ತಿರುವನಂತಪುರಂ ಮಹಾನಗರ ಪಾಲಿಕೆ ಮೇಯರ್ ಆಗಿ ಬಿಜೆಪಿಯ ವಿ.ವಿ. ರಾಜೇಶ ಆಯ್ಕೆ ; 45 ವರ್ಷಗಳ ಎಡರಂಗದ ಆಡಳಿತಕ್ಕೆ ತೆರೆ

ತಿರುವನಂತಪುರಂ: ಕೇರಳದ ರಾಜಧಾನಿಯಲ್ಲಿ ಬಿಜೆಪಿಯ ಪ್ರಮುಖ ಮುಖಗಳಲ್ಲಿ ಒಬ್ಬರಾದ ಹಿರಿಯ ನಾಯಕ ವಿ.ವಿ. ರಾಜೇಶ ಅವರು ಶುಕ್ರವಾರ ತಿರುವನಂತಪುರಂ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು.
ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯ ಸಾಧಿಸಿತ್ತು. ಒಟ್ಟು 101 ಸ್ಥಾನಗಳ ಪೈಕಿ 50 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಈ ಮೂಲಕ ಕಳೆದ 45 ವರ್ಷಗಳಿಂದ ಇಲ್ಲಿ ಅಡೆತಡೆಯಿಲ್ಲದೆ ಸಾಗಿದ್ದ ಸಿಪಿಐ(ಎಂ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗದ (LDF) ಆಡಳಿತಕ್ಕೆ ಅಂತ್ಯ ಹಾಡಿದೆ.
ತಿರುವನಂತಪುರಂ ಕಾರ್ಪೊರೇಷನ್ ಕಚೇರಿಯಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ರಾಜೇಶ 101 ಸದಸ್ಯರ ಕೌನ್ಸಿಲ್‌ನಲ್ಲಿ 51 ಮತಗಳನ್ನು ಪಡೆದು ಗೆದ್ದರು, ಪಕ್ಷೇತರ ಕೌನ್ಸಿಲರ್ ಬೆಂಬಲದೊಂದಿಗೆ ಗೆಲುವು ಸಾಧಿಸಿದರು. ಎಲ್‌ಡಿಎಫ್ ಅಭ್ಯರ್ಥಿ ಪಿ ಶಿವಾಜಿ 29 ಮತಗಳನ್ನು ಪಡೆದರೆ, ಯುಡಿಎಫ್ ಅಭ್ಯರ್ಥಿ ಕೆ ಎಸ್ ಶಬರಿನಾಥನ್ 19 ಮತಗಳನ್ನು ಪಡೆದರು. ಎರಡು ಮತಪತ್ರಗಳನ್ನು ಅಮಾನ್ಯವೆಂದು ಘೋಷಿಸಲಾಯಿತು ಮತ್ತು ಒಬ್ಬ ಕೌನ್ಸಿಲರ್ ಮತದಾನದಿಂದ ದೂರ ಉಳಿದರು. ವಿಝಿಂಜಂನ ಒಂದು ವಾರ್ಡ್‌ನಲ್ಲಿ ಮತದಾನ ನಡೆಸಲು ಸಾಧ್ಯವಾಗದ ಕಾರಣ 100 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಬಿಜೆಪಿ 50 ಸ್ಥಾನಗಳಲ್ಲಿ ಜಯಗಳಿಸಿತ್ತು.

ರಾಜೇಶ ಅವರ ರಾಜಕೀಯ ಹಾದಿ
ಸದ್ಯ ಬಿಜೆಪಿಯ ಕೇರಳ ರಾಜ್ಯ ಕಾರ್ಯದರ್ಶಿಯಾಗಿರುವ 50 ವರ್ಷದ ರಾಜೇಶ, 2020 ರಿಂದ ಕೌನ್ಸಿಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಬಿವಿಪಿ ಮೂಲಕ ಸಾರ್ವಜನಿಕ ಜೀವನಕ್ಕೆ ಬಂದ ಇವರು, ನಂತರ ಯುವ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿಭಾಯಿಸಿದ್ದರು. ಕಾನೂನು ಪದವೀಧರರಾದ ಇವರು ರಾಜಧಾನಿಯಲ್ಲಿ ಸರ್ಕಾರದ ವಿರುದ್ಧ ಹಲವು ಹೋರಾಟಗಳನ್ನು ಸಂಘಟಿಸುವ ಮೂಲಕ ಪಕ್ಷದ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ರಾಜೇಶ ಅವರು ಈ ಹಿಂದೆ ವಿಧಾನಸಭಾ ಚುನಾವಣೆಗಳಲ್ಲಿ ಸೋಲು ಅನುಭವಿಸಿದ್ದರೂ, ಬಿಜೆಪಿಯ ಮತ ಹಂಚಿಕೆಯನ್ನು ಗಣನೀಯವಾಗಿ ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದರು. ವಟ್ಟಿಯೂರ್‌ಕಾವು ಕ್ಷೇತ್ರದಲ್ಲಿ 2011ರಲ್ಲಿ ಕೇವಲ 13,400 ಮತಗಳನ್ನು ಪಡೆದಿದ್ದ ಇವರು, 2021ರ ವೇಳೆಗೆ ಅದನ್ನು 39,500ಕ್ಕೆ ಏರಿಸಿದ್ದರು.

ಪ್ರಮುಖ ಸುದ್ದಿ :-   ಕೇವಲ 23ನೇ ವಯಸ್ಸಿಗೆ 19 ಸರ್ಕಾರಿ ಪರೀಕ್ಷೆ ಪಾಸ್ ! ರಾಷ್ಟ್ರಪತಿಯಿಂದ 'ಅಟ್-ಹೋಮ್' ಗೌರವಕ್ಕೆ ಆಯ್ಕೆಯಾದ ಯುವತಿ

ಅಧಿಕಾರ ಹಿಡಿದ ಬಿಜೆಪಿ….
ಗುರುವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪಕ್ಷೇತರ ಕೌನ್ಸಿಲರ್ ರಾಧಾಕೃಷ್ಣನ್ ಅವರ ಬೆಂಬಲವನ್ನು ಬಿಜೆಪಿ ಖಚಿತಪಡಿಸಿಕೊಂಡಿತ್ತು. ಇದೇ ವೇಳೆ ಮೂರು ಬಾರಿ ಕೌನ್ಸಿಲರ್ ಆಗಿ ಆಯ್ಕೆಯಾಗಿರುವ ಆಶಾನಾಥ ಜಿ.ಎಸ್. ಅವರು ಉಪಮೇಯರ್ ಆಗಿ ಆಯ್ಕೆಯಾದರು.
ಮಾಜಿ ಡಿಜಿಪಿ ಮತ್ತು ಕೇರಳದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಆರ್. ಶ್ರೀಲೇಖಾ ಅವರು ಮೇಯರ್ ಪಟ್ಟ ಅಲಂಕರಿಸಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ತಳಮಟ್ಟದಿಂದ ಪಕ್ಷವನ್ನು ಕಟ್ಟಿದ ನಿಷ್ಠಾವಂತ ನಾಯಕನಿಗೆ ಆದ್ಯತೆ ನೀಡಲು ನಿರ್ಧರಿಸಿದ ಬಿಜೆಪಿ ಹೈಕಮಾಂಡ್, ರಾಜೇಶ ಅವರಿಗೆ ಮಣೆ ಹಾಕಿದೆ. ಈ ಮೂಲಕ ವಲಸೆ ಬಂದವರಿಗಿಂತ ದಶಕಗಳಿಂದ ಪಕ್ಷಕ್ಕಾಗಿ ದುಡಿದವರಿಗೆ ಪ್ರಾಮುಖ್ಯತೆ ನೀಡುತ್ತೇವೆ ಎಂಬ ಸಂದೇಶವನ್ನು ರವಾನಿಸಿದೆ.

ಅಭಿವೃದ್ಧಿಯ ಸಂಕಲ್ಪ
ಪದಗ್ರಹಣದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮೇಯರ್ ವಿ.ವಿ. ರಾಜೇಶ ಅವರು, “ಮುಂದಿನ ಐದು ವರ್ಷಗಳಲ್ಲಿ ತಿರುವನಂತಪುರಂ ನಗರವನ್ನು ದೇಶದ ಟಾಪ್ 3 ಅಭಿವೃದ್ಧಿ ಹೊಂದಿದ ನಗರಗಳಲ್ಲಿ ಒಂದನ್ನಾಗಿ ಮಾಡುತ್ತೇವೆ. ರಾಜಕೀಯ ಭೇದಭಾವವಿಲ್ಲದೆ ಎಲ್ಲಾ 101 ವಾರ್ಡ್‌ಗಳ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ 45 ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡಿ ಹೊಸ ಯೋಜನೆಗಳನ್ನು ಘೋಷಿಸಲಿದ್ದಾರೆ ಎಂದರು.
ಮೇಯರ್ ಸ್ಥಾನದ ರೇಸ್‌ನಲ್ಲಿದ್ದ ಶ್ರೀಲೇಖಾ ಅವರು ಪ್ರಮಾಣ ವಚನ ಕಾರ್ಯಕ್ರಮದ ಬಳಿಕ ಅಸಮಾಧಾನದಿಂದ ಹೊರನಡೆದರು ಎಂದು ವರದಿಯಾಗಿದೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ರಾಜೇಶ ಅವರು ಕಾರ್ಯಕ್ರಮ ಮುಗಿದ ಕೂಡಲೇ ಶ್ರೀಲೇಖಾ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು.

ಪ್ರಮುಖ ಸುದ್ದಿ :-   ಭಾರತೀಯ ಭೂಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ ಸೇಥ್ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement