ತಿರುಮಲ ತಿರುಪತಿ ಬಾಲಾಜಿ ದೇವಾಲಯದ ಆಡಳಿತ ಮಂಡಳಿಯಾದ ‘ತಿರುಮಲ ತಿರುಪತಿ ದೇವಸ್ಥಾನಂ’ (ಟಿಟಿಡಿ) ಯ ಉಪ ಕಾರ್ಯನಿರ್ವಾಹಕ ಅಧಿಕಾರಿ (ಡೆಪ್ಯುಟಿ ಇಒ) ಮೆಂಡು ಲೋಕನಾಥಂ ಅವರನ್ನು ಆಂಧ್ರಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಗುರುವಾರ ಬಂಧಿಸಿದೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ (ಅಕ್ರಮ ಆಸ್ತಿ) ಪ್ರಕರಣದಲ್ಲಿ ಎಸಿಬಿ ನಡೆಸಿದ ದಾಳಿಯ ವೇಳೆ ಅಂದಾಜು 5 ಕೋಟಿ ರೂಪಾಯಿ ಮೌಲ್ಯದ ಲೆಕ್ಕಕ್ಕೆ ಸಿಗದ ಆಸ್ತಿಪಾಸ್ತಿಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ.ಕಳೆದ ಎರಡು ದಿನಗಳಿಂದ ಲೋಕನಾಥಂ ಅವರ ನಿವಾಸದ ಮೇಲೆ ದಾಳಿ ನಡೆಸಿ ತನಿಖೆ ನಡೆಸಿದ್ದ ಎಸಿಬಿ ಅಧಿಕಾರಿಗಳು, ಬಳಿಕ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗಾಗಿ ಎಸಿಬಿ ಕಚೇರಿಗೆ ಕರೆದೊಯ್ದಿದ್ದಾರೆ. ಇದರೊಂದಿಗೆ ಅವರ ಸಂಬಂಧಿಕರ ಮನೆಗಳ ಮೇಲೆಯೂ ದಾಳಿ ನಡೆಸಲಾಗಿದ್ದು, ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಇತರ ಮಾಹಿತಿಗಳನ್ನು ಪರಿಶೀಲಿಸಲಾಗಿದೆ.
ಈ ಸುದೀರ್ಘ ದಾಳಿಯ ವೇಳೆ ಎಸಿಬಿ ಅಧಿಕಾರಿಗಳು ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ ಆಭರಣಗಳು, ನಗದು ಹಣ ಹಾಗೂ ಇತರೆ ಮೌಲ್ಯಯುತ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ ಸುಮಾರಾಗಿ 5 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಜೊತೆಗೆ, ಲೋಕನಾಥಂ ಅವರಿಗೆ ಸೇರಿದವೆನ್ನಲಾದ ಪ್ರಮುಖ ಆಸ್ತಿಪತ್ರಗಳು ಹಾಗೂ ಮಾಹಿತಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ತಿರುಪತಿ ಲಡ್ಡು ವಿವಾದದ ಲಿಂಕ್:
ಬುಧವಾರ ತಡರಾತ್ರಿ ಎಸಿಬಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಕೆಲವು ಟಿಟಿಡಿ ನೌಕರರು ಅಕ್ರಮ ಆಸ್ತಿ ಹೊಂದಿರುವ ಕುರಿತು ಕೇಂದ್ರೀಯ ತನಿಖಾ ದಳ (ಸಿಬಿಐ) ಹಂಚಿಕೊಂಡಿದ್ದ ಮಾಹಿತಿಯನ್ನಾಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ತಿರುಪತಿ ಲಡ್ಡು ಪ್ರಸಾದದ ತಯಾರಿಕೆಯಲ್ಲಿ ಬಳಸಲಾದ ಪದಾರ್ಥಗಳ ಕಲಬೆರಕೆ ಆರೋಪದ ತನಿಖೆಯನ್ನು ಇತ್ತೀಚೆಗಷ್ಟೇ ಪೂರ್ಣಗೊಳಿಸಿದ್ದ ಸಿಬಿಐ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿತ್ತು. ಆ ತನಿಖೆಯ ಸಂದರ್ಭದಲ್ಲಿ ಸಿಕ್ಕ ಪ್ರಮುಖ ಮಾಹಿತಿಗಳನ್ನು ಸಿಬಿಐ, ಆಂಧ್ರಪ್ರದೇಶ ಎಸಿಬಿಗೆ ಹಸ್ತಾಂತರಿಸಿತ್ತು.
ಈ ಮಾಹಿತಿಯ ಆಧಾರದ ಮೇಲೆ ಎಸಿಬಿ, 2026ರ ಏಪ್ರಿಲ್ 22ರಂದು ಟಿಟಿಡಿ ಮಾಜಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಅವರ ವೈಯಕ್ತಿಕ ಸಹಾಯಕ ಕೆ. ಚಿನ್ನ ಅಪ್ಪಣ್ಣ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು.
ನಂತರದ ಸುದೀರ್ಘ ವಿಚಾರಣೆ ಮತ್ತು ಸಾಕ್ಷ್ಯಾಧಾರಗಳ ಸಂಗ್ರಹಣೆಯ ಬಳಿಕ, ಎಸಿಬಿಯು ಲೋಕನಾಥಂ ವಿರುದ್ಧ ‘ಭ್ರಷ್ಟಾಚಾರ ತಡೆ ಕಾಯ್ದೆ, 1988’ರ (2018ರ ತಿದ್ದುಪಡಿ) ಸೆಕ್ಷನ್ 13(2) ಮತ್ತು ಸೆಕ್ಷನ್ 13(1)(b) ಅಡಿಯಲ್ಲಿ ಪ್ರತ್ಯೇಕ ಪ್ರಕರಣ (Crime No. 06/RCA-TCT/2026) ದಾಖಲಿಸಿತು.
ತನಿಖೆಯ ಭಾಗವಾಗಿ ಎಸಿಬಿ ತಂಡಗಳು ಬುಧವಾರ ಮುಂಜಾನೆ ನಾಲ್ಕು ವಿಭಿನ್ನ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದವು. ಈ ವೇಳೆ ಆಸ್ತಿ ನೋಂದಣಿ ಪತ್ರಗಳು ಸೇರಿದಂತೆ ಹಲವು ಮಹತ್ವದ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಯಿತು.
ಲೋಕನಾಥಂಗೆ ಸೇರಿದ ಆಸ್ತಿ ವಿವರಗಳು:
ದಾಳಿಯ ವೇಳೆ ಪತ್ತೆಯಾದ ದಾಖಲೆಗಳ ಪ್ರಕಾರ, ಲೋಕನಾಥಂ ಅವರು ತಮ್ಮ ಹಾಗೂ ಕುಟುಂಬದವರ ಹೆಸರಿನಲ್ಲಿ ಹಲವಾರು ಆಸ್ತಿಗಳನ್ನು ಖರೀದಿಸಿರುವುದು ಕಂಡುಬಂದಿದೆ:
ತಿರುಪತಿಯ ಪಿಕೆ ಲೇಔಟ್ನಲ್ಲಿ ಪತ್ನಿಯ ಹೆಸರಿನಲ್ಲಿರುವ ಒಂದು ಮನೆ, ತಿರುಪತಿಯ ಗೊಲ್ಲವಾನಿಗುಂಟ ವಸತಿ ಪ್ರದೇಶದಲ್ಲಿ ಪತ್ನಿಯ ಹೆಸರಿನಲ್ಲಿರುವ ಕಟ್ಟಡ ಸಹಿತ ಎರಡು ನಿವೇಶನಗಳು, ತಿರುಪತಿ ಜಿಲ್ಲೆಯ ವಡಮಾಲಪೇಟ ಮಂಡಲದ ಪದಿರೆಡು ಅರಣ್ಯಂ ಗ್ರಾಮದಲ್ಲಿರುವ ಒಂದು ಮನೆ ನಿವೇಶನ., ತಿರುಪತಿ ಅರ್ಬನ್ನ ಶ್ರೀನಿವಾಸ ನಗರ ವಸತಿ ಪ್ರದೇಶದಲ್ಲಿ ಮಗನ ಹೆಸರಿನಲ್ಲಿರುವ ಒಂದು ಮನೆ ನಿವೇಶನ, ಅಧಿಕಾರಿ ಮತ್ತು ಅವರ ಮಗನ ಹೆಸರಿನಲ್ಲಿರುವ ನಾಲ್ಕು ನಿಗದಿತ ಠೇವಣಿಗಳು (FDs) ಹಾಗೂಅಧಿಕಾರಿಯ ಭಾವಮೈದನ ಮನೆಯಲ್ಲಿ ನಡೆಸಿದ ಶೋಧದ ವೇಳೆ ಅವರ ಪತ್ನಿ ಮತ್ತು ಇತರರ ಜಂಟಿ ಹೆಸರಿನಲ್ಲಿದ್ದ 31.98 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ದಾಖಲೆಯೂ ಸಿಕ್ಕಿದೆ.
ಒಟ್ಟಾರೆಯಾಗಿ ಈ ದಾಳಿಯಲ್ಲಿ ಎಸಿಬಿ 2 ಕೆಜಿ ಚಿನ್ನ, 12.5 ಲಕ್ಷ ರೂಪಾಯಿ ನಗದು ಮತ್ತು 6.5 ಕೆಜಿ ಬೆಳ್ಳಿಯನ್ನು ಜಪ್ತಿ ಮಾಡಿದೆ. ಪ್ರಸ್ತುತ ಗುರುತಿಸಲಾದ ಆಸ್ತಿಯ ಒಟ್ಟು ಮೌಲ್ಯ ಸುಮಾರು 5 ಕೋಟಿ ರೂಪಾಯಿಗಳಷ್ಟಿದ್ದು, ಇನ್ನು ಹೆಚ್ಚಿನ ಶೋಧ ಹಾಗೂ ತನಿಖೆ ಮುಂದುವರಿದಿದೆ ಎಂದು ಎಸಿಬಿ ತಿಳಿಸಿದೆ.
ಟಿಟಿಡಿಯಲ್ಲಿ ದೀರ್ಘಕಾಲದ ಸೇವೆ:
ಲೋಕನಾಥಂ ಅವರು ಹಲವು ದಶಕಗಳಿಂದ ಟಿಟಿಡಿ ಸಂಸ್ಥೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. 1989ರ ಫೆಬ್ರವರಿ 1ರಂದು ಅನುಕಂಪದ ಆಧಾರದ ಮೇಲೆ ಕಿರಿಯ ಸಹಾಯಕರಾಗಿ (Junior Assistant) ಸೇವೆಗೆ ಸೇರಿದ್ದ ಇವರು, ನಂತರ ಹಿರಿಯ ಸಹಾಯಕ, ಸೂಪರಿಂಟೆಂಡೆಂಟ್ ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮುಂಬಡ್ತಿ ಪಡೆದು, ಅಂತಿಮವಾಗಿ ತಿರುಮಲ ಟಿಟಿಡಿಯಲ್ಲಿ ‘ಉಪ ಕಾರ್ಯನಿರ್ವಾಹಕ ಅಧಿಕಾರಿ’ (Dy.EO) ಹುದ್ದೆಗೆ ಏರಿದ್ದರು.
ಪ್ರಸ್ತುತ ಎಸಿಬಿ ಅಧಿಕಾರಿಗಳು ಲೋಕನಾಥಂ ಅವರ ಅಕ್ರಮ ಆಸ್ತಿ ಸಂಪಾದನೆಯ ಕುರಿತು ತನಿಖೆಯನ್ನು ತೀವ್ರಗೊಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ