ಗಡಿಯಾಚೆಗಿನ ಭಯೋತ್ಪಾದನಾ ಸಂಪರ್ಕದ ಪುರಾವೆಗಳನ್ನು ಇದು ಬಲಪಡಿಸುತ್ತದೆ.

ಪ್ರಮುಖ ಸುದ್ದಿ :-   ಸೇನೆ ಬರ್ಲಿ ನೋಡ್ಕೊಳ್ತೇನೆ..; ಎನ್‌ಕೌಂಟರಿನಲ್ಲಿ ಸಾಯುವ ಸ್ವಲ್ಪ ಮೊದಲು ತಾಯಿ ಜೊತೆ ಭಯೋತ್ಪಾದಕ ವೀಡಿಯೊ ಕರೆಯಲ್ಲಿ ಮಾತನಾಡಿದ ದೃಶ್ಯ ವೈರಲ್‌...

ಪಹಲ್‌ಗಮ್ ದಾಳಿಗೆ ಮುನ್ನ ಅಸಿಮ್ ಮುನಿರ್ ಮತ್ತು ಅಬು ಮುಸಾ ಭಾಷಣಗಳು
ಮಂಗಳವಾರದ ಹತ್ಯಾಕಾಂಡಕ್ಕೆ ಪಾಕಿಸ್ತಾನದ ಸಂಬಂಧವನ್ನು ಬಹಿರಂಗಪಡಿಸಬಹುದಾದ ಪಹಲ್ಗಾಮದ ದಾಳಿಗೆ ಕೆಲವು ದಿನಗಳ ಮೊದಲು ಪಾಕಿಸ್ತಾನದಲ್ಲಿ ನಡೆದ ಎರಡು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಎರಡು ಭಾಷಣಗಳನ್ನು ಮಾಡಲಾಗಿತ್ತು. ಏಪ್ರಿಲ್ 16 ರಂದು ಪಾಕಿಸ್ತಾನಿ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಒಂದು ಭಾಷಣವನ್ನು ಮಾಡಿದರು, ಅದರಲ್ಲಿ ಅವರು “ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ತೀವ್ರ ವ್ಯತ್ಯಾಸಗಳನ್ನು” ಎತ್ತಿ ತೋರಿಸಲು ಪಾಕಿಸ್ತಾನದ ರಚನೆಗೆ ಕಾರಣವಾದ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಒತ್ತಿ ಹೇಳಿದರು.
ಕೆಲವು ವರದಿಯ ಪ್ರಕಾರ, ಭಾರತೀಯ ಗುಪ್ತಚರ ಸಂಸ್ಥೆಗಳು ಪಾಕಿಸ್ತಾನಿ ಸೇನಾ ಮುಖ್ಯಸ್ಥ ಮುನೀರ್ ಅವರ ಹಿಂದೂ ವಿರೋಧಿ ಹೇಳಿಕೆಗಳು ಒಂದು ಲೆಕ್ಕಾಚಾರದ ನಡೆ ಮತ್ತು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳು ಮತ್ತೆ ಗುಂಪುಗೂಡಲು ಸಂಕೇತ ಎಂದು ನೋಡಿವೆ.

ಇನ್ನೊಂದು ಭಾಷಣವನ್ನು ಏಪ್ರಿಲ್ 18 ರಂದು ಪಾಕ್‌ ಆಕ್ರಮಿತ ಕಾಶ್ಮೀರದ ರಾವಲ್ಕೋಟ್‌ನಲ್ಲಿ ಹಲವಾರು ಭಯೋತ್ಪಾದಕ ನಾಯಕರು ಭಾಗವಹಿಸಿದ್ದ ರ್ಯಾಲಿಯಲ್ಲಿ ಎಲ್‌ಇಟಿ ಕಮಾಂಡರ್ ಅಬು ಮೂಸಾ ಕಾಶ್ಮೀರದಲ್ಲಿ ಜಿಹಾದ್ ಮತ್ತು ರಕ್ತಪಾತಕ್ಕೆ ಕರೆ ನೀಡಿದರು. ಭಾರತೀಯ ಪಡೆಗಳಿಂದ ಕೊಲ್ಲಲ್ಪಟ್ಟ ಇಬ್ಬರು ಎಲ್‌ಇಟಿ ಭಯೋತ್ಪಾದಕರ ಸ್ಮರಣಾರ್ಥ ಈ ರ್ಯಾಲಿಯನ್ನು ನಡೆಸಲಾಯಿತು. ಭಾರತೀಯ ಗುಪ್ತಚರ ಸಂಸ್ಥೆಗಳು ಪರಿಶೀಲಿಸಿದ ವೈರಲ್ ವೀಡಿಯೊದಲ್ಲಿ, 370 ನೇ ವಿಧಿಯನ್ನು ರದ್ದುಗೊಳಿಸಿದ್ದಕ್ಕೆ ಪ್ರತೀಕಾರವಾಗಿ ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗೆ ಮೂಸಾ ಕರೆ ನೀಡಿದರು. ಈ ರ್ಯಾಲಿಗೆ ಪಾಕಿಸ್ತಾನದ ಭದ್ರತಾ ಸಂಸ್ಥೆಯ ಬೆಂಬಲವಿದ್ದಂತೆ ತೋರುತ್ತಿದೆ.
26 ಪ್ರವಾಸಿಗರು ಸಾವಿಗೀಡಾದ ಪಹಲ್ಗಾಮ್ ದಾಳಿಯ ಒಂದು ದಿನದ ನಂತರ, ಇದರಲ್ಲಿ ಪಾಕಿಸ್ತಾನದ ಪಾತ್ರ ಹೊರಹೊಮ್ಮಿತು, ಟಿಆರ್‌ಎಫ್ ಭಯೋತ್ಪಾದಕ ದಾಳಿಯ ಹೊಣೆ ಹೊತ್ತುಕೊಂಡಿತು ಮತ್ತು ಎಲ್‌ಇಟಿ ಕಮಾಂಡರ್ ಸೈಫುಲ್ಲಾ ಕಸೂರಿ ಮಾಸ್ಟರ್ ಮೈಂಡ್ ಆಗಿದ್ದ. ಸ್ಥಳೀಯ ಭಯೋತ್ಪಾದಕನೊಬ್ಬ ಭಯೋತ್ಪಾದಕರ ಗುಂಪನ್ನು ಮುನ್ನಡೆಸಿದ್ದಾನೆ ಎಂಬ ವರದಿಗಳಿದ್ದರೂ, ನಿರ್ದಿಷ್ಟ ವಿವರಗಳು ನಂತರದಲ್ಲಿ ಗೊತ್ತಾಗಲಿವೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement