ಸಂಗ್ರೂರ್: ವೇಗವಾಗಿ ಬಂದ ಕಾರೊಂದು ರಸ್ತೆ ಬದಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಗುಂಪಿನ ಮೇಲೆ ಹರಿದ ಪರಿಣಾಮ ಎಂಟು ಮಂದಿ ಮೃತಪಟ್ಟಿದ್ದು, 12 ಜನರು ಗಾಯಗೊಂಡ ಘಟನೆ ಪಂಜಾಬ್ನ ಸಂಗ್ರೂರ್ ಜಿಲ್ಲೆಯಲ್ಲಿ ನಡೆದಿದೆ. ಭಾನುವಾರ ಸಂಜೆ ಲೆಹ್ರಾಗಾಗಾ–ಜಖಲ್ ರಸ್ತೆಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲಿಶೇರ್ ಗ್ರಾಮದ ಸಮೀಪ ಈ ಘಟನೆ ನಡೆದಿದ್ದು, ವಿಕಸಿತ ಭಾರತ ಗ್ಯಾರಂಟಿ ರೋಜ್ಗಾರ್ ಮತ್ತು ಆಜೀವಿಕಾ ಮಿಷನ್ ಗ್ರಾಮೀಣ (VB-G RAM G) ಯೋಜನೆಯಡಿ ನೋಂದಾಯಿಸಿಕೊಂಡಿದ್ದ ಸುಮಾರು 25 ಕಾರ್ಮಿಕರು ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು. ಅವರಲ್ಲಿ ಹಲವರು ಮಹಿಳೆಯರಾಗಿದ್ದು, ಕೆಲವರು ರಸ್ತೆ ಬದಿಯಲ್ಲಿ ಕುಳಿತಿದ್ದರು.
ಜಖಲ್ ಕಡೆಯಿಂದ ವೇಗವಾಗಿ ಬಂದ ಕಾರು ಕಾರ್ಮಿಕರ ಗುಂಪಿನ ಮೇಲೆ ಹರಿದಿದೆ. ಅಪಘಾತದ ಬಳಿಕ ಕಾರನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪಾಲ್ವಿಂದರ್ ಚೀಮಾ ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ಸಂಜೆ ಸುಮಾರು 5:30ರ ಸುಮಾರಿಗೆ ಈ ಘಟನೆ ನಡೆದಿದೆ. ಕಾರು ಮೊದಲು ಮೋಟಾರ್ಸೈಕಲ್ಗೆ ಡಿಕ್ಕಿ ಹೊಡೆದಿದ್ದು, ಬಳಿಕ ರಸ್ತೆ ಬದಿಯಲ್ಲಿ ನೀರು ಕುಡಿಯಲು ವಿರಾಮ ತೆಗೆದುಕೊಂಡಿದ್ದ ಕಾರ್ಮಿಕರ ಗುಂಪಿನತ್ತ ನುಗ್ಗಿದೆ. ಇದರಿಂದಾಗಿ ಕಾರ್ಮಿಕರು ಕಾರಿನ ಅಡಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.
ಮೃತರನ್ನು ಪೊಲೀಸರು ಗುರುತಿಸಿದ್ದು, ಅಪಘಾತದಲ್ಲಿ ಮೃತಪಟ್ಟವರನ್ನು ಅಲಿಶೇರ್ ಮತ್ತು ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳಾದ ಕರಮ್ಜಿತ್ ಕೌರ್, ಜೀವನ್ ಸಿಂಗ್, ನಿಕ್ಕಿ, ಸರಬ್ಜೀತ್ ಕೌರ್, ರಂಜಿತ್ ಕೌರ್, ಕರಮ್ಜಿತ್, ರಾಣಿ ಕೌರ್ ಮತ್ತು ದೇಶ ರಾಜ್ ಎಂದು ಗುರುತಿಸಲಾಗಿದೆ.
ಅಪಘಾತಕ್ಕೆ ಕಾರಣವಾದ ಕಾರು ಪಟಿಯಾಲದ ಪರಗತ್ ಸಿಂಗ್ ಎಂಬುವವರ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ವರದಿಯಾಗಿದೆ.
ಗಾಯಗೊಂಡವರಿಗೆ ಜಿಲ್ಲಾಡಳಿತದ ವತಿಯಿಂದ ಅಗತ್ಯ ವೈದ್ಯಕೀಯ ನೆರವು ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪೂನಂದೀಪ್ ಕೌರ್ ತಿಳಿಸಿದ್ದಾರೆ.
ಕಾರ್ಮಿಕರ ಸಾವಿಗೆ ರಾಜಕೀಯ ನಾಯಕರ ಸಂತಾಪ
ಸ್ಥಳೀಯ ಶಾಸಕರೂ ಆಗಿರುವ ಪಂಜಾಬ್ ಸಚಿವ ಬರೀಂದರ್ ಗೋಯಲ್ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ