ಇರಾನ್-ಅಮೆರಿಕ ಯುದ್ಧ : ಇರಾನಿನ ಖಾರ್ಗ್ ದ್ವೀಪದ ಸೇನಾ ನೆಲೆಗಳು ಧ್ವಂಸ ; ಡೊನಾಲ್ಡ್ ಟ್ರಂಪ್ ಘೋಷಣೆ

ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಇರಾನ್‌ನ ತೈಲ ರಫ್ತಿನ ಪ್ರಮುಖ ಕೇಂದ್ರವಾದ ಖಾರ್ಗ್ ದ್ವೀಪದ (Kharg Island) ಮೇಲಿರುವ ಎಲ್ಲಾ ಸೇನಾ ಗುರಿಗಳನ್ನು ಅಮೆರಿಕದ ಪಡೆಗಳು “ಸಂಪೂರ್ಣವಾಗಿ ಧ್ವಂಸಗೊಳಿಸಿವೆ” ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಘೋಷಿಸಿದ್ದಾರೆ.
ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಮಧ್ಯಪ್ರಾಚ್ಯದ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ಬಾಂಬ್ ದಾಳಿಯನ್ನು ನಡೆಸಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ತೈಲ ಮೂಲಸೌಕರ್ಯಕ್ಕೆ ವಿನಾಯಿತಿ:
ಮಾನವೀಯತೆಯ ದೃಷ್ಟಿಯಿಂದ ದ್ವೀಪದಲ್ಲಿರುವ ತೈಲ ಸಂಸ್ಕರಣಾ ಕೇಂದ್ರಗಳು ಮತ್ತು ಮೂಲಸೌಕರ್ಯಗಳಿಗೆ ಹಾನಿ ಮಾಡಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಆದರೆ, ಇರಾನ್ ಏನಾದರೂ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸಿದರೆ ಈ ನಿರ್ಧಾರವನ್ನು ಬದಲಿಸುವುದಾಗಿ ಅವರು ಎಚ್ಚರಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಟ್ರಂಪ್, “ಇರಾನ್‌ನ ರಕ್ಷಣಾ ವ್ಯವಸ್ಥೆಗೆ ನಮ್ಮ ದಾಳಿಯನ್ನು ತಡೆಯುವ ಶಕ್ತಿಯಿಲ್ಲ. ನಾವು ಏನನ್ನು ಬೇಕಾದರೂ ನಾಶಪಡಿಸಬಹುದು” ಎಂದು ಗುಡುಗಿದ್ದಾರೆ.

ತೆಹ್ರಾನ್‌ನಲ್ಲಿ ಭಾರಿ ಸ್ಫೋಟ
ಇದೇ ಸಮಯದಲ್ಲಿ, ಇರಾನ್ ರಾಜಧಾನಿ ತೆಹ್ರಾನ್‌ನ ಕೇಂದ್ರ ಚೌಕದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಪ್ಯಾಲೆಸ್ಟೀನ್ ಪರವಾಗಿ ಆಯೋಜಿಸಲಾಗಿದ್ದ ಬೃಹತ್ ರ‍್ಯಾಲಿಯನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ ಎನ್ನಲಾಗಿದ್ದು, ಇಸ್ರೇಲ್ ಈ ಬಗ್ಗೆ ಮೊದಲೇ ಎಚ್ಚರಿಕೆ ನೀಡಿತ್ತು. ಸ್ಫೋಟದ ತೀವ್ರತೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಅಮೆರಿಕದ ಸೈನಿಕರ ನಿಯೋಜನೆ
ಕಳೆದ ಎರಡು ವಾರಗಳಿಂದ ನಡೆಯುತ್ತಿರುವ ಈ ಯುದ್ಧದಲ್ಲಿ ಅಮೆರಿಕ ಈಗ ಹೆಚ್ಚುವರಿಯಾಗಿ 2,500 ಮರೀನ್ ಸೈನಿಕರನ್ನು ಮತ್ತು ಯುದ್ಧನೌಕೆಗಳನ್ನು ಮಧ್ಯಪ್ರಾಚ್ಯಕ್ಕೆ ರವಾನಿಸಿದೆ. ಇಸ್ರೇಲ್ ಮತ್ತು ಅಮೆರಿಕದ ಜಂಟಿ ಕಾರ್ಯಾಚರಣೆಯಿಂದಾಗಿ ಇರಾನ್‌ನಲ್ಲಿ ಇದುವರೆಗೆ ಸುಮಾರು 1,200ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಖಾರ್ಗ್ ದ್ವೀಪದ ಮಹತ್ವ:
ಪರ್ಷಿಯನ್ ಗಲ್ಫ್‌ನಲ್ಲಿರುವ ಈ ದ್ವೀಪವು ಇರಾನ್‌ನ ಶೇ. 90ರಷ್ಟು ಕಚ್ಚಾ ತೈಲ ರಫ್ತನ್ನು ನಿರ್ವಹಿಸುತ್ತದೆ. ಇದು ಇರಾನ್ ಆರ್ಥಿಕತೆಯ ಬೆನ್ನೆಲುಬಾಗಿದೆ.
ಈ ಯುದ್ಧದಿಂದ ಜಾಗತಿಕವಾಗಿ ಪೆಟ್ರೋಲ್ ಮತ್ತು ಗ್ಯಾಸ್ ಬೆಲೆ ಏರಿಕೆಯಾಗುವ ಭೀತಿ ಎದುರಾಗಿದ್ದು, ಭಾರತದ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆಯಿದೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement