“ಸಚಿವನಾದ ನಂತ್ರ ನನ್ನ ಆದಾಯ ನಿಂತುಹೋಗಿದೆ” : ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಮುಂದಾದ ನಟ ಸುರೇಶ ಗೋಪಿ…!

ಕಣ್ಣೂರು : ಕೇಂದ್ರ ಸಚಿವ ಸುರೇಶ ಗೋಪಿ ಮತ್ತೆ ನಟನಾ ವೃತ್ತಿಗೆ ಮರಳುವ ಬಯಕೆ ವ್ಯಕ್ತಪಡಿಸಿದ್ದಾರೆ. ತಮ್ಮ ಸಿನಿಮಾ ವೃತ್ತಿಯನ್ನು ಮುಂದುವರಿಸಲು ಬಯಸುವುದಾಗಿ ಅವರು ತಿಳಿಸಿದ್ದಾರೆ.
ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತ್ರಿಶೂರು ಲೋಕಸಭಾ ಸಂಸದ ಹಾಗೂ ನಟರೂ ಆಗಿರುವ ಕೇಂದ್ರ ಸಚಿವ ಸುರೇಶ ಗೋಪಿ, ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರದಿಂದ ತಮ್ಮ ಆದಾಯ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. “ನನಗೆ ನಿಜವಾಗಿಯೂ ನಟನೆ ಮುಂದುವರಿಸಲು ಇಷ್ಟವಿದೆ. ನಾನು ಹೆಚ್ಚು ಸಂಪಾದಿಸಬೇಕಾಗಿದೆ; ಈಗ (ಮಂತ್ರಿಯಾದ ಮೇಲೆ) ನನ್ನ ಆದಾಯ ಸಂಪೂರ್ಣವಾಗಿ ನಿಂತಿದೆ ಎಂದು ಅವರು ತಿಳಿಸಿದರು.
ಗೋಪಿ ಅವರು ಪಕ್ಷದ ಕಿರಿಯ ಸದಸ್ಯ ಎಂದು ಹೇಳಿಕೊಂಡಿದ್ದಲ್ಲದೆ, ತಮ್ಮ ಸ್ಥಾನಕ್ಕೆ ರಾಜ್ಯಸಭಾ ಸಂಸದ ಸಿ. ಸದಾನಂದನ್ ಮಾಸ್ಟರ್ ಅವರನ್ನು ಕೇಂದ್ರ ಸಚಿವರನ್ನಾಗಿ ನೇಮಿಸುವಂತೆ ಅವರು ಸಲಹೆ ನೀಡಿದರು.
“ನಾನು ಎಂದಿಗೂ ಮಂತ್ರಿಯಾಗಲು ಪ್ರಾರ್ಥಿಸಿರಲಿಲ್ಲ. ಚುನಾವಣೆಗೆ ಒಂದು ದಿನ ಮೊದಲು, ನಾನು ಮಂತ್ರಿಯಾಗಲು ಇಷ್ಟಪಡುವುದಿಲ್ಲ, ನನ್ನ ಸಿನಿಮಾ ವೃತ್ತಿಯನ್ನು ಮುಂದುವರಿಸಲು ಬಯಸುತ್ತೇನೆ ಎಂದು ಮಾಧ್ಯಮದವರಿಗೆ ಹೇಳಿದ್ದೆ ಎಂದು ಅವರು ಹೇಳಿದ್ದಾರೆ

ಪ್ರಮುಖ ಸುದ್ದಿ :-   ಕಾಂಗ್ರೆಸ್ ತೊರೆದವರನ್ನು 'ಹೇಡಿಗಳು' ಎಂದು ಕರೆದ ರಾಹುಲ್ ಗಾಂಧಿ ; ಅವರೆಲ್ಲ ನಿಮ್ಮ ಸ್ನೇಹಿತರಾಗಿದ್ರು ಎಂದು ಕಾಲೆಳೆದ ಖರ್ಗೆ !

“ನಾನು 2008ರ ಅಕ್ಟೋಬರ್‌ನಲ್ಲಿ ಬಿಜೆಪಿ ಸದಸ್ಯತ್ವ ಪಡೆದಿದ್ದೆ… ಜನರಿಂದ ಆಯ್ಕೆಯಾದ ಕೇರಳದ ಮೊದಲ ಸಂಸದ ನಾನಾಗಿದ್ದರಿಂದ ಪಕ್ಷವು ನನ್ನನ್ನು ಸಚಿವರನ್ನಾಗಿ ಮಾಡಬೇಕೆಂದು ಭಾವಿಸಿತು” ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಹಾಗೂ ಪ್ರವಾಸೋದ್ಯಮ ಸಚಿವರಾದ ಸುರೇಶ ಗೋಪಿ ಹೇಳಿದರು.
ಈ ವರ್ಷದ ಆರಂಭದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಣ್ಣೂರಿನ ಬಿಜೆಪಿಯ ಹಿರಿಯ ನಾಯಕರಾದ ಸದಾನಂದನ್ ಮಾಸ್ಟರ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದರು.
ಇದೇ ವೇಳೆ, ಸುರೇಶ ಗೋಪಿ ಅವರು ಕಣ್ಣೂರಿನ ಕಾರ್ಯಕ್ರಮದಲ್ಲಿ ಮಾತನಾಡಿ, ತಮ್ಮ ಮಾತುಗಳನ್ನು ಹಲವರು ತಿರುಚಿ, ತಪ್ಪಾಗಿ ಅರ್ಥೈಸುವ ಅಭ್ಯಾಸ ಇಟ್ಟುಕೊಂಡಿದ್ದಾರೆ ಎಂದು ಹೇಳಿದರು. ತಮ್ಮ ಕ್ಷೇತ್ರದ ಜನರನ್ನು (ತ್ರಿಶೂರ್) ಉಲ್ಲೇಖಿಸಲು “ಪ್ರಜಾ” ಎಂಬ ಪದವನ್ನು ಬಳಸಿದ್ದಕ್ಕೆ ಟೀಕೆಗಳು ಬಂದಿದ್ದವು ಎಂದು ಅವರು ಗಮನಸೆಳೆದರು.
ಹಿಂದೆ ಮ್ಯಾನುವಲ್ ಸ್ಕ್ಯಾವೆಂಜರ್‌ಗಳು (ಕೈಯಿಂದ ಮಲವನ್ನು ತೆಗೆಯುವವರು) ಎಂದು ಕರೆಯಲ್ಪಡುತ್ತಿದ್ದ ನೈರ್ಮಲ್ಯ ಕೆಲಸಗಾರರನ್ನು ಈಗ ನೈರ್ಮಲ್ಯ ಇಂಜಿನಿಯರ್‌ಗಳು ಎಂದು ಕರೆಯುತ್ತಿರುವುದಕ್ಕೆ ಉದಾಹರಣೆ ನೀಡಿದ ಸಚಿವರು, ತಾವು ಬಳಸಿದ ‘ಪ್ರಜಾ’ ಮತ್ತು ‘ಪ್ರಜಾತಂತ್ರ’ ಪದಗಳನ್ನು ತಮ್ಮ ವಿರೋಧಿಗಳು ತಿರುಚಿದ್ದಾರೆ ಎಂದು ಹೇಳಿದರು. “ಪ್ರಜಾ ಎಂಬ ಪದ ಬಳಸುವುದರಲ್ಲಿ ತಪ್ಪೇನಿದೆ?” ಎಂದು ಪ್ರಶ್ನಿಸಿದರು.

ಪ್ರಮುಖ ಸುದ್ದಿ :-   2027ರ ಉತ್ತರ ಪ್ರದೇಶ ಚುನಾವಣೆ | ಯೋಗಿ-ಅಖಿಲೇಶ ಜನಪ್ರಿಯತೆ-ಕಾರ್ಯಕ್ಷಮತೆ ; ನ್ಯೂಸ್18 ಸಮೀಕ್ಷೆಯಲ್ಲಿ ಕಂಡುಬಂದಿದ್ದೇನು ?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement