ವಿಧಾನಸಭೆ ಚುನಾವಣೆ : ಅಸ್ಸಾಂನಲ್ಲಿ 84.42%, ಕೇರಳದಲ್ಲಿ 75%, ಪುದುಚೇರಿಯಲ್ಲಿ 86.92%ರಷ್ಟು ಮತದಾನ

ನವದೆಹಲಿ : ಅಸ್ಸಾಂ, ಕೇರಳ ಮತ್ತು ಪುದುಚೇರಿ ವಿಧಾನಸಭೆ ಚುನಾವಣೆಯಲ್ಲಿ ಗುರುವಾರ (ಏಪ್ರಿಲ್ 9) ನಡೆದ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನವು ಬಿಗಿ ಭದ್ರತೆ ಹಾಗೂ ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕಣ್ಗಾವಲಿನಲ್ಲಿ ನಡೆದಿದೆ. ಮೂರೂ ರಾಜ್ಯಗಳ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮುಂಜಾನೆಯೇ ಮತ ಚಲಾಯಿಸಿದರು. ಪುದುಚೇರಿ ಮುಖ್ಯಮಂತ್ರಿ ಎನ್. ರಂಗಸ್ವಾಮಿ ಅವರು ಎಂದಿನಂತೆ ತಮ್ಮ ಬೈಕ್‌ನಲ್ಲಿ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದು ವಿಶೇಷವಾಗಿತ್ತು. ಮತಗಳ ಎಣಿಕೆ ಮೇ 4 ರಂದು ನಡೆಯಲಿದ್ದು, ಅಂದು ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಪ್ರಕಟವಾಗಲಿದೆ.
ಅಸ್ಸಾಂನ ಒಟ್ಟು 126 ಕ್ಷೇತ್ರಗಳಿಗೆ ಗುರುವಾರ (ಏಪ್ರಿಲ್ 9) ಮತದಾನ ನಡೆದಿದ್ದು,ಶೇ. 85.70ರಷ್ಟು (2021ರ ಚುನಾವಣೆಗಿಂತ ಹೆಚ್ಚು) ಮತದಾನವಾಗಿದೆ. 2021 ರ ಚುನಾವಣೆಯಲ್ಲಿ ಶೇ. 82.04 ರಷ್ಟು ಮತದಾನ ದಾಖಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಲ್ಗಾಂವ್‌ನಲ್ಲಿ ಅತಿ ಹೆಚ್ಚು (ಶೇ. 95.83) ಮತ್ತು ಅಮ್ರಿಯಲ್ಲಿ ಅತಿ ಕಡಿಮೆ (ಶೇ. 74.41) ಮತದಾನ ದಾಖಲಾಗಿದೆ.
ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮತ್ತು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟದ ನಡುವೆ ಇಲ್ಲಿ ನೇರ ಹಣಾಹಣಿ ಏರ್ಪಟ್ಟಿದೆ. ಬಿಜೆಪಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ಕಾಂಗ್ರೆಸ್ ಹತ್ತು ವರ್ಷಗಳ ನಂತರ ಅಧಿಕಾರಕ್ಕೆ ಮರಳಲು ಕಾಯುತ್ತಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

ಕೇರಳದಲ್ಲಿ 140 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶೇ. 78.25ರಷ್ಟು ಮತದಾನವಾಗಿದೆ. 2021 ರ ವಿಧಾನಸಭಾ ಚುನಾವಣೆಗಿಂತ ಸ್ವಲ್ಪ ಹೆಚ್ಚಾಗಿದೆ, ಆಡಳಿತಾರೂಢ ಎಲ್‌ಡಿಎಫ್‌ (LDF) ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದ್ದರೆ, ಯುಡಿಎಫ್‌ (UDF) ಕಮ್‌ಬ್ಯಾಕ್ ಮಾಡುವ ವಿಶ್ವಾಸದಲ್ಲಿದೆ. ಇತ್ತ ಬಿಜೆಪಿ ಕೂಡ ಈ ಬಾರಿ ಅಚ್ಚರಿಯ ಫಲಿತಾಂಶ ನೀಡುವ ನಿರೀಕ್ಷೆಯಲ್ಲಿದೆ.
ಕೇಂದ್ರಾಡಳಿತ ಪ್ರದೇಶ ಪುದುಚೇರಿಯ 30 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಯಿತು. ಆರಂಭಿಕ ಅಂದಾಜಿನ ಪ್ರಕಾರ, ಮತದಾನದ ಶೇಕಡಾವಾರು ಶೇಕಡಾ 89.87 ದಾಟಿದೆ.
ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಎನ್‌ಡಿಎ ತನ್ನ ಅಧಿಕಾರ ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ, ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು ಆಡಳಿತಾರೂಢ ಎಐಎನ್ಆರ್‌ಸಿ (AINRC) ಮೈತ್ರಿಕೂಟ ಮಣಿಸಿ ಅಧಿಕಾರಕ್ಕೆ ಏರುವ ನಿರೀಕ್ಷೆಯಲ್ಲಿದೆ.
ಮತದಾನದ ಅಂತಿಮ ಅಂಕಿಅಂಶಗಳು ಚುನಾವಣಾ ಆಯೋಗದ ಪ್ರಕಟಣೆಯ ನಂತರ ತಿಳಿಯಲಿದೆ. ಈಗ ಎಲ್ಲರ ಚಿತ್ತ ಮೇ 4ರ ಫಲಿತಾಂಶದತ್ತ ನೆಟ್ಟಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement