ಕೃತಕ ಬುದ್ಧಿಮತ್ತೆ (AI) ಹೊಸ ಮೈಲಿಗಲ್ಲುಗಳನ್ನು ತಲುಪುತ್ತಿರುವ ಬೆನ್ನಲ್ಲೇ, ಐಟಿ ಉದ್ಯೋಗಿಗಳ ಭವಿಷ್ಯದ ಕುರಿತು ಜೊಹೊ (Zoho) ಸಂಸ್ಥೆಯ ಸಹ-ಸ್ಥಾಪಕ ಶ್ರೀಧರ ವೆಂಬು ಅವರು ನೀಡಿದ ಹೇಳಿಕೆ ಆನ್ಲೈನ್ನಲ್ಲಿ ಮಹತ್ವದ ಚರ್ಚೆಗೆ ಕಾರಣವಾಗಿದೆ. ಪ್ರಮುಖವಾಗಿ ಕೋಡಿಂಗ್ ಬರೆಯುವವರು ತಮ್ಮ ವೃತ್ತಿಜೀವನದ ಬಗ್ಗೆ ಮರುಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಎಕ್ಸ್’ ನಲ್ಲಿ ಬಳಕೆದಾರರೊಬ್ಬರು ತಮಗೆ ಕೋಡಿಂಗ್ನ ಒಂದು ಸಾಲು ಕೂಡ ತಿಳಿಯದಿದ್ದರೂ, ಎಐ ಬಳಸಿ ‘ಭಗವದ್ಗೀತೆ’ ಆ್ಯಪ್ ಅಭಿವೃದ್ಧಿಪಡಿಸಿದ ಬಗ್ಗೆ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ವೆಂಬು, ತಾನೂ ಸೇರಿದಂತೆ ಕೋಡಿಂಗ್ ನಂಬಿ ಬದುಕುತ್ತಿರುವವರು ಪರ್ಯಾಯ ಜೀವನೋಪಾಯದ ಬಗ್ಗೆ ಯೋಚಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
“ಆ ಪೋಸ್ಟ್ನಲ್ಲಿರುವುದು ಭಗವದ್ಗೀತೆ ಆ್ಯಪ್. ಆಂಥ್ರೋಪಿಕ್ (Anthropic) ಸಂಸ್ಥೆಯು ತನ್ನ ಕ್ಲೋಡ್ ಎಐ (Claude AI) ಮೂಲಕ ಇಡೀ ‘ಸಿ ಕಂಪೈಲರ್’ (C compiler) ಅನ್ನೇ ಸಿದ್ಧಪಡಿಸಿದೆ. ಇದು ಅಷ್ಟು ಸುಲಭದ ಇಂಜಿನಿಯರಿಂಗ್ ಸಾಧನೆಯಲ್ಲ” ಎಂದು ವೇಂಬು ಬರೆದಿದ್ದಾರೆ. “ಈ ಹಂತದಲ್ಲಿ, ಕೋಡಿಂಗ್ ಬರೆಯುವುದರ ಮೇಲೆ ಜೀವನ ನಡೆಸುತ್ತಿರುವ ನಾವು ಪರ್ಯಾಯ ದಾರಿಗಳನ್ನು ಹುಡುಕುವುದು ಉತ್ತಮ. ಇದರಲ್ಲಿ ನಾನೂ ಸೇರಿದ್ದೇನೆ. ಇದನ್ನು ನಾನು ಭಯದಿಂದ ಹೇಳುತ್ತಿಲ್ಲ, ಬದಲಾಗಿ ಶಾಂತವಾಗಿ, ಪರಿಸ್ಥಿತಿಯನ್ನು ಒಪ್ಪಿಕೊಂಡು ಹೇಳುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಭವಿಷ್ಯದ ಆರ್ಥಿಕತೆ ಬಗ್ಗೆ ಜೆಮಿನಿ ಜೊತೆ ಚರ್ಚೆ
ಬದಲಾಗುತ್ತಿರುವ ಜಗತ್ತಿನಲ್ಲಿ ಎಐ ಕ್ರಾಂತಿಯು ಜಾಗತಿಕ ಆರ್ಥಿಕತೆಯನ್ನು ಹೇಗೆ ರೂಪಿಸಬಹುದು ಎಂಬುದರ ಕುರಿತು ವೇಂಬು ಅವರು ಗೂಗಲ್ನ ‘ಜೆಮಿನಿ’ ಚಾಟ್ಬಾಟ್ನೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಕಾರ್ಮಿಕರ ಅಗತ್ಯವಿಲ್ಲದ (post-labour economy) ಸಮಾಜವು ಹೇಗೆ ಅಭಿವೃದ್ಧಿಗೊಳ್ಳಬಹುದು ಎಂಬ ಬಗ್ಗೆ ಅವರು ಎಐ ಜೊತೆಗಿನ ಸಂವಾದದ ಬಗ್ಗೆ ಹಂಚಿಕೊಂಡಿದ್ದಾರೆ.
“ಅದೊಬ್ಬ ಅತ್ಯಂತ ಬುದ್ಧಿವಂತ ಆರ್ಥಿಕ ತತ್ವಜ್ಞಾನಿಯೊಂದಿಗೆ ಚರ್ಚೆ ನಡೆಸಿದಂತಿತ್ತು. ಅದರ ಕೆಲಸವನ್ನು ವಿಮರ್ಶಿಸುವಂತೆ ನಾನೇ ಅದಕ್ಕೆ ಕೇಳಿದೆ, ಅದು ಅದ್ಭುತವಾಗಿ ಪ್ರತಿಕ್ರಿಯಿಸಿತು” ಎಂದು ವೆಂಬು ಹೇಳಿದ್ದಾರೆ.
ಎರಡು ಸಾಧ್ಯತೆಗಳು
ತಂತ್ರಜ್ಞಾನದ ಮಾಲೀಕತ್ವ ಯಾರ ಬಳಿ ಇರುತ್ತದೆ ಎನ್ನುವುದರ ಮೇಲೆ ಭವಿಷ್ಯವು ಎರಡು ಹಾದಿಗಳಲ್ಲಿ ಸಾಗಬಹುದು ಎಂದು ಅವರು ವಿವರಿಸಿದ್ದಾರೆ.
ಆಶಾವಾದಿ ಹಾದಿ: ತಂತ್ರಜ್ಞಾನವು ಮಾನವ ಜೀವನದ ಅತೀ ಸಾಮಾನ್ಯ ಭಾಗವಾಗಲಿದೆ. ಇದರಿಂದ ಮಾನವರು ತಮ್ಮ ಕುಟುಂಬ, ಮಣ್ಣು, ನೀರು, ಪ್ರಕೃತಿ, ಕಲೆ, ಸಂಗೀತ, ಸಂಸ್ಕೃತಿ, ಕ್ರೀಡೆ, ಹಬ್ಬಗಳು ಮತ್ತು ನಂಬಿಕೆಗಳ ಮೇಲೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ.
ನಿರಾಶಾವಾದಿ ಹಾದಿ: ಇದು ‘ಕೇಂದ್ರೀಕೃತ ನಿಯಂತ್ರಣ’ಕ್ಕೆ (Centralised control) ದಾರಿ ಮಾಡಿಕೊಡಬಹುದು, ಇದು ಅಪಾಯಕಾರಿ ಎನಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆಗಳು
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. “ಕೋಡಿಂಗ್ ಏಜೆಂಟ್ಗಳು ಈಗ ಮಾನವ ಪ್ರೋಗ್ರಾಮರ್ಗಳಿಗಿಂತ ಹೆಚ್ಚು ಸಾಮರ್ಥ್ಯ ಹೊಂದಿವೆ. ಆದರೆ ಅವು ನೀಡುವ ಫಲಿತಾಂಶವನ್ನು ನಾವು ಯಾವಾಗ ಸ್ವೀಕರಿಸುತ್ತೇವೆ ಎಂಬುದು ಮುಖ್ಯ,” ಎಂದು ಒಬ್ಬರು ಹೇಳಿದ್ದಾರೆ. “ನಿಜ ಸರ್.. ಇದು ನಮಗೆ ಬೇರೆ ವಿಷಯಗಳತ್ತ ಗಮನಹರಿಸಲು ಸಮಯ ನೀಡುವುದಲ್ಲದೆ, ನನ್ನಂತಹವರಿಗೆ ಇದುವರೆಗೆ ಸಾಧ್ಯವಾಗದ ಕನಸುಗಳನ್ನು ನನಸು ಮಾಡಿಕೊಳ್ಳಲು ದಾರಿ ಮಾಡಿಕೊಡುತ್ತದೆ,” ಎಂದು ಮತ್ತೊಬ್ಬರು ಬರೆದಿದ್ದಾರೆ. ಮೂರನೇ ವ್ಯಕ್ತಿಯೊಬ್ಬರು, “ಅನ್ವೇಷಿಸಲು ಇಡೀ ಬ್ರಹ್ಮಾಂಡವೇ ಇದೆ. ಎಸ್ಎಎಎಸ್ (SaaS) ಅಂತ್ಯ ಎಂದರೆ ಮಾನವನ ಬುದ್ಧಿವಂತಿಕೆಯ ಅಂತ್ಯವಲ್ಲ,” ಎಂದಿದ್ದಾರೆ.
ನಾಲ್ಕನೇ ಬಳಕೆದಾರರೊಬ್ಬರು, “ಡೇಟಾ ಮತ್ತು ಕಂಪ್ಯೂಟ್ ಶಕ್ತಿಯೇ ಇಂದಿನ ಬಾಡಿಗೆಯಾಗಿರುವುದರಿಂದ ಕೇಂದ್ರೀಕೃತ ನಿಯಂತ್ರಣವೇ ಸಹಜ ಹಾದಿಯಾಗಿದೆ. ಈ ಮಾದರಿಗಳ ಮಾಲೀಕತ್ವವನ್ನು ವಿಕೇಂದ್ರೀಕರಣ ಮಾಡದ ಹೊರತು ಆಶಾವಾದಿ ದೃಷ್ಟಿಕೋನವು ಕೇವಲ ಐಷಾರಾಮಿ ಕನಸಾಗಿ ಉಳಿಯುತ್ತದೆ, ಎಂದು ಎಚ್ಚರಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ