ಒಮಾನ್ ಕರಾವಳಿಯಲ್ಲಿ ಹಡಗಿನ ಮೇಲೆ ಅಮೆರಿಕ ಪಡೆಗಳ ದಾಳಿ: ನಾಪತ್ತೆಯಾಗಿದ್ದ ಮೂವರು ಭಾರತೀಯ ನಾವಿಕರು ಸಾವು

ನವದೆಹಲಿ: ಒಮಾನ್ ಕರಾವಳಿಯ ಬಳಿ ಅಮೆರಿಕ ಸೇನಾ ಪಡೆಗಳು ನಡೆಸಿದ ಭೀಕರ ದಾಳಿಗೆ ತುತ್ತಾಗಿದ್ದ ‘ಎಂಟಿ ಸೆಟ್ಟೆಬೆಲ್ಲೊ’ (MT Settebello) ತೈಲ ಟ್ಯಾಂಕರ್‌ನಲ್ಲಿದ್ದ, ಆರಂಭದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ವಿಷಯವನ್ನು ಕೇಂದ್ರ ಹಡಗು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್ ಅವರು ಅಧಿಕೃತವಾಗಿ ದೃಢಪಡಿಸಿದ್ದು, ಮೃತಪಟ್ಟ ಮೂವರು ನಾವಿಕರ ಮೃತದೇಹಗಳನ್ನು ಪತ್ತೆಹಚ್ಚಿ ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. ಇದೊಂದು ಅತ್ಯಂತ “ದುರದೃಷ್ಟಕರ ಮತ್ತು ದುಃಖದಾಯಕ” ಘಟನೆ ಎಂದು ಬಣ್ಣಿಸಿರುವ ಸಚಿವರು, ಮೃತರ ಕುಟುಂಬಸ್ಥರಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಗಾಲ್ಫ್ ಆಫ್ ಒಮಾನ್‌ನಲ್ಲಿ ಅಮೆರಿಕದ ಮಿಲಿಟರಿ ದಾಳಿಗೆ ಒಳಗಾದ ‘ಎಂಟಿ ಸೆಟ್ಟೆಬೆಲ್ಲೊ’ ತೈಲ ಟ್ಯಾಂಕರ್‌ನಲ್ಲಿ ಒಟ್ಟು 28 ಸಿಬ್ಬಂದಿ ಇದ್ದರು. ಇವರಲ್ಲಿ 24 ಮಂದಿ ಭಾರತೀಯರಾಗಿದ್ದರೆ, ಉಳಿದ ನಾಲ್ವರು ವಿದೇಶಿ ಪ್ರಜೆಗಳಾಗಿದ್ದರು (ಇಬ್ಬರು ಪಾಕಿಸ್ತಾನಿ, ಒಬ್ಬ ಉಕ್ರೇನ್ ಹಾಗೂ ಒಬ್ಬ ರಷ್ಯಾ ಪ್ರಜೆ). ಇರಾನ್‌ನಿಂದ ತೈಲವನ್ನು ಸಾಗಿಸುತ್ತಿದ್ದ ಈ ಹಡಗು ತಮ್ಮ ಸೇನೆಯ ಸೂಚನೆಗಳನ್ನು ಪಾಲಿಸಲು ನಿರಾಕರಿಸಿದ ಕಾರಣ ಅದರ ಮೇಲೆ ದಾಳಿ ನಡೆಸಿದ್ದಾಗಿ ಅಮೆರಿಕ ಸೇನೆ ಸಮರ್ಥಿಸಿಕೊಂಡಿದೆ. ದಾಳಿಯ ಬೆನ್ನಲ್ಲೇ 21 ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದರೂ, ಮೂವರು ನಾಪತ್ತೆಯಾಗಿದ್ದರು. ಆದರೆ ಈಗ ಆ ಮೂವರೂ ಸಾವಿಗೀಡಾಗಿರುವುದು ದೃಢಪಟ್ಟಿದೆ.
ಸಚಿವ ಸೋನೋವಾಲ್ಈ ಕುರಿತು ಎಕ್ಸ್ (ಟ್ವಿಟರ್) ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್,”ಇದು ನಮ್ಮ ಕಡಲ ಉದ್ಯಮದ ಕುಟುಂಬಕ್ಕೆ ಸಂಭವಿಸಿದ ಬಹುದೊಡ್ಡ ನಷ್ಟವಾಗಿದೆ. ಈ ಕಠಿಣ ಸಮಯದಲ್ಲಿ ಮೋದಿ ಸರ್ಕಾರವು ಮೃತರ ಕುಟುಂಬಗಳ ಪರವಾಗಿ ದೃಢವಾಗಿ ನಿಲ್ಲಲಿದ್ದು, ಅವರಿಗೆ ಅಗತ್ಯವಿರುವ ಎಲ್ಲಾ ನೆರವನ್ನು ನೀಡಲು ಬದ್ಧವಾಗಿದೆ. ರಕ್ಷಿಸಲ್ಪಟ್ಟ ಭಾರತೀಯ ಸಿಬ್ಬಂದಿಯನ್ನು ತಕ್ಷಣವೇ ಸ್ವದೇಶಕ್ಕೆ ಕರೆತರಲು ಮತ್ತು ಮೃತಪಟ್ಟ ನಾವಿಕರ ಪಾರ್ಥಿವ ಶರೀರಗಳನ್ನು ಅಂತಿಮ ಸಂಸ್ಕಾರಕ್ಕಾಗಿ ಶೀಘ್ರವಾಗಿ ಭಾರತಕ್ಕೆ ರವಾನಿಸಲು ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದ್ದೇನೆ” ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಹ್ಯಾರಿಯರ್ ಕಾರು, ನಕಲಿ ಎನ್‌ಎಸ್‌ಜಿ ಕಮಾಂಡೋಗಳು ! ಸೇನೆಯ ಬ್ರಿಗೇಡಿಯರ್ ಸೋಗಿನಲ್ಲಿ ಓಡಾಡುತ್ತಿದ್ದ ಯುವಕ ಬಲೆಗೆ ಬಿದ್ದಿದ್ದೇ ರೋಚಕ

ದಾಳಿಯನ್ನು ತೀವ್ರವಾಗಿ ಖಂಡಿಸಿದ ಭಾರತ
ಇರಾನ್ ತೈಲ ಸಾಗಣೆಯ ಮೇಲಿನ ದಿಗ್ಬಂಧನವನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಮೆರಿಕದ ಸೆಂಟ್ರಲ್ ಕಮಾಂಡ್ ಪಡೆಗಳು ಯುದ್ಧಸಾಮಗ್ರಿಗಳನ್ನು (Precision Munitions) ಬಳಸಿ ಈ ತೈಲ ಟ್ಯಾಂಕರ್ ಮೇಲೆ ದಾಳಿ ನಡೆಸಿವೆ. ಹಡಗು ಹಾರ್ಮುಜ್ ಜಲಸಂಧಿಯನ್ನು ದಾಟಲು ಯತ್ನಿಸುತ್ತಿದ್ದಾಗ ಅಮೆರಿಕ ನೌಕಾಪಡೆ ನಡೆಸಿದ ಈ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. “ಪ್ರಾದೇಶಿಕ ಸಂಘರ್ಷಗಳ ಹಿನ್ನೆಲೆಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ಇಂತಹ ದಾಳಿಗಳು ನಡೆಯುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಈ ಪ್ರಾಂತ್ಯದಲ್ಲಿ ಉದ್ವಿಗ್ನತೆಯನ್ನು ತಕ್ಷಣವೇ ಶಮನಗೊಳಿಸಬೇಕು ಎಂದು ನಾವು ಮತ್ತೊಮ್ಮೆ ಒತ್ತಾಯಿಸುತ್ತೇವೆ” ಎಂದು ಭಾರತೀಯ ವಿದೇಶಾಂಗ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಮತ್ತೊಂದೆಡೆ, ಅಮೆರಿಕದ ಸೆಂಟ್ರಲ್ ಕಮಾಂಡ್ ದಾಳಿಯನ್ನು ಒಪ್ಪಿಕೊಂಡಿದ್ದು, “ಅಮೆರಿಕ ಪಡೆಗಳ ಎಚ್ಚರಿಕೆ ಹಾಗೂ ಸೂಚನೆಗಳನ್ನು ಹಡಗಿನ ಸಿಬ್ಬಂದಿ ಪದೇ ಪದೇ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಯುದ್ಧವಿಮಾನದ ಮೂಲಕ ದಾಳಿ ನಡೆಸಿ ಹಡಗನ್ನು ನಿಷ್ಕ್ರಿಯಗೊಳಿಸಲಾಯಿತು” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದೆ.

ಅಮೆರಿಕ ರಾಯಭಾರಿಗೆ ಭಾರತದ ಸಮನ್ಸ್: ತೀವ್ರ ಪ್ರತಿಭಟನೆ
ಈ ಗಂಭೀರ ಘಟನೆಯನ್ನು ತೀವ್ರವಾಗಿ ಪರಿಗಣಿಸಿರುವ ಭಾರತ ಸರ್ಕಾರ, ನವದೆಹಲಿಯಲ್ಲಿರುವ ಅಮೆರಿಕದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು (Charge d’affaires) ವಿದೇಶಾಂಗ ಕಚೇರಿಗೆ ಕರೆಸ ಉನ್ನತ ಮಟ್ಟದ ತೀವ್ರ ಪ್ರತಿಭಟನೆಯನ್ನು (Strong Protest) ದಾಖಲಿಸಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿನ್ನೆಲೆ:ಜಾಗತಿಕ ಇಂಧನ ಪೂರೈಕೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯು ಫೆಬ್ರವರಿ ಕೊನೆಯಲ್ಲಿ ಆರಂಭವಾದ ಮಧ್ಯಪ್ರಾಚ್ಯ ಯುದ್ಧದ (ಯುಎಸ್-ಇಸ್ರೇಲ್ ಜಂಟಿ ದಾಳಿ) ಬಳಿಕ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇತ್ತೀಚಿನ ವಾರಗಳಲ್ಲಿ ಕದನ ವಿರಾಮದ ಮಾತುಕತೆಗಳು ನಡೆದಿದ್ದರೂ ಈ ಜಲಸಂಧಿಯನ್ನು ಮರುಮುಕ್ತಗೊಳಿಸಲು ಸಾಧ್ಯವಾಗಿಲ್ಲ. ಯುದ್ಧ ಆರಂಭವಾದಾಗಿನಿಂದ ಇರಾನ್ ಈ ಸಮುದ್ರ ಮಾರ್ಗವನ್ನು ಬಂದ್ ಮಾಡಿದ್ದರೆ, ಅಮೆರಿಕ ಕೂಡ ಏಪ್ರಿಲ್‌ನಿಂದ ತನ್ನದೇ ಆದ ಪರ್ಯಾಯ ದಿಗ್ಬಂಧನವನ್ನು ವಿಧಿಸಿ ಪೈಪೋಟಿ ನಡೆಸುತ್ತಿದೆ. ಈ ಸಂಘರ್ಷದ ನಡುವೆ ಈಗ ಮೂವರು ಭಾರತೀಯ ನಾವಿಕರು ಬಲಿಯಾಗಿದ್ದಾರೆ.

ಪ್ರಮುಖ ಸುದ್ದಿ :-   ಭೀಕರ ದುರಂತ : ಭಾರತೀಯ ವಾಯುಪಡೆಯ AN-32 ವಿಮಾನ ಪತನ ; ಐವರು ಸಿಬ್ಬಂದಿ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement