ಭಾರತೀಯ ಸಂಪ್ರದಾಯದ ಪ್ರಕಾರ, ಮಗುವಿನ ಹೆಸರು ಮಹತ್ವ ಹೊಂದಿರುತ್ತದೆ. ಆದ್ದರಿಂದ, ಸರಿಯಾದ ಹೆಸರನ್ನು ಆಯ್ಕೆ ಮಾಡಲು ಸಾಕಷ್ಟು ಯೋಚನೆ ಮಾಡುತ್ತಾರೆ.
ಆದರೆ, ಇಂಡೋನೇಷ್ಯಾದ ಒಬ್ಬ ತಂದೆ ತಮ್ಮ ಮಗುವಿಗೆ ಹೆಸರಿಡುವಲ್ಲಿ ಸಂಪೂರ್ಣ ವಿಭಿನ್ನ ಮಾರ್ಗವನ್ನು ಅನುಸರಿಸಿದ್ದಾರೆ. ಅವರು ಕೇವಲ ತಮ್ಮ ಮನಸ್ಸಿಗೆ ಬಂದ ಹೆಸರನ್ನು ಆರಿಸಿಕೊಂಡಿದ್ದು, ಅದು ಈಗ ಗಮನಸೆಳೆಯಲು ಕಾರಣವಾಗಿದೆ. ಈ ಬಾಲಕ ತನ್ನ ಅಸಾಮಾನ್ಯ ಹೆಸರಿನಿಂದಾಗಿ 2021 ರಲ್ಲಿ ಸಾಕಷ್ಟು ಗಮನ ಸೆಳೆದಿದ್ದ. ಆ ಸಮಯದಲ್ಲಿ ಅವನಿಗೆ 12 ವರ್ಷ ವಯಸ್ಸಾಗಿತ್ತು, ಮತ್ತು ಈಗಲೂ ವಿಲಕ್ಷಣ ಹೆಸರುಗಳ ಕುರಿತು ಚರ್ಚೆ ನಡೆದಾಗಲೆಲ್ಲಾ ಇವನ ಹೆಸರು ಪ್ರಸ್ತಾಪವಾಗುತ್ತದೆ.
ಹೆಡ್‌ಲೈನ್ ಪಡೆದ ವಿಚಿತ್ರ ಹೆಸರು
ಇಂಡೋನೇಷ್ಯಾದ ದಕ್ಷಿಣ ಸುಮಾತ್ರಾ ಪ್ರಾಂತ್ಯಕ್ಕೆ ಸೇರಿದ ಈ ಬಾಲಕನ ಹೆಸರು ಕೇಳಿದರೆ ಬಹುತೇಕರು ಅಚ್ಚರಿಯಾಗುತ್ತದೆ, ಅನೇಕರಿಗೆ ನಗು ಬರಬಹುದು. ಯಾಕೆಂದರೆ ಈ ಬಾಲಕನಿಗೆ ABCDEF GHIJK ಎಂದು ಹೆಸರಿಡಲಾಗಿದೆ. ಇದು ಇಂಗ್ಲಿಷ್ ವರ್ಣಮಾಲೆಯ ಮೊದಲ ಹನ್ನೊಂದು ಅಕ್ಷರಗಳು..! ದಕ್ಷಿಣ ಸುಮಾತ್ರಾ ಪ್ರಾಂತ್ಯದ ಮುರಾ ಎನಿಮ್ ಜಿಲ್ಲೆಯಲ್ಲಿ ಪೊಲೀಸರು ಆಯೋಜಿಸಿದ್ದ ಲಸಿಕೆ ಅಭಿಯಾನಕ್ಕೆ ಬಾಲಕ ಹಾಜರಾದಾಗ ಈ ಅಸಾಮಾನ್ಯ ಹೆಸರು ಭಾರೀ ಸುದ್ದಿಯಾಗಿತ್ತು.
ಆರಂಭದಲ್ಲಿ, ಆರೋಗ್ಯ ಕಾರ್ಯಕರ್ತರು ರಿಜಿಸ್ಟರ್‌ನಲ್ಲಿ ಈತನ ಹೆಸರನ್ನು ನೋಡಿದಾಗ ಅದನ್ನು ಕೇವಲ ತಮಾಷೆ ಎಂದು ಭಾವಿಸಿದ್ದರು. ಆದರೆ, ಆತನ ಗುರುತಿನ ಚೀಟಿ ಮತ್ತು ಶಾಲಾ ಸಮವಸ್ತ್ರದ ಮೇಲೆಯೂ ಅದೇ ಹೆಸರು ಮುದ್ರಿಸಿರುವುದನ್ನು ನೋಡಿ ಅವರು ದಂಗಾದರು. ಆತನ ದಾಖಲೆಗಳು ಮತ್ತು ಹೆಸರು ಪಟ್ಟಿಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದಾಗ, ಪ್ರತಿಕ್ರಿಯೆಗಳು ವಿನೋದದಿಂದ ಹಿಡಿದು ಟೀಕೆಯವರೆಗೆ ಇದ್ದವು, ಕೆಲವರು ಈ ಹೆಸರನ್ನು ಮಗುವಿಗೆ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.
ಸ್ಥಳೀಯ ವೆಬ್‌ಸೈಟ್ ಲಿಪುತನ್ 6 ವರದಿಯ ಪ್ರಕಾರ, ಈ ಬಾಲಕ ಜೂನಿಯರ್ ಹೈಸ್ಕೂಲ್‌ನಲ್ಲಿ ಓದುತ್ತಿದ್ದಾನೆ ಮತ್ತು ಆರಂಭದಲ್ಲಿ ಸಹಪಾಠಿಗಳು ತನ್ನ ಹೆಸರಿನ ಬಗ್ಗೆ ತಮಾಷೆ ಮಾಡುತ್ತಿದ್ದರು ಎಂದು ಈತ ಒಪ್ಪಿಕೊಂಡಿದ್ದಾನೆ. ಆದಾಗ್ಯೂ, ಕಾಲಾನಂತರದಲ್ಲಿ, ಅವನು ಅದನ್ನು ಹೆಮ್ಮೆಯಿಂದ ಸ್ವೀಕರಿಸಲು ಕಲಿತಿದ್ದಾನೆ ಮತ್ತು ಸುಲಭವಾಗಿ ಹಾಗೂ ಶಾರ್ಟ್ ಆಗಿ ತನ್ನ ಹೆಸರನ್ನು “ಆಡೆಫ್” ಎಂದು ಕರೆಸಿಕೊಳ್ಳಲು ಬಯಸುತ್ತಾನೆ.
ವಿಚಿತ್ರ ಹೆಸರನ್ನು ಹೇಗೆ ಇಡಲಾಯ್ತು..?
ಈ ಹೆಸರಿನ ಹಿಂದಿನ ಕಥೆಯು ಅಷ್ಟೇ ಆಸಕ್ತಿದಾಯಕವಾಗಿದೆ. ಬಾಲಕನ ತಂದೆ ಜುಲ್ಫಾಹ್ಮಿ ಅವರು ಮಾಧ್ಯಮಕ್ಕೆ ತಿಳಿಸಿದ ಪ್ರಕಾರ, ತಮ್ಮ ಮಗ ಜನಿಸಿಉವ ಆರು ವರ್ಷಗಳ ಮೊದಲೇ ಈ ಕಲ್ಪನೆ ಅವರಿಗೆ ಬಂದಿತ್ತಂತೆ. ಇಂಗ್ಲಿಷ್ ಭಾಷೆ ಮತ್ತು ಕ್ರಾಸ್‌ವರ್ಡ್ ಒಗಟುಗಳ ಬಗ್ಗೆ ಆಸಕ್ತಿ ಹೊಂದಿದ್ದ ಜುಲ್ಫಾಹ್ಮಿ ಅವರಿಗೆ ಲೇಖಕರಾಗುವ ಕನಸಿತ್ತು. ವರ್ಣಮಾಲೆಯ ಬಗ್ಗೆ ಇದ್ದ ಈ ವ್ಯಾಮೋಹವೇ ತಮ್ಮ ಮಕ್ಕಳಿಗೆ ಅದೇ ರೀತಿಯಲ್ಲಿ ಹೆಸರಿಡಲು ಸ್ಫೂರ್ತಿ ನೀಡಿತಂತೆ.
ತಮ್ಮ ಪತ್ನಿ ಒಪ್ಪಿದ್ದರೆ, ತಮ್ಮ ಎರಡನೇ ಮಗುವಿಗೆ “NOPQ RSTUV” ಮತ್ತು ಮೂರನೇ ಮಗುವಿಗೆ “XYZ” ಎಂದು ಹೆಸರಿಡುತ್ತಿದ್ದೆ ಎಂದು ಅವರು ಹೇಳಿದ್ದಾರೆ. ಆದರೆ, ಅವರ ಇತರ ಇಬ್ಬರು ಗಂಡು ಮಕ್ಕಳಿಗೆ ಹೆಚ್ಚು ಸಾಂಪ್ರದಾಯಿಕ ಹೆಸರುಗಳಾದ ಅಮ್ಮಾರ್ ಮತ್ತು ಅತ್ತೂರ್ ಎಂದು ಹೆಸರಿಸಲಾಗಿದೆ.
ಬಾಲಕನ ಪೂರ್ಣ ಹೆಸರು ABCDEF GHIJK ಝುಝು ಎಂದಾಗಿದೆ. ಇದರಲ್ಲಿ “ಝುಝು” ಎಂಬುದು ಆತನ ತಾಯಿ-ತಂದೆ ಜುಹ್ರೋ ಮತ್ತು ಜುಲ್ಫಾಹ್ಮಿ ಅವರ ಹೆಸರುಗಳ ಸಂಯೋಜನೆಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ