ಪಾಕಿಸ್ತಾನದ ಸಂಸತ್ತಿನ ಸೆನೆಟ್ (ಮೇಲ್ಮನೆ) ಅಧಿವೇಶನದಲ್ಲಿ ನಡೆದ ಒಂದು ವಿಚಿತ್ರ ಮತ್ತು ಹಾಸ್ಯಮಯ ಘಟನೆ ಸಂಸದರನ್ನು ದಿಗ್ಭ್ರಮೆಗೊಳಿಸಿದೆ. ಸಂಸತ್ತಿನ ಅಧಿವೇಶನದ ನೇರ ಪ್ರಸಾರ ನಡೆಯುತ್ತಿದ್ದಾಗಲೇ ಕತ್ತೆಯೊಂದು ಅನಿರೀಕ್ಷಿತವಾಗಿ ಸಂಸತ್ತಿನ ಅಧಿವೇಶನದ ಸ್ಥಳಕ್ಕೆ ನುಗ್ಗಿದ್ದು, ಕೆಲಕಾಲ ಗೊಂದಲಕ್ಕೆ ಕಾರಣವಾಯಿತು.
ಅಧಿವೇಶನವು ನಡೆಯುತ್ತಿದ್ದಾಗ, ಆ ಪ್ರಾಣಿಯು ಆಕಸ್ಮಿಕವಾಗಿ ಒಳಗೆ ಅಡ್ಡಾಡುತ್ತಾ ಬಂತು. ಇದನ್ನು ಕಂಡ ಕೂಡಲೇ ಸದಸ್ಯರ ಮಧ್ಯೆ ಕೆಲಕಾಲ ಗೊಂದಲ ಉಂಟಾಯಿತು ಮತ್ತು ಜೋರಾದ ನಗು ಸ್ಫೋಟಿಸಿತು.
ಕತ್ತೆಯನ್ನು ಹೊರಹಾಕಲು ಭದ್ರತಾ ಸಿಬ್ಬಂದಿ ತಕ್ಷಣ ಧಾವಿಸಿದರು. ಆದರೆ ಗಾಬರಿಯಿಂದ ಮತ್ತೂ ಒಳಬಂದ ಕತ್ತೆ ಹಲವಾರು ಸಂಸದರಿಗೆ ಡಿಕ್ಕಿ ಹೊಡೆಯಿತು. ಕೆಲವರು ತಾವು ಕುಳಿತ ಕುರ್ಚಿಯಿಂದ ಕೆಳಗೆ ಬಿದ್ದರು.
ಕತ್ತೆಯು ಸದನದೊಳಗೆ ಓಡಿ ಬಂದ ರಭಸಕ್ಕೆ ಅಲ್ಲಿದ್ದ ಸೀಟು, ಕಾಗದ ಪತ್ರ ಚಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿತು. ಕತ್ತೆಯ ದಾಳಿಗೆ ಅಲ್ಲಿದ್ದ ಪೀಠೋಪಕರಣಗಳಿಗೂ ಹಾನಿಯಾಇದೆ. ಕೊನೆಗೆ ಅದನ್ನು ಸಭಾಂಗಣದಿಂದ ಹೊರಗೆ ಕಳುಹಿಸಲಾಯಿತು. ಇಡೀ ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿದ್ದು, ತಕ್ಷಣವೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸೆನೆಟ್ ಅಧ್ಯಕ್ಷರಾದ ಯೂಸುಫ್ ರಜಾ ಗಿಲಾನಿ ಅವರು ಕೂಡ ಈ ಹಾಸ್ಯಭರಿತ ಸನ್ನಿವೇಶದಲ್ಲಿ ಭಾಗವಹಿಸಿ, “ನಮ್ಮ ಕಾನೂನುಗಳ ಬಗ್ಗೆ ಪ್ರಾಣಿಗಳು ಸಹ ಏನಾದರೂ ಹೇಳಬೇಕೆಂದು ಬಯಸುತ್ತಿವೆ” ಎಂದು ಚಟಾಕಿ ಹಾರಿಸಿದರು. ಅವರ ಈ ಕಾಮೆಂಟ್ಗೆ ಸಭಾಂಗಣದಲ್ಲಿ ಚಪ್ಪಾಳೆ ವ್ಯಕ್ತವಾಯಿತು.
ಈ ಘಟನೆಯ ನಂತರ, ಪ್ರಾಣಿಯು ಹೇಗೆ ಸಂಸತ್ತಿನ ಆವರಣವನ್ನು ಪ್ರವೇಶಿಸಿತು ಎಂಬುದನ್ನು ನಿರ್ಧರಿಸಲು ಭದ್ರತಾ ಅಧಿಕಾರಿಗಳು ಆಂತರಿಕ ವಿಚಾರಣೆ ಆರಂಭಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಭದ್ರತೆಯಿಲ್ಲದ ಸರ್ವೀಸ್ ಕಾರಿಡಾರ್ ಮೂಲಕ ಹತ್ತಿರದ ಲಾಯದಿಂದ ಕತ್ತೆಯು ಒಳಗೆ ನುಸುಳಿರಬಹುದು ಎನ್ನಲಾಗಿದೆ. ಈ ಲೋಪವು ಸಂಸತ್ ಭವನದ ಕಳಪೆ ಭದ್ರತಾ ವ್ಯವಸ್ಥೆಯ ಬಗ್ಗೆ ದೀರ್ಘಕಾಲದಿಂದ ಇದ್ದ ಕಳವಳಗಳನ್ನು ಮತ್ತೆ ಮುನ್ನಲೆಗೆ ತಂದಿದೆ.


ನಿಮ್ಮ ಕಾಮೆಂಟ್ ಬರೆಯಿರಿ