ವಡೋದರ : ಗುಜರಾತಿನ ವಡೋದರದ ಹರಣಿ ಸರೋವರದಲ್ಲಿ ಗುರುವಾರ ದೋಣಿ ಮುಳುಗಿ 14 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸೇರಿದಂತೆ ಕನಿಷ್ಠ 16 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅಧಿಕಾರಿಗಳ ಪ್ರಕಾರ, ಘಟನೆ ನಡೆದಾಗ ದೋಣಿಯಲ್ಲಿ 23 ಮಕ್ಕಳು ಮತ್ತು ನಾಲ್ವರು ಶಿಕ್ಷಕರು ಇದ್ದರು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ರಕ್ಷಣಾ ತಂಡವು ಕೆರೆಯಿಂದ ಐದು ಮಕ್ಕಳನ್ನು ರಕ್ಷಿಸಿದೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ರಾಜ್ಯ ಗೃಹ ಸಚಿವ ಹರ್ಷ ಸಂಘವಿ ಅವರು ಸರೋವರದಲ್ಲಿ ಶೋಧ ಕಾರ್ಯಾಚರಣೆಯನ್ನು ಪರಿಶೀಲಿಸಲು ಸ್ಥಳಕ್ಕೆ ಆಗಮಿಸಿದರು.
ಮೂಲಗಳ ಪ್ರಕಾರ ಬೋಟಿಗೆ 14 ಜನರ ಸಾಮರ್ಥ್ಯ ಮಾತ್ರ ಇತ್ತು. ಆದರೆ ದೋಣಿಯಲ್ಲಿ 27 ಜನರಿದ್ದರು. ಮೃತಪಟ್ಟ ಇಬ್ಬರು ಶಿಕ್ಷಕರಲ್ಲಿ ಒಬ್ಬರು ದೋಣಿಯಲ್ಲಿ ಇರಲಿಲ್ಲ. ಮಕ್ಕಳ ಮೃತ ದೇಹಗಳನ್ನು ನೋಡಿದ ಶಿಕ್ಷಕ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ರಕ್ಷಿಸಲ್ಪಟ್ಟ ಮಕ್ಕಳನ್ನು ತಕ್ಷಣವೇ ಸಯಾಜಿ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ವೈದ್ಯರು ತಕ್ಷಣ ಚಿಕಿತ್ಸೆ ಆರಂಭಿಸಿದ್ದು, ಕೆಲ ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ ಎಂದು ಸ್ಥಳೀಯ ಮೂಲಗಳು ಹೇಳಿವೆ.
ಐವರು ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304, 308 ಮತ್ತು 337 ರ ಅಡಿಯಲ್ಲಿ ಹರ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಮುಖ ಆರೋಪಿ ಸೇರಿದಂತೆ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಧಾನಿಯವರಿಂದ ಸಂತಾಪ, ಸಂತ್ರಸ್ತರಿಗೆ ಪರಿಹಾರ ಘೋಷಣೆ..
“ವಡೋದರದ ಹರಣಿ ಸರೋವರದಲ್ಲಿ ದೋಣಿ ಮುಳುಗಿ ಜೀವಹಾನಿಯಿಂದ ನೊಂದಿದ್ದೇನೆ. ಈ ದುಃಖದ ಘಳಿಗೆಯಲ್ಲಿ ನನ್ನ ಆಲೋಚನೆಗಳು ದುಃಖತಪ್ತ ಕುಟುಂಬಗಳೊಂದಿಗೆ ಇವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದೆ. ಪಿಎಂಎನ್‌ಆರ್‌ಎಫ್‌ನಿಂದ 2 ಲಕ್ಷ ರೂ.ಗಳ ಪರಿಹಾರವನ್ನು ಪ್ರತಿ ಮೃತರ ಮುಂದಿನ ಸಂಬಂಧಿಕರಿಗೆ ನೀಡಲಾಗುತ್ತದೆ. ಗಾಯಾಳುಗಳಿಗೆ ರೂ. 50,000 ನೀಡಲಾಗುವುದು ಎಂದು ಪಿಎಂಒ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಗುಜರಾತ್ ಸಿಎಂ ಕೂಡ ಆರ್ಥಿಕ ನೆರವು ಘೋಷಣೆ
ಇದಕ್ಕೂ ಮೊದಲು, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಎಕ್ಸ್‌ನಲ್ಲಿ ದುರಂತ ಘಟನೆಯ ಬಗ್ಗೆ ಸಂತಾಪ ಸೂಚಿಸಿದರು. ಅವರು ಸಂತ್ರಸ್ತರ ಕುಟುಂಬಗಳಿಗೆ ಪರಿಹಾರವನ್ನು ಘೋಷಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ