ಮನೆಯಲ್ಲಿ ಪೈಪಡ್ ಗ್ಯಾಸ್ (PNG) ಸಂಪರ್ಕ ಇರುವವರಿಗೆ ಇನ್ಮುಂದೆ ಎಲ್‌ಪಿಜಿ ಸಿಲಿಂಡರ್ ಇಲ್ಲ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಜಾಗತಿಕ ಅನಿಲ ಮತ್ತು ತೈಲ ಸಾಗಣೆಯಲ್ಲಿ ಉಂಟಾಗಿರುವ ವ್ಯತ್ಯಯವನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ‘ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (ಪೂರೈಕೆ ಮತ್ತು ವಿತರಣೆಯ ನಿಯಂತ್ರಣ) ಆದೇಶ’ಕ್ಕೆ ತಿದ್ದುಪಡಿ ತಂದಿದೆ. ಇದರನ್ವಯ, ಈಗಾಗಲೇ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಸಂಪರ್ಕ ಹೊಂದಿರುವ ಮನೆಗಳಿಗೆ ಹೊಸ ಎಲ್‌ಪಿಜಿ (LPG) ಸಂಪರ್ಕ ಮತ್ತು ರೀಫಿಲ್‌ಗಳನ್ನು ನಿಷೇಧಿಸಲಾಗಿದೆ.
ಪರಿಷ್ಕೃತ ನಿಯಮಗಳ ಪ್ರಕಾರ, ಪಿಎನ್‌ಜಿ ಸಂಪರ್ಕವಿರುವ ಮನೆಗಳು ಇನ್ನು ಮುಂದೆ ಹೊಸ ಎಲ್‌ಪಿಜಿ ಸಂಪರ್ಕ ಪಡೆಯಲು ಅಥವಾ ಸಿಲಿಂಡರ್ ತುಂಬಿಸಲು (ರೀಫಿಲ್) ಅರ್ಹರಾಗಿರುವುದಿಲ್ಲ. ಇಂತಹ ಮನೆಗಳಿಗೆ ಎಲ್‌ಪಿಜಿ ಸಂಪರ್ಕ ನೀಡದಂತೆ ಅಥವಾ ಸಿಲಿಂಡರ್ ರೀಫಿಲ್ ಮಾಡದಂತೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ನಿರ್ಬಂಧ ಹೇರಿದೆ.

ಭಾರತವು ವಿಶ್ವದ ಎರಡನೇ ಅತಿದೊಡ್ಡ ಎಲ್‌ಪಿಜಿ ಬಳಕೆಯ ರಾಷ್ಟ್ರವಾಗಿದ್ದು, ತನ್ನ ಅಗತ್ಯದ ಸುಮಾರು 90% ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿದ ನಂತರ, ವಿಶ್ವದ ಅತ್ಯಂತ ನಿರ್ಣಾಯಕ ಕಡಲ ಮಾರ್ಗಗಳಲ್ಲಿ ಒಂದಾದ ‘ಹಾರ್ಮುಜ್ ಜಲಸಂಧಿ’ಯನ್ನು ಬಂದ್ ಆಗಿದೆ. ಇದರಿಂದಾಗಿ ಪಶ್ಚಿಮ ಏಷ್ಯಾದಿಂದ ಪೂರೈಕೆಯಾಗುವ ಇಂಧನ ಹಾಗೂ ಅನಿಲ ಸಾಗಣೆಯ ಮೇಲೆ ಪರಿಣಾಮ ಬೀರಿದೆ.
ಇದುವರೆಗೆ ಯಾವುದೇ ಎಲ್‌ಪಿಜಿ ದಾಸ್ತಾನು ಕೇಂದ್ರಗಳು ಖಾಲಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ. ಆದರೆ, ಜನರು ಆತಂಕಕ್ಕೊಳಗಾಗಿ ಹೆಚ್ಚಿನ ಪ್ರಮಾಣದಲ್ಲಿ ಸಿಲಿಂಡರ್‌ಗಳನ್ನು ಖರೀದಿಸುತ್ತಿರುವುದು (Panic buying) ಪೂರೈಕೆಯ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ಪರ್ಯಾಯ ಮೂಲಗಳ ಹುಡುಕಾಟದಲ್ಲಿ ಭಾರತ
ಪಶ್ಚಿಮ ಏಷ್ಯಾದ ಸಂಘರ್ಷದ ಸಮಯದಲ್ಲಿ ಸ್ಥಿರವಾದ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಭಾರತವು ಅಮೆರಿಕ, ನಾರ್ವೆ, ಕೆನಡಾ, ಆಲ್ಜೀರಿಯಾ ಮತ್ತು ರಷ್ಯಾ ಸೇರಿದಂತೆ ಹಲವು ದೇಶಗಳಿಂದ ಹೆಚ್ಚುವರಿ ಎಲ್‌ಪಿಜಿ ಕಾರ್ಗೋಗಳನ್ನು ಪಡೆಯಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ ಸಿಂಗ್ ಪುರಿ ಇತ್ತೀಚೆಗೆ ಲೋಕಸಭೆಗೆ ತಿಳಿಸಿದರು.
ತೈಲ ಸಂಸ್ಕರಣಾಗಾರಗಳಿಗೆ ಉತ್ಪಾದನೆಯನ್ನು ಗರಿಷ್ಠಗೊಳಿಸಲು ಸರ್ಕಾರ ಸೂಚನೆ ನೀಡಿದ್ದು, ಇದರಿಂದಾಗಿ ದೇಶೀಯ ಉತ್ಪಾದನೆಯಲ್ಲಿ 28% ಹೆಚ್ಚಳವಾಗಿದೆ ಎಂದು ಅವರು ಹೇಳಿದರು. ಕೆಲವು ಪ್ರದೇಶಗಳಲ್ಲಿ ಕಂಡುಬಂದ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯು ಮುಖ್ಯವಾಗಿ ಆತಂಕದ ಖರೀದಿಯಿಂದ ಉಂಟಾಗಿದ್ದೇ ಹೊರತು ಬೇರೇನಲ್ಲ, ಹೀಗಾಗಿ ಸಾರ್ವಜನಿಕರು ಗಾಬರಿಯಾಗಬಾರದು ಎಂದು ಅವರು ಮನವಿ ಮಾಡಿದ್ದಾರೆ.

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಪರಿಣಾಮ
ವಿಶ್ವದ ಒಟ್ಟು ತೈಲ ವ್ಯಾಪಾರದ ಸುಮಾರು ಐದನೇ ಒಂದು ಭಾಗದಷ್ಟು ಹಾದುಹೋಗುವ ‘ಹಾರ್ಮುಜ್ ಜಲಸಂಧಿ’ಯನ್ನು ಅಮೆರಿಕ ಮತ್ತು ಇಸ್ರೇಲ್‌ನ ಸಂಯೋಜಿತ ದಾಳಿಯ ನಂತರ ಇರಾನ್ ಮುಚ್ಚಿದೆ.
ಈ ಮಧ್ಯೆ, ಭಾರತೀಯ ನೌಕಾಯಾನ ನಿಗಮಕ್ಕೆ (Shipping Corporation of India) ಸೇರಿದ ಭಾರತದ ಧ್ವಜವಿರುವ ಎರಡು ಎಲ್‌ಪಿಜಿ ಟ್ಯಾಂಕರ್‌ಗಳಾದ ‘ಶಿವಲಿಕ’ ಮತ್ತು ‘ನಂದಾದೇವಿ’, ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದ್ದು ಈಗ ಭಾರತದತ್ತ ಸಾಗುತ್ತಿವೆ. ಭಾರತ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಮಾತುಕತೆಯ ನಂತರ ಈ ಹಡಗುಗಳ ಸಂಚಾರ ಸಾಧ್ಯವಾಗಿದೆ. ಈ ಹಡಗುಗಳು ಕ್ರಮವಾಗಿ ಮಾರ್ಚ್ 16 ಮತ್ತು ಮಾರ್ಚ್ 17 ರಂದು ಮುದ್ರಾ ಮತ್ತು ಕಾಂಡ್ಲಾ ಬಂದರುಗಳನ್ನು ತಲುಪುವ ನಿರೀಕ್ಷೆಯಿದೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement